ADVERTISEMENT

ಪಠ್ಯ ಪರಿಷ್ಕರಣೆ: ಇಲಾಖೆ ಮುಖ್ಯಸ್ಥರಿಗೆ ಲೇಖಕರ ಪತ್ರ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 20:00 IST
Last Updated 14 ಜೂನ್ 2022, 20:00 IST
   

ಬೆಂಗಳೂರು: ಪಠ್ಯ ಪರಿಷ್ಕರಣೆ ಕುರಿತು ಎದ್ದಿರುವ ವಿವಾದಗಳ ಕುರಿತು ಐದು ಪ್ರಶ್ನೆಗಳನ್ನು ಎತ್ತಿರುವ ನಾಡಿನ ಸಾಹಿತಿಗಳು, ಪ್ರಗತಿಪರ ಹೋರಾಟಗಾರರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಜಾಗೃತ ನಾಗರಿಕರು ಕರ್ನಾಟಕ ವೇದಿಕೆಯ ಪರವಾಗಿ ಪ್ರಶ್ನೆಗಳನ್ನು ಕೇಳಿರುವ ಈ ಪತ್ರಕ್ಕೆ ಕೆ.ಮರುಳ
ಸಿದ್ಧಪ್ಪ, ಜಿ. ರಾಮಕೃಷ್ಣ, ವಿಜಯಾ, ಕುಂ. ವೀರಭದ್ರಪ್ಪ, ಪುರುಷೋತ್ತಮ ಬಿಳಿಮಲೆ, ರಾಜೇಂದ್ರ ಚೆನ್ನಿ, ರಹಮತ್ ತರೀಕೆರೆ, ಕೆ.ಎಸ್‌. ವಿಮಲಾ, ಇಂದಿರಾ ಕೃಷ್ಣಪ್ಪ, ವಿನಯಾ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ ಸೇರಿದಂತೆ 52 ಜನ ಸಹಿ ಹಾಕಿದ್ದಾರೆ.

ಎಲ್ಲ ವಿವಾದಗಳೂ ಕೊನೆಗೊಳ್ಳುವವರೆಗೂ ಹಳೆಯ ಪಠ್ಯ ಪುಸ್ತಕಗಳನ್ನೇ ಮುಂದುವರಿಸಬೇಕು ಎಂದೂ ಮನವಿ ಮಾಡಿದ್ದಾರೆ.

ADVERTISEMENT

ಪ್ರಶ್ನೆಗಳೇನು?

*ಆರನೇ ತರಗತಿಯ ಪಠ್ಯದ ಕುರಿತು ಪರಿಶೀಲಿಸಿ ವರದಿ ಕೊಡಿ ಎಂದು ರೋಹಿತ್ ಚಕ್ರತೀರ್ಥ ಸಮಿತಿ ನೇಮಿಸ ಲಾಗಿತ್ತು. ಸಮಿತಿಯು ತನ್ನ ವ್ಯಾಪ್ತಿ ಮೀರಿ 1ರಿಂದ 10ನೇ ತರಗತಿಯ ಬರೆಗಿನ ಎಲ್ಲಾ ಪಠ್ಯಗಳನ್ನೂ
ಪರಿಷ್ಕರಿಸಿ ವರದಿ ನೀಡಿದೆ ಎಂಬ ಸಂಗತಿ ಚರ್ಚೆಯಲ್ಲಿದೆ. ಸರ್ಕಾರದ ಆದೇಶವೇ ಇಲ್ಲದೇ ಪಠ್ಯ ಪರಿಷ್ಕರಣೆಗೆ ಅವಕಾಶ ಇದೆಯೇ?

*ಪಠ್ಯದಲ್ಲಿರುವ ಲೋಪದೋಷಗಳನ್ನು ತಿದ್ದುಪಡಿ ಮಾಡಲಾಗುವುದು ಎಂದು ಸಚಿವರ ಹೇಳಿಕೆ ಬಂದ ಮೇಲೂ ಪರಿಷ್ಕೃತ ಪಠ್ಯ ಪುಸ್ತಕದಲ್ಲಿನ ಪಾಠಗಳನ್ನೇ ಬೋಧಿಸಬೇಕೆಂಬ ಸುತ್ತೋಲೆ ಹರಿದಾಡುತ್ತಿದೆ. ಇದು ದ್ವಂದ್ವ ನೀತಿಯಲ್ಲವೇ?

*ನಿಯಮ ಬಾಹಿರವಾಗಿಯೇ ನಡೆದದ್ದಾದರೂ ಮರು ಪರಿಷ್ಕೃತ ಪಠ್ಯ ಪುಸ್ತಕಗಳಲ್ಲಿರುವ ಲೋಪದೋಷಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ಶಿಕ್ಷಣ ಇಲಾಖೆ ಹೇಳಿದ್ದಾಗಿ ವರದಿಯಾಗಿದೆ. ಆಕ್ಷೇಪಣೆ ಸಲ್ಲಿಸುವ ವಿಧಾನ, ಅಂತಿಮ ದಿನಾಂಕದ ಮಾಹಿತಿ ಲಭ್ಯವಿಲ್ಲ. ಅದು ಯಾವಾಗ ಲಭ್ಯ?

*ಒಂದೆಡೆ ತಿದ್ದುಪಡಿ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಮತ್ತೊಂದೆಡೆ ಪಠ್ಯ ಪುಸ್ತಕ ಗಳನ್ನು ವಿತರಿಸಲಾಗುತ್ತದೆ ಎಂದು ವರದಿಯಾಗಿದೆ.
ಈ ಗೊಂದಲಏಕೆ?

*ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಾಥಮಿಕ ಶಿಕ್ಷಣಕ್ಕೂ ಅನ್ವಯಿಸಲು ಸಮಿತಿ ರಚಿಸಲಾಗಿದೆ.ಅದರ
ಶಿಫಾರಸುಗಳಿಗೆ ಅನುಗುಣವಾಗಿ ಮತ್ತೆ ನೀವು ಹೊಸ ಪಠ್ಯಗಳನ್ನು
ರಚಿಸುವವರಿದ್ದೀರಿ. ಹಾಗಿದ್ದೂ ಕೇವಲ ಒಂದು ವರ್ಷಕ್ಕಾಗಿ ಮರು ಪರಿಷ್ಕರಣೆಯ ಅಗತ್ಯವೇನಿತ್ತು?

‘₹ 150 ಕೋಟಿ ಭರಿಸುವವರು ಯಾರು?’

ಕಲಬುರಗಿ: ‘ರೋಹಿತ್ ಚಕ್ರತೀರ್ಥ ಸಮಿತಿ ಮಾಡಿದ ಪಠ್ಯಪುಸ್ತಕ ಪರಿಷ್ಕರಣೆಗೆ ವಿರೋಧ ವ್ಯಕ್ತವಾದ ಕಾರಣ ಕೈಬಿಟ್ಟ ಅಂಶಗಳನ್ನು ಸೇರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹೊಸದಾಗಿ ಪುಸ್ತಕ ಮುದ್ರಿಸಲು ಬೇಕಿರುವ ₹ 150 ಕೋಟಿ ವೆಚ್ಚವನ್ನು ಯಾರು ಭರಿಸುವವರು’ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಇಲ್ಲಿ ಮಂಗಳವಾರ ಸುದ್ದಿಗೋಷ್ಠಿ
ಯಲ್ಲಿ ಪ್ರಶ್ನಿಸಿದ್ದಾರೆ.

ಬರಗೂರು ಸಮಿತಿಯಲ್ಲಿ ತುಕಡೆ ಗ್ಯಾಂಗ್: ಸಚಿವ ನಾಗೇಶ್

ದಾವಣಗೆರೆ: ‘ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ತುಕಡೆ ಗ್ಯಾಂಗ್‌, ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಹಿಂದೆ ಇದೆ. ಜೆಎನ್‌ಯುನ ಅಧ್ಯಾಪಕರೊಬ್ಬರು ಪತ್ರ ಬರೆದಿರುವುದು ಇದಕ್ಕೆ ಸಾಕ್ಷಿ. ಪಾಕಿಸ್ತಾನದ ಧ್ವಜ ಹಾರಿಸುವ ಜನ ಇದರಲ್ಲೂ ಇದ್ದಾರೆ ಎಂಬುದು ಗೊತ್ತಾಗುತ್ತಿದೆ’ ಎಂದು ಶಿಕ್ಷಣ ಸಚಿವಬಿ.ಸಿ. ನಾಗೇಶ್ ಆರೋಪಿಸಿದರು.

ತಾಲ್ಲೂಕಿನ ಹಳೇ ಬಿಸಲೇರಿಯಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಹಿಂದೂ ಸಮಾಜವನ್ನು ಒಡೆಯಲು, ದೇಶ ಇಬ್ಭಾಗ ಮಾಡಲು ತುಕಡೆ ಗ್ಯಾಂಗ್ ಹಿಂದಿನಿಂದಲೂ ಕೆಲಸ ಮಾಡುತ್ತಿತ್ತು. ಅದನ್ನು ನಾವು ಹೇಳುವಾಗ ನಂಬಿರಲಿಲ್ಲ. ಈಗ ಅದು ನಿಜವಾಗಿದೆ’ ಎಂದರು.

‘ಶೇ 75ರಷ್ಟು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಕಾರ್ಯ ಮುಗಿದಿದೆ. ಸಮವಸ್ತ್ರ ವಿತರಣೆಗೆ ಇನ್ನೂ 90 ದಿನ ಬೇಕಾಗುತ್ತದೆ. ಕೋವಿಡ್‌ ಪಿಡುಗಿನ ಕಾಲದಲ್ಲಿ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. 12 ವರ್ಷ ಮೀರಿದ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗಿದೆ. 6ರಿಂದ 12 ವರ್ಷದ ಮಕ್ಕಳಿಗೆ ಲಸಿಕೆ ನೀಡಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದರೆ ಆಗ ಲಸಿಕೆ ನೀಡಲು ಕ್ರಮ ಕೈಗೊಳ್ಳುತ್ತೇವೆ’ ಎಂದರು.

‘ಬಸವಣ್ಣನಿಗೆ ಅವಮಾನಿಸಿಲ್ಲ’

ದಾವಣಗೆರೆ: ‘ಪಠ್ಯದಲ್ಲಿ ಬಸವಣ್ಣನಿಗೆ ಯಾವುದೇ ಅವಮಾನ ಮಾಡಿಲ್ಲ. ಬರಗೂರು ಸಮಿತಿಯ ಪಠ್ಯದಲ್ಲಿ ಏನಿದೆಯೋ ಅದೇ ಈಗಲೂ ಇದೆ. ಜನಿವಾರ ಕಿತ್ತು ಹಾಕಿ ಹೋದರು ಎಂದು ಅಲ್ಲಿತ್ತು. ಉಪನಯನ ಆಗಿ ಹೋದರು ಎಂಬುದು ಇಲ್ಲಿದೆ. ಅದರಲ್ಲಿ ಅವಮಾನ ಅಗುವಂಥದ್ದೇನಿದೆ’ ಎಂದು ನಾಗೇಶ್ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.