ಬೆಂಗಳೂರು: ಸಾರಿಗೆ ನೌಕರರ ಮುಷ್ಕರಕ್ಕೆ ಮಂಗಳವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆ ಬಸ್‌ಗಳು ರಸ್ತೆಗಿಳಿಯದೇ ಪ್ರಯಾಣಿಕರಿಗೆ ಸಮಸ್ಯೆಯಾದರೆ, ಸಂಜೆಯ ವೇಳೆಗೆ ಬಸ್‌ಗಳ ಸಂಚಾರ ಆರಂಭಗೊಂಡಿದ್ದು, ಪ್ರಯಾಣಿಕರು ನಿರಾಳರಾದರು.
ಕೋಲಾರ, ಹುಬ್ಬಳ್ಳಿಯ ಕೆಲವೆಡೆ ಬಸ್‌ಗಳಿಗೆ ಕಲ್ಲು ತೂರಲಾಗಿದ್ದು, ಗಾಜುಗಳು ಒಡೆದಿವೆ. ಕೊಪ್ಪಳದಲ್ಲಿ ಪ್ರತಿ ಬಸ್‌ಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಭದ್ರತೆ ಒದಗಿಸಲಾಗಿತ್ತು.
ಬಸ್ ಮುಷ್ಕರ ಕಾರಣದಿಂದ ಕೊಪ್ಪಳ ಮತ್ತು ತುಮಕೂರು ವಿಶ್ವವಿದ್ಯಾ
ಲಯವು ಮಂಗಳವಾರ ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಿದವು.
ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ
ಮೈಸೂರು ವರದಿ: ಮೈಸೂರು ಭಾಗದ ಜಿಲ್ಲೆಗಳಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಂಡ್ಯ, ಹಾಸನ ಜಿಲ್ಲೆಯಲ್ಲಿ ಬಸ್‌ಗಳು ರಸ್ತೆಗಿಳಿಯಲಿಲ್ಲ.
ಈ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಉಳಿದ ಜಿಲ್ಲೆಗಳಲ್ಲಿ ಸರ್ಕಾರಿ, ಖಾಸಗಿ ಬಸ್‌ಗಳು ಸಂಚರಿಸಿದವು. ವಿದ್ಯಾರ್ಥಿ
ಗಳಿಗೆ ತೊಂದರೆಯಾಯಿತು. ಕೆಲವೆಡೆ ಶಾಲೆ, ಕಾಲೇಜುಗಳು ಮಧ್ಯಾಹ್ನದ ಬಳಿಕ ರಜೆ ನೀಡಿದ್ದವು.
ಬಸ್‌ಗೆ ಕಲ್ಲು– ಪರೀಕ್ಷೆ ಮುಂದೂಡಿಕೆ
ಕಲಬುರಗಿ ವರದಿ: ಕೊಪ್ಪಳ ಜಿಲ್ಲೆಯ
ಯಲಬುರ್ಗಾದಲ್ಲಿ ಸೋಮವಾರ ರಾತ್ರಿ ಬೆಂಗಳೂರಿಗೆ ಹೊರಟಿದ್ದ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದು ಬಿಟ್ಟರೆ, ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಮುಷ್ಕರ ಬಹತೇಕ ಶಾಂತಿಯುತವಾಗಿತ್ತು.
ಯಲಬುರ್ಗಾದಿಂದ ಬೆಂಗಳೂರಿಗೆ ಹೊರಟಿದ್ದ ಬಸ್‌ಗೆ ಕುಕನೂರು ಸಮೀಪ ಕಿಡಿಗೇಡಿಗಳು ಕಲ್ಲು ತೂರಿದ್ದರಿಂದ ಬಸ್ ಗಾಜು ಒಡೆದಿದೆ. ಮುಂಜಾಗ್ರತೆಯಾಗಿ ಪ್ರತಿ ಬಸ್‌ನಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಭದ್ರತೆ ನೀಡಲಾಯಿತು.
ಬಸ್‌ಗಳ ಸೇವೆ ಇಲ್ಲದ್ದರಿಂದ ಮಂಗಳವಾರ ನಿಗದಿಯಾಗಿದ್ದ ಕೊಪ್ಪಳ ವಿ.ವಿ.ಯ ಸ್ನಾತಕೋತ್ತರ ಪದವಿಯ 2ನೇ ಸೆಮಿಸ್ಟರ್ ಪರೀಕ್ಷೆ ಮುಂದೂಡಲಾಯಿತು.
ಬಸ್‌ಗಳಿಗೆ ಕಲ್ಲು, ಹಾನಿ
ಹುಬ್ಬಳ್ಳಿ ವರದಿ: ಧಾರವಾಡ, ಬಾಗಲಕೋಟೆ, ವಿಜಯಪುರ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಬಹುತೇಕ ಮಂದಿ ಖಾಸಗಿ ಬಸ್‌ಗಳಲ್ಲಿ ಸಂಚರಿಸಿದರು.
ಹುಬ್ಬಳ್ಳಿಯಿಂದ ಹೊಸಪೇಟೆಗೆ ಹೊರಟಿದ್ದ ಬಸ್‌ಗೆ ಗದಗ ಬಳಿ ಮುಖಕ್ಕೆ ಮಾಸ್ಕ್ ಧರಿಸಿದ್ದ ಕಿಡಿಗೇಡಿಗಳು ಕಲ್ಲು ತೂರಿದರು. ವಿದ್ಯಾನಗರದ ಗ್ರಾಮಾಂತರ ಘಟಕಕ್ಕೆ ಸೇರಿದ ಒಂದು ಬಸ್‌ಗೆ ಕಿಡಿಗೇಡಿಗಳು ಕಲ್ಲು ಎಸೆದು, ಗಾಜು ಜಖಂಗೊಳಿಸಿದರು.
ಕೋಲಾರ ವರದಿ: ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಿಡಿಗೇಡಿಗಳ ಗುಂಪೊಂದು ಕಲ್ಲು ಎಸೆದಿದ್ದು, ಕಿಟಕಿಯ ಗಾಜುಗಳು ಪುಡಿಯಾಗಿವೆ.
ಕೋಲಾರ ತಾಲ್ಲೂಕಿನ ಹರಟಿ ಗೇಟ್ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ಕೆಲವರು ಬೇತಮಂಗಲದಿಂದ ಕೋಲಾರದತ್ತ ಹೊರಟಿದ್ದ ಬಸ್ ಮೇಲೆ ಕಲ್ಲು ತೂರಿದರು. ಚಾಲಕನ ಮುಂದಿನ ಗಾಜು ಒಡೆದಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾರಿಗೆ ನೌಕರರ ಜತೆ ಮಾತುಕತೆಗೆ ಬಿಜೆಪಿ ಆಗ್ರಹ
‘ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರ ಸಮಸ್ಯೆಗಳನ್ನು ಬಗೆಹರಿಸಿ, ಅವರ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ನೌಕರರ ಜತೆ ಮಾತುಕತೆ ನಡೆಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಾರಿಗೆ ನೌಕರರ ಮುಷ್ಕರದಿಂದಾಗಿ ಸಾರ್ವಜನಿಕರು ಮತ್ತು ಶಾಲಾ– ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ’ ಎಂದರು.
‘ಗ್ಯಾರಂಟಿ’ ಯೋಜನೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಬಸ್‌ಗಳ ಸಂಖ್ಯೆಯನ್ನೂ ಕಡಿಮೆ ಮಾಡಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಸಾರಿಗೆ ಸಂಸ್ಥೆಗಳ ನೌಕರರಿಗೆ ವೇತನ ಕೊಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರಿಗೆ ಸಂಸ್ಥೆಗಳ ಆರ್ಥಿಕ ಸಮಸ್ಯೆ ಉಲ್ಬಣಿಸಿದ್ದು, ಇದರಿಂದಾಗಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ದೂರಿದರು.
ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ‘ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಅಧಿಕಾರಕ್ಕೆ ಬಂದ ದಿನವೇ ಸಾರಿಗೆ ನೌಕರರ ಬಗ್ಗೆ ಆಡಿದ ಮಾತನ್ನು ಮರೆತಿದ್ದಾರೆ. ನೌಕರರ ಸಮಸ್ಯೆ ಪರಿಹರಿಸುವುದಾಗಿ ಸದನದಲ್ಲೂ ಮಾತುಕೊಟ್ಟಿದ್ದರು. ಆದರೆ ಈವರೆಗೆ ಏನೂ ಮಾಡಿಲ್ಲ’ ಎಂದು ಹೇಳಿದರು.
ನೌಕರರ ವೇತನ ಹಿಂಬಾಕಿಯನ್ನೂ ಕೊಡುತ್ತಿಲ್ಲ. ನಿವೃತ್ತರಿಗೆ ಗ್ರಾಚ್ಯುಯಿಟಿ ಮತ್ತಿತರ ಸೌಲಭ್ಯಗಳನ್ನು ಕೊಟ್ಟಿಲ್ಲ. ಖಜಾನೆ ತುಂಬಿ ತುಳುಕುತ್ತಿದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಸಾರಿಗೆ ನೌಕರರ ಸಮಸ್ಯೆಗೆ ಸ್ಪಂದಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಕರಾವಳಿ: ಎಲ್ಲ ಬಸ್ ಸಂಚಾರ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್, ಮಿನಿ ಬಸ್, ಜೀಪುಗಳನ್ನು ನಿಲ್ಲಿಸಲು ಅವಕಾಶ ನೀಡಲಾಗಿತ್ತು. ಅವುಗಳಲ್ಲಿ ಜನ ಪ್ರಯಾಣಿಸಿದರು.
ದಕ್ಷಿಣ ಕನ್ನಡ , ಉಡುಪಿ ಜಿಲ್ಲೆಗಳಲ್ಲಿ ಮುಷ್ಕರ ಪರಿಣಾಮ ಬೀರಲಿಲ್ಲ. ಉಡುಪಿ ,
ಕುಂದಾಪುರ ಬಸ್‌ನಿಲ್ದಾಣಗಳಲ್ಲಿ ಬೆಳಿಗ್ಗೆ 7.30ರ ವರೆಗೆ ಬಸ್ ಸಂಚಾರ ಇರಲಿಲ್ಲ.ನಂತರ ಸಹಜ ಸ್ಥಿತಿಗೆ ಬಂತು ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.