ADVERTISEMENT

ಕ್ಯಾನ್ಸರ್ ಔಷಧ: ಸಂಶೋಧಕರ ಗಮನಕ್ಕೆ ತರದೆ ಹಕ್ಕು ವರ್ಗ

ಕ್ಲಿನಿಕಲ್ ಟ್ರಯಲ್ಸ್‌ ಹಂತದಲ್ಲಿದ್ದ ಯೋಜನೆ; ಪ್ರಾಯೋಜಿಸಿದ ಕಂಪನಿಗೇ ಕೊಟ್ಟ ಕವಿವಿ

ಇ.ಎಸ್.ಸುಧೀಂದ್ರ ಪ್ರಸಾದ್
Published 9 ಸೆಪ್ಟೆಂಬರ್ 2019, 20:15 IST
Last Updated 9 ಸೆಪ್ಟೆಂಬರ್ 2019, 20:15 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ಧಾರವಾಡ: ಯುರೋಪ್ ಪೇಟೆಂಟ್ ಲಭಿಸಿದ್ದ ಕ್ಯಾನ್ಸರ್‌ ಔಷಧ ಸಂಶೋಧನೆಯ ಸಂಪೂರ್ಣ ಹಕ್ಕುಗಳನ್ನು ಸಂಶೋಧನೆ ಮಾಡಿದ ವಿಜ್ಞಾನಿಗಳ ಗಮನಕ್ಕೂತಾರದೆ, ಪ್ರಾಯೋಜಿಸಿದ್ದ ಔಷಧ ಕಂಪನಿಗೆಕರ್ನಾಟಕ ವಿಶ್ವವಿದ್ಯಾಲಯ ವರ್ಗಾಯಿಸುವ ಮೂಲಕ ಸಂಶೋಧಕರಿಗೆ ‘ಶಾಕ್‌’ ನೀಡಿದೆ.

ಕರ್ನಾಟಕ ವಿಶ್ವವಿದ್ಯಾಲಯದ ಜೈವಿಕ ವಿಜ್ಞಾನ ವಿಭಾಗದ ಪ್ರೊ.ಬಿ.ಎಂ.ಸ್ವಾಮಿ ಹಾಗೂ ಡಾ. ಶಶಿಕಲಾ ಇನಾಮದಾರ ದಂಪತಿ ಎರಡು ದಶಕಗಳ ಕಾಲ ಸಂಶೋಧನೆ ನಡೆಸಿ ಕ್ಯಾನ್ಸರ್‌ಗೆ ‘ರಿಕಾಂಬಿನೆಂಟ್‌ ಲೆಕ್ಟಿನ್ಸ್‌’ ಎಂಬ ಔಷಧವನ್ನು ಅಭಿವೃದ್ಧಿಪಡಿಸಿದರು. ಕರುಳು, ಸ್ತನ, ಗರ್ಭಕೋಶದ ಕ್ಯಾನ್ಸರ್‌ಗೆ ಇದರಿಂದ ಚಿಕಿತ್ಸೆ ನೀಡಬಹುದು. ಭಾರತ ಮತ್ತು ಯುರೋಪ್‌ನ ಪೇಟೆಂಟ್ ಪಡೆಯುವಲ್ಲಿ ಈ ಸಂಶೋಧನೆ ಸಫಲವಾಗಿತ್ತು. ಈ ಸಂಶೋಧನೆಯನ್ನು ಮುಂಬೈನ ಯುನಿಕೆಮ್‌ ಔಷಧ ತಯಾರಿಕಾ ಕಂಪನಿ ಪ್ರಾಯೋಜಿಸಿತ್ತು.

2005ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಈ ಕಂಪನಿ, ಸಂಶೋಧನೆಗಾಗಿ ಆರಂಭದಲ್ಲಿ ₹13.25 ಲಕ್ಷ ಅನುದಾನ ನೀಡಿತ್ತು. ಸಂಶೋಧನೆಯ ತಂತ್ರಜ್ಞಾನ ಸಾಮರ್ಥ್ಯ ಕುರಿತು ಐಸಿ2 ಇನ್‌ಸ್ಟಿಟ್ಯೂಟ್‌, ಅಮೆರಿಕದ ಟೆಕ್ಸಾಸ್‌ ವಿಶ್ವವಿದ್ಯಾಲಯ ಹಾಗೂ ಐರೋಪ್ಯ ರಾಷ್ಟ್ರದ ಲಿವರ್‌ಪೂಲ್ ವಿಶ್ವ ವಿದ್ಯಾಲಯಗಳು ತಜ್ಞರ ವರದಿ ನೀಡಿದ್ದವು.

ADVERTISEMENT

‘ಈ ವರದಿಗಳ ಆಧಾರದ ಮೇಲೆ 2013ರಲ್ಲಿ ಸಂಶೋಧನೆ ಮುಂದುವರಿಸಲು ಮತ್ತೆ ₹38 ಲಕ್ಷ ನೆರವು ನೀಡಿತ್ತು. ಇನ್ನೇನು ಕ್ಲಿನಿಕಲ್ ಟ್ರಯಲ್ಸ್‌ಗೆ ಹೋಗುವ ಹಂತದಲ್ಲಿ (ಜೂನ್ 13ರಂದು) ವಿಶ್ವವಿದ್ಯಾಲಯವು ತನ್ನ ಬಳಿ ಇದ್ದ ಎಲ್ಲಾ ಹಕ್ಕುಗಳನ್ನು ಯುನಿಕೆಮ್‌ ಕಂಪನಿಗೆ ವರ್ಗಾಯಿಸಿದೆ. ಇದು ನಮ್ಮ ಗಮನಕ್ಕೆ ತರಲಿಲ್ಲ’ ಎಂದು ಸಂಶೋಧಕರಲ್ಲಿ ಒಬ್ಬರಾದ ಡಾ. ಸ್ವಾಮಿ ಬೇಸರ ವ್ಯಕ್ತಪಡಿಸಿದರು.

‘ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆ ಅನ್ವಯ ಯಾವುದೇ ಸಂಶೋಧನೆಯ ಹಕ್ಕು ಸಂಶೋಧಕರದ್ದೂ ಆಗಿರುತ್ತದೆ. ಆದರೆ ಇಲ್ಲಿ ಸಂಶೋಧನೆಯನ್ನು ಪೇಟೆಂಟ್‌ ಸಹಿತ ವರ್ಗಾಯಿಸುತ್ತಿರುವ ಕುರಿತು ಕನಿಷ್ಠ ಮಾಹಿತಿಯನ್ನೂ ವಿಶ್ವವಿದ್ಯಾಲಯ ನೀಡಿಲ್ಲ. ಇದೊಂದು ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿತ್ತು. ಕ್ಲಿನಿಕಲ್ ಟ್ರಯಲ್ಸ್‌ ಹಂತಕ್ಕೆ ಬಂದಿದ್ದ ಸಂಶೋಧನೆ ತಯಾರಿಕೆ ಹಂತಕ್ಕೆ ಹೋಗಿದ್ದಲ್ಲಿ, ವಿಶ್ವವಿದ್ಯಾಲಯಕ್ಕೆ ನಿರಂತರವಾಗಿ ರಾಯಧನ ಸಿಗುತ್ತಿತ್ತು. ಇದರ ಬದಲಿಗೆ ₹2.5 ಕೋಟಿ ಮೊತ್ತದ ಪ್ರಾಣಿ ಗೃಹ (ಪ್ರಾಣಿಗಳ ಮೇಲೆ ಸಂಶೋಧನೆ ನಡೆಸಲು ಅನುವಾಗುವ ಪ್ರಯೋಗಾಲಯ)ವನ್ನು ಯುನಿಕೆಮ್‌ನಿಂದ ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಅವರು ಆರೋಪಿಸಿದರು.

‘ಸಂಶೋಧನೆ ವರ್ಗಾವಣೆ ಕುರಿತು ವಿ.ವಿ ಶೈಕ್ಷಣಿಕ ಮಂಡಳಿಯಲ್ಲೂ ಚರ್ಚೆಯಾಗಿಲ್ಲ. ಹಾಗೆಯೇ ಸಿಂಡಿಕೇಟ್‌ನಲ್ಲೂ ಚರ್ಚೆಯಾಗಿಲ್ಲ. ಜೂನ್ 7ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಯುನಿಕೆಮ್‌ ಕಂಪನಿ ಪ್ರಾಣಿ ಗೃಹ ನಿರ್ಮಿಸಿಕೊಡುವ ಕುರಿತು ಚರ್ಚೆ ಎಂದಷ್ಟೇ ಇತ್ತು. ಹೀಗಾಗಿ ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕಿದೆ’ ಎಂದು ಡಾ.ಸ್ವಾಮಿ ಅಭಿಪ್ರಾಯಪಟ್ಟರು.

ಕೆಲ ವರ್ಷಗಳ ಹಿಂದೆ ಪೊಟೆನ್ಶಿಯಲ್ ಆಫ್ ಎಕ್ಸಲೆನ್ಸ್ ಅಡಿಯಲ್ಲಿ ಯುಜಿಸಿಯು ₹50 ಕೋಟಿ ನೀಡಿತ್ತು. ಅದರಲ್ಲಿನ ₹1.15 ಕೋಟಿ ಮೊತ್ತವನ್ನು ‘ಪ್ರಾಣಿ ಗೃಹ’ಕ್ಕಾಗಿ ಮೀಸಲಿಡಲಾಗಿತ್ತು. ಈಗ ಅದೇ ಯೋಜನೆಗೆ ಯುನಿಕೆಮ್‌ನಿಂದ ₹2.5 ಕೋಟಿಯನ್ನು ವಿಶ್ವವಿದ್ಯಾಲಯ ಪಡೆಯುತ್ತಿರುವುದೂ ಕೂಡ ಚರ್ಚೆಗೆ ಕಾರಣವಾಗಿದೆ.

* ಈ ಸಂಶೋಧನೆಯಿಂದ ತನಗೇನೂ ಲಾಭವಿಲ್ಲ ಎಂದು ವಿಶ್ವವಿದ್ಯಾಲಯ ಹೇಳಿದೆ. ಹೀಗಿದ್ದರೂ ಇದರ ಯುರೋಪ್ ಪೇಟೆಂಟ್‌ ಅನ್ನು 2026ರವರೆಗೆ ಕಾಪಾಡಲು ಭಾರಿ ಹಣ ನೀಡಲಾಗಿದೆ

-ಡಾ. ಬಿ.ಎಂ. ಸ್ವಾಮಿ, ಸಂಶೋಧಕ

*ನಾನು ಅಧಿಕಾರ ಸ್ವೀಕರಿಸುವ ಮೊದಲೇ ಸಂಶೋಧನೆಯ ವರ್ಗಾವಣೆ ಪ್ರಕ್ರಿಯೆ ನಡೆದಿದೆ. ಹೀಗಾಗಿ ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ

-ಡಾ. ಶಿರಾಳಶೆಟ್ಟಿ, ಪ್ರಭಾರ ಕುಲಪತಿ, ಕರ್ನಾಟಕ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.