
ಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕದಲ್ಲಿ 10,365 ಲಿಂಗತ್ವ ಅಲ್ಪಸಂಖ್ಯಾತರು ಇದ್ದು, ಅವರ ಅಭಿವೃದ್ಧಿಗೆ ‘ಲಿಂಗತ್ವ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ದಿ ಮಂಡಳಿ’ ಸ್ಥಾಪಿಸುವಂತೆ ಸಮೀಕ್ಷಾ ವರದಿ ಶಿಫಾರಸು ಮಾಡಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಅವಲೋಕನಕ್ಕಾಗಿ 2025–26ನೇ ಸಾಲಿನಲ್ಲಿ ಸಮೀಕ್ಷೆ ಕೈಗೊಂಡಿತ್ತು. ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲೂ ಕೈಗೊಂಡಿದ್ದ ಸಮೀಕ್ಷಾ ವರದಿಯನ್ನು ಶನಿವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಲಿಂಗತ್ವ ಅಲ್ಪಸಂಖ್ಯಾತರು ಎದುರಿಸುವ ಸಮಸ್ಯೆಗಳಾದ ಭಯ, ಅವಮಾನ, ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಖಿನ್ನತೆ, ಆತ್ಮಹತ್ಯಾ ಪ್ರವೃತ್ತಿಗಳಿಂದ ಅವರನ್ನು ಹೊರತರಲು, ಕಿರುಕುಳಕ್ಕೆ ಒಳಗಾಗುವುದನ್ನು ತಪ್ಪಿಸಲು, ಸಮಾಜದಿಂದ ದೂರ ಉಳಿದಿರುವ ಅವರಿಗೆ ನೆಲೆ ಕಲ್ಪಿಸುವುದು ಹಾಗೂ ಅವರನ್ನು ಮುಖ್ಯವಾಹಿನಿಗೆ ತರುವುದು ಸಮೀಕ್ಷೆಯ ಮೂಲ ಉದ್ದೇಶವಾಗಿದೆ.
ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿ ಒದಗಿಸಲು ಸಮುದಾಯದ ಜನಸಂಖ್ಯೆ, ಶೈಕ್ಷಣಿಕ ಮಟ್ಟ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಖಚಿತ ಮಾಹಿತಿ ಸರ್ಕಾರದ ಬಳಿ ಇರಲಿಲ್ಲ. ಮಾಹಿತಿ ಕೊರತೆಯು ಸಾಮಾಜಿಕ ನ್ಯಾಯ ಸ್ಥಾಪನೆ ಹಾಗೂ ಸಬಲೀಕರಣಕ್ಕೆ ಅಡ್ಡಿಯಾಗಿತ್ತು. ವಿವಿಧ ಇಲಾಖೆಗಳ ಯೋಜನೆಗಳಲ್ಲಿ ಈ ವರ್ಗದವರ ಕಲ್ಯಾಣಕ್ಕೆ ಮೂಲ ದತ್ತಾಂಶ ಒದಗಿಸಲು ಸಮೀಕ್ಷೆ ಹಮ್ಮಿಕೊಳ್ಳಲಾಗಿತ್ತು.
ಸಾಮಾಜಿಕ ಸ್ಥಿತಿಗತಿ, ಶೈಕ್ಷಣಿಕ ಮಾಹಿತಿ, ವಾಸ ಸ್ಥಳ, ವಲಸೆ ಮಾಹಿತಿ, ಕುಟುಂಬದವರಿಂದ ಸ್ವೀಕಾರ, ಕುಟುಂಬದ ಮೇಲಿನ ಅವಲಂಬನೆ, ಉದ್ಯೋಗ ಮತ್ತು ಆದಾಯ, ಸರ್ಕಾರಿ ಸೌಲಭ್ಯಗಳನ್ನು ಪಡೆದಿರುವ ವಿವರ, ಮನೆ, ನಿವೇಶನ ಹಾಗೂ ಕೃಷಿ ಭೂಮಿ ಹೊಂದಿರುವ ಮಾಹಿತಿ, ಶಸ್ತ್ರ ಚಿಕಿತ್ಸೆಗೊಳಗಾದ ಮಾಹಿತಿ, ಆರೋಗ್ಯದ ಸ್ಥಿತಿಗತಿ, ಕೌಶಲ ತರಬೇತಿ, ವಾಸದ ಮನೆಗಳು ಹಾಗೂ ಮೂಲ ಸೌಕರ್ಯಗಳ ಮಾಹಿತಿಯನ್ನು ಸಮೀಕ್ಷೆಯಲ್ಲಿ ಕಲೆ ಹಾಕಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.