ADVERTISEMENT

ಕೆಂಪೇಗೌಡ ವಿಮಾನ ನಿಲ್ದಾಣ | ನವೆಂಬರ್‌ನಲ್ಲಿ 2ನೇ ಟರ್ಮಿನಲ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 20:25 IST
Last Updated 18 ಅಕ್ಟೋಬರ್ 2022, 20:25 IST
ಎರಡನೇ ಟರ್ಮಿನಲ್ ಒಳಗಿನ ದೃಶ್ಯ
ಎರಡನೇ ಟರ್ಮಿನಲ್ ಒಳಗಿನ ದೃಶ್ಯ   

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ನಿರ್ಮಿಸಲಾಗಿರುವ ಎರಡನೇ ಟರ್ಮಿನಲ್ ಪ್ರಯಾಣಿಕರ ಬಳಕೆಗೆ ಸಿದ್ಧವಾಗುತ್ತಿದ್ದು, ನವೆಂಬರ್‌ನಲ್ಲಿ ಉದ್ಘಾಟನೆ ಆಗುವ ಸಾಧ್ಯತೆ ಇದೆ.

ಭಾರತ ಹಾಗೂ ಕೇಂದ್ರ ಏಷ್ಯಾ ಪ್ರದೇಶದಲ್ಲಿನ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎನಿಸಿಕೊಂಡಿರುವ ನಿಲ್ದಾಣದಲ್ಲಿ ಸದ್ಯ ಒಂದೇ ಟರ್ಮಿನಲ್ ಇದೆ. ಆದರೆ, ನಿಲ್ದಾಣ ಬಳಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿದೆ. ಹೀಗಾಗಿ, ಪ್ರಯಾಣಿಕರ
ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಎರಡನೇ ಟರ್ಮಿನಲ್ ನಿರ್ಮಿಸಲಾಗಿದೆ.

‘ಎರಡನೇ ಟರ್ಮಿನಲ್ ಹಾಗೂ ಅದಕ್ಕೆ ಅಗತ್ಯವಿರುವ ರಸ್ತೆ ನಿರ್ಮಾಣ ಕಾಮಗಾರಿಯನ್ನು 2018ರಿಂದ ಆರಂಭಿಸಲಾಗಿತ್ತು. ಮೊದಲ ಹಂತದಲ್ಲಿ 2.54 ಲಕ್ಷ ಚದರ ಮೀಟರ್ ಹಾಗೂ ಎರಡನೇ ಹಂತದಲ್ಲಿ 4.41 ಲಕ್ಷ ಚದರ ಮೀಟರ್ ಟರ್ಮಿನಲ್ ಕಟ್ಟಡ ನಿರ್ಮಿಸಲಾಗಿದೆ. ಸುಂದರ ಹಾಗೂ ಅರ್ಥಪೂರ್ಣವಾದ ವಾಸ್ತುಶಿಲ್ಪದ ವಿನ್ಯಾಸವನ್ನು ಕಟ್ಟಡಕ್ಕೆ ನೀಡಲಾಗಿದೆ’ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಒಂದನೇ ಟರ್ಮಿನಲ್‌ಗೆ ಹೋಲಿಸಿದರೆ ಎರಡನೇ ಟರ್ಮಿನಲ್‌ ಸಾಕಷ್ಟು ವಿಶೇಷತೆಗಳನ್ನು ಒಳ ಗೊಂಡಿದೆ. ಪ್ರವೇಶ (ಚೆಕ್‌–ಇನ್‌) ಕೌಂಟರ್‌ಗಳು ಹಾಗೂ ನಿರ್ಗಮನ ಪ್ರದೇಶಗಳು ದೊಡ್ಡದಾಗಿವೆ. ಮಳೆ ನೀರು ಸಂಗ್ರಹಿಸಿ ಮರುಬಳಕೆ ಮಾಡುವ ವ್ಯವಸ್ಥೆ ಇದೆ. ಜೊತೆಗೆ, ಸೋಲಾರ್ ವ್ಯವಸ್ಥೆ ಮೂಲಕ ವಿದ್ಯುತ್ ಬಳಕೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಅವರಿಂದ ಉದ್ಘಾಟನೆ: ‘ಎರಡನೇ ಟರ್ಮಿನಲ್ ಬಳಕೆಗೆ ಮುಕ್ತವಾದರೆ, ಇಡೀ ವಿಶ್ವದಲ್ಲೇ ಸುಸಜ್ಜಿತ ಟರ್ಮಿನಲ್ ಎನಿಸಿಕೊಳ್ಳಲಿದೆ. ಈ ಟರ್ಮಿನಲ್ ಉದ್ಘಾಟಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕೋರಲಾಗಿದ್ದು, ನವೆಂಬರ್ 10 ಅಥವಾ 11ರಂದು ಸಮಯ ನೀಡುವ ನಿರೀಕ್ಷೆ ಇದೆ’ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.