ಬೆಂಗಳೂರು: ‘ವಾರಾಣಸಿಯ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ನಡೆದ ಐತಿಹಾಸಿಕ ಕಾವೇರಿ ಆರತಿಯನ್ನು ಮುಂದೆಯೂ ವಾರದಲ್ಲಿ ಮೂರು ದಿನ ನಡೆಸಲಾಗುವುದು. ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮಂಡ್ಯ ಜಿಲ್ಲೆ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿಯನ್ನು ನೆರವೇರಿಸಿದ 55 ಪಂಡಿತರು ಹಾಗೂ ಪುರೋಹಿತರನ್ನು ತಮ್ಮ ಸರ್ಕಾರಿ ನಿವಾಸದಲ್ಲಿ ಶುಕ್ರವಾರ ಸನ್ಮಾನಿಸಿ ಅವರು ಮಾತನಾಡಿದರು.
‘ಪ್ರಯತ್ನಕ್ಕೆ ಸೋಲಾಗಬಹುದು, ಪ್ರಾರ್ಥನೆಗೆ ಸೋಲಾಗುವುದಿಲ್ಲ. ನಾವೆಲ್ಲರೂ ಸೇರಿ ಪ್ರಾರ್ಥನೆ ಸಲ್ಲಿಸೋಣ. ಆರತಿಗಾಗಿ ಸ್ಟೇಡಿಯಂ ಮಾದರಿ ಮಂಟಪ ನಿರ್ಮಾಣ ಮಾಡೋಣ’ ಎಂದರು.
‘ಪ್ರತಿ ಶುಕ್ರವಾರ, ಶನಿವಾರ, ಭಾನುವಾರ ಕಾವೇರಿ ಆರತಿ ನಡೆಯಲಿದೆ. ಇದರಿಂದ ಪುರೋಹಿತರಿಗೆ, ಸ್ಥಳೀಯರಿಗೆ ಉದ್ಯೋಗ ದೊರೆಯುತ್ತದೆ. ನಾನು ಅಥವಾ ಇನ್ಯಾರೋ ಪುರೋಹಿತರಾಗಲು ಸಾಧ್ಯವಿಲ್ಲ. ನೀವೇ ಆ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ. ಬೆಳಿಗ್ಗೆ ಹೊತ್ತು ಭಕ್ತಾದಿಗಳು ಕಾವೇರಿಗೆ ಪೂಜೆ ಸಲ್ಲಿಸುವ ರೀತಿಯಲ್ಲೂ ವ್ಯವಸ್ಥೆ ಮಾಡಲಾಗುವುದು. ವಾರ ಪೂರ್ತಿ ಆರತಿ ಕಾರ್ಯಕ್ರಮ ನಡೆಯಬೇಕು ಎಂಬುದು ನನ್ನ ಆಸೆಯಾಗಿದೆ’ ಎಂದು ಹೇಳಿದರು.
‘ಕಾವೇರಿ ಆರತಿ ಮೂಲಕ ರಾಜ್ಯದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ಕಾವೇರಿ ಮಾತೆಗೆ ಪ್ರಾರ್ಥನೆ ಸಲ್ಲಿಸಲು ಕೆಲವರು ಅಡಚಣೆ ಮಾಡುತ್ತಿದ್ದಾರೆ. ಕಾವೇರಿ ಆರತಿ ಅತ್ಯುತ್ತಮವಾಗಿ ನೆರವೇರಿದೆ. ಏನೇನು ತಪ್ಪುಗಳಾಗಿವೆ ಎಂದು ತಿಳಿದು, ಮುಂದೆ ಯಾವ ರೀತಿಯ ಸಾಂಸ್ಕೃತಿಕ– ಧಾರ್ಮಿಕ ಕೆಲಸಗಳು ನೆರವೇರಬೇಕು ಎಂಬುದನ್ನು ಗಮನಿಸಬೇಕು. ಭಕ್ತಿ ಪ್ರಧಾನವಾಗಿ ಜನರ ಮನಸ್ಸಿಗೆ ಮುಟ್ಟುವಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮ ರೂಪಿಸಬೇಕು’ ಎಂದು ಪಂಡಿತ, ಪುರೋಹಿತರಿಗೆ ತಿಳಿಸಿದರು.
ಶಾಸಕರಾದ ಶಿವಲಿಂಗೇಗೌಡ, ಮಹಾಂತೇಶ್ ಕೌಜಲಗಿ, ಶರತ್ ಬಚ್ಚೇಗೌಡ, ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್, ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ, ಕಾವೇರಿ ನೀರಾವರಿ ನಿಗಮದ ಎಂ.ಡಿ.ಮಹೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.