ADVERTISEMENT

ಕೆಂಗಲ್‌ ಕುಟುಂಬದ ಆಸ್ತಿ ವಿವಾದ: ದೂರಿನ ತನಿಖೆಗೆ ಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 16:32 IST
Last Updated 5 ಫೆಬ್ರುವರಿ 2026, 16:32 IST
ಕೋರ್ಟ್ (ಸಾಂದರ್ಭಿಕ ಚಿತ್ರ)
ಕೋರ್ಟ್ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ‘ನನಗೆ ದಕ್ಕಬೇಕಾದ ಸ್ಥಿರಾಸ್ತಿಯ ಕಾನೂನುಬದ್ಧ ಪಾಲನ್ನು ನೀಡದೆ, ನನ್ನ ತಾಯಿ ನನಗೆ ಮೋಸ ಮಾಡಿದ್ದಾರೆ’ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಪುತ್ರಿ ವಿಜಯಲಕ್ಷ್ಮಿ ಅವರ ಜ್ಯೇಷ್ಠ ಪುತ್ರ ಟಿ.ಶ್ರೀಪಾದ ರೇಣು, ತಮ್ಮ ತಾಯಿ ಮತ್ತು ತಮ್ಮಂದಿರೂ ಸೇರಿದಂತೆ ಒಟ್ಟು ಮೂವರ ವಿರುದ್ಧ ದಾಖಲಿಸಿರುವ ಖಾಸಗಿ ದೂರಿನ ತನಿಖೆ ನಡೆಸಲು ನಗರದ ಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಶ್ರೀಪಾದ ರೇಣು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಗರದ 4ನೇ ಎಸಿಜೆಎಂ ಕೋರ್ಟ್‌ ನ್ಯಾಯಾಧೀಶ ಸೋಮನಾಥ್‌ ಅವರು, ‘ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ’ ಎಂದು ಇಂದಿರಾನಗರ ಪೊಲೀಸ್ ಠಾಣೆ ಅಧಿಕಾರಿಗೆ ನಿರ್ದೇಶಿಸಿದ್ದಾರೆ.

ಶ್ರೀಪಾದ ರೇಣು ಪರ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರು, ‘ಟಿ.ಶ್ರೀಪಾದ ರೇಣು ಅವರ ಅಸ್ತಿತ್ವವನ್ನೇ ಮರೆಮಾಚಿ ಅವರಿಗೆ ಕಾನೂನಾತ್ಮಕವಾಗಿ ಸಲ್ಲಬೇಕಾಗಿದ್ದ ಭಾಗವನ್ನು ನೀಡದೆ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ಮಾರಾಟ ಮಾರಾಟ ಮಾಡಲಾಗಿದೆ. ಆದ್ದರಿಂದ, ಮೋಸ ಮಾಡಿ ವಂಚಿಸಿರುವ ಅವರ ತಾಯಿ ಹಾಗೂ ತಮ್ಮಂದಿರ ವಿರುದ್ಧದ ದೂರನ್ನು ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸಲು ಇಂದಿರಾನಗರ ಠಾಣೆ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.

ADVERTISEMENT

ಈ ವಾದಾಂಶವನ್ನು ಮಾನ್ಯ ಮಾಡಿರುವ ನ್ಯಾಯಾಧೀಶರು, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ–1973ರ (ಸಿಆರ್‌ಪಿಸಿ) ಕಲಂ 155(2)ರ ಅಡಿಯಲ್ಲಿ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುವಂತೆ ಇಂದಿರಾನಗರ ಠಾಣೆ ಪೊಲೀಸ್‌ ಅಧಿಕಾರಿಗೆ ನಿರ್ದೇಶಿಸಿದ್ದಾರೆ.

ದೂರಿನಲ್ಲಿ ಏನಿದೆ?: ‘ಇಂದಿರಾನಗರದ ಡಿಫೆನ್ಸ್ ಕಾಲೋನಿಯ ‘ಸೀಡರ್ ಕ್ರೆಸ್ಟ್’ ಅಪಾರ್ಟ್‌ಮೆಂಟ್‌ನಲ್ಲಿ ನಮ್ಮ ತಂದೆ ಖರೀದಿಸಿದ್ದ ಎರಡು ಫ್ಲ್ಯಾಟ್‌ಗಳಿಗೆ ಸಂಬಂಧಿಸಿದಂತೆ ಮೋಸದಿಂದ ಸುಳ್ಳು ಪತ್ರಗಳನ್ನು ಸೃಷ್ಟಿಸಲಾಗಿದೆ. ವಂಶವೃಕ್ಷದಲ್ಲಿ ನನ್ನ ಹೆಸರನ್ನು ತೋರಿಸದೆ, ಕ್ರಯಪತ್ರದಲ್ಲಿ ನನ್ನ ಬಗ್ಗೆ ಯಾವುದೇ ಉಲ್ಲೇಖವನ್ನೂ ಮಾಡದೆ, ಕಪಟತನದಿಂದ ನನಗೆ ದಕ್ಕಬೇಕಾಗಿದ್ದ ಕಾನೂನುಬದ್ಧ ಪಾಲನ್ನು ಲಪಟಾಯಿಸಲಾಗಿದೆ’ ಎಂದು ಶ್ರೀಪಾದ ರೇಣು ದೂರಿನಲ್ಲಿ ತಿಳಿಸಿದ್ದಾರೆ.

‘ಪ್ರಕರಣದ ಆರೋಪಿಗಳಾದ ನನ್ನ ತಾಯಿ ವಿಜಯಲಕ್ಷ್ಮಿ ತಿಮ್ಮಯ್ಯ, ನನ್ನ ತಮ್ಮ ಟಿ.ಕೆಂಗಲ್‌ ಮೂರ್ತಿ, ಎರಡನೇ ತಮ್ಮ ಟಿ.ವೆಂಕಟವರ್ಧನ ಇವರಿಂದ ನಾನು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದೇನೆ. ನಮ್ಮ ಕುಟುಂಬಕ್ಕೆ ಸೇರಿದ ಎಂಟು ಆಸ್ತಿಗಳು ಬೆಂಗಳೂರಿನಲ್ಲಿವೆ. ಇವುಗಳ ಬಗ್ಗೆ ನಮ್ಮ ಪೋಷಕರು ಉಯಿಲು ಪತ್ರ ಬರೆದಿಲ್ಲ. ನಾನು ಆರೋಪಿಗಳಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದ ಕಾರಣಕ್ಕಾಗಿ ಕುಟುಂಬದ ವ್ಯವಹಾರಗಳಲ್ಲಿ ಪಾಲುದಾರನಾಗಿರಲಿಲ್ಲ’ ಎಂದು ವಿವರಿಸಿದ್ದಾರೆ.

‘ನನ್ನ ಪೋಷಕರು, ಅಜ್ಜ ಹಾಗೂ ಅಜ್ಜಿ ತೀರಿಕೊಂಡ ನಂತರವೂ ಈ ಆಸ್ತಿಗಳಲ್ಲಿ ನಾನು ಯಾವತ್ತೂ ನನ್ನ ಪಾಲಿಗೆ ಬರಬೇಕಾದ ಕಾನೂನುಬದ್ಧ ಆಸ್ತಿಯನ್ನು ಕೇಳಿಲ್ಲ. ಕೋರ್ಟ್‌ ಶುಲ್ಕ ಭರ್ತಿಗೆ ಸಂಬಂಧಿಸಿದಂತೆ ಆರೋಪಿಗಳೆಲ್ಲರ ವಿರುದ್ಧ ಹೈಕೋರ್ಟ್‌ನಲ್ಲಿ ಮೊಕದ್ದಮೆ ಬಾಕಿ ಇದೆ. ಈ ಹಂತದಲ್ಲೇ ನನ್ನ ತಾಯಿಯವರು ನನ್ನ ತಮ್ಮಂದಿರ ಜೊತೆಗೂಡಿ ಇಂದಿರಾನಗರದ ಎರಡೂ ಫ್ಲ್ಯಾಟ್‌ಗಳನ್ನು ಸುಮಾರು ₹2 ಕೋಟಿ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ನನಗಾಗಿರುವ ಮೋಸ ಹಾಗೂ ವಂಚನೆಯ ಬಗ್ಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ನಾನು ಪೊಲೀಸರಿಗೆ ದೂರು ನೀಡಿದ್ದೆ. ಆದರೆ, ಈ ದೂರು ಸಿವಿಲ್ ವ್ಯಾಜ್ಯಕ್ಕೆ ಸಂಬಂಧಪಟ್ಟಿದೆ ಎಂಬ ಸಬೂಬಿನ ಹಿಂಬರಹ ನೀಡಿ ಪೊಲೀಸರು ದೂರನ್ನು ದಾಖಲಿಸಿಕೊಂಡಿಲಿಲ್ಲ’ ಎಂದು ಶ್ರೀಪಾದ ರೇಣು ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.