ADVERTISEMENT

ಕಿರ್ಲೋಸ್ಕರ್ ಫೆರೋಸ್‌ನಿಂದ ₹3000 ಕೋಟಿ ಹೂಡಿಕೆ: ಸಚಿವ ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 16:05 IST
Last Updated 4 ನವೆಂಬರ್ 2025, 16:05 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ಬೆಂಗಳೂರು: ಕಿರ್ಲೋಸ್ಕರ್ ಫೆರೋಸ್ ಇಂಡಸ್ಟ್ರೀಸ್‌ ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ₹3,000 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

ರಾಜ್ಯದ ಕೈಗಾರಿಕೆ ಮತ್ತು ವಾಣಿಜ್ಯ ಉನ್ನತಮಟ್ಟದ ನಿಯೋಗದೊಂದಿಗೆ ಪುಣೆಯಲ್ಲಿ ರೋಡ್ ಶೋ ನಡೆಸಿ, ಹೂಡಿಕೆ ಕುರಿತು ಹತ್ತಕ್ಕೂ ಹೆಚ್ಚು ಉದ್ಯಮಿಗಳ ಜತೆ ಅವರು ಮಾತುಕತೆ ನಡೆಸಿದರು.

ರಾಜ್ಯದಲ್ಲಿ ಬಂಡವಾಳ ಹೂಡಲು ವಿಪ್ರೊ ಪ್ಯಾರಿ, ಅಟ್ಲಾಸ್‌ ಕಾಪ್ಕೊ, ಬೆಲ್‌–ರೈಸ್‌ ಇಂಡಸ್ಟ್ರೀಸ್‌, ಫಿನೋಲೆಕ್ಸ್‌ ಮತ್ತು ಫ್ಲೂಯಿಡ್‌ ಕಂಟ್ರೋಲ್ಸ್‌ ಲಿಮಿಟೆಡ್‌ ಉದ್ಯಮಗಳು ಆಸಕ್ತಿ ತೋರಿಸಿವೆ. ಬಂಡವಾಳ ತೊಡಗಿಸಲು ಮುಂದಾಗಿರುವ ಈ ಕಂಪನಿಗಳಿಗೆ ಭೂಮಿ, ಮೂಲಸೌಕರ್ಯ ಮುಂತಾದ ಅನುಕೂಲಗಳ ಜತೆಗೆ ಹೆಚ್ಚಿನ ಸಹಕಾರ ನೀಡಲಾಗುವುದು ಎಂದರು.

ADVERTISEMENT

‘ಕಿರ್ಲೋಸ್ಕರ್ ಫೆರೋಸ್‌ ಈಗಾಗಲೇ ಹಿರಿಯೂರಿನಲ್ಲಿ ತನ್ನ ಘಟಕ ಹೊಂದಿದ್ದು, ಅದನ್ನು ಮೇಲ್ದರ್ಜೆಗೇರಿಸಲು ಮುಂದಾಗಿದೆ. ಇಲ್ಲಿ ಸ್ಪಾಂಜ್ ಪೈಪ್‌ ಉತ್ಪಾದನೆ ಆರಂಭಿಸಲಿದೆ. ಜೊತೆಗೆ ಉಕ್ಕು ಉತ್ಪಾದನಾ ಘಟಕದ ಸಾಮರ್ಥ್ಯ ಹೆಚ್ಚಳ, ಕಬ್ಬಿಣದ ಅದಿರು ಸಂಸ್ಕರಣೆ ಹೆಚ್ಚಳ, ಫೌಂಡ್ರಿ ಘಟಕದ ಅಭಿವೃದ್ದಿ ಮುಂತಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ’ ಎಂದರು.

ಕಿರ್ಲೋಸ್ಕರ್ ಕಂಪನಿಯು 20 ವರ್ಷಗಳಿಂದಲೂ ತನ್ನ ಆದಾಯದಲ್ಲಿ ಶೇ 2 ರಷ್ಟು ಲಾಭಾಂಶವನ್ನು ಸಿಎಸ್‌ಆರ್‌ ನಿಧಿಗೆ ಕೊಡುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿ ಹೊಂದಿದೆ. ವಿಪ್ರೊ ಪ್ಯಾರಿ ಕಂಪನಿಯು ರಾಜ್ಯದಲ್ಲಿ ಎಲೆಕ್ಟ್ರಾನಿಕ್ಸ್‌ ಕಾಪರ್‌ ಲ್ಯಾಮಿನೇಟ್‌ ಉತ್ಪಾದನಾ ಘಟಕವನ್ನು ಆರಂಭಿಸಿದೆ. ದೊಡ್ಡ ಬಳ್ಳಾಪುರದ ಸಮೀಪ ಇರುವ ಆದಿನಾರಾಯಣ ಹೊಸಹಳ್ಳಿಯಲ್ಲಿರುವ ಕೆಐಎಡಿಬಿ ನಿವೇಶನದಲ್ಲಿ ಎರಡು ದಿನಗಳ ಹಿಂದಷ್ಟೇ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇಲ್ಲಿ ಕಂಪನಿಯು ಸ್ಮಾರ್ಟ್‌ ರೊಬೊಟಿಕ್ಸ್‌ ಪ್ರಯೋಗಾಲಯ ಸ್ಥಾಪಿಸಲಿದೆ ಎಂದರು.

ಸಚಿವ ಪಾಟೀಲ ಅವರು ವಿಪ್ರೊ ಪ್ಯಾರಿ ಕಂಪನಿಯ ಸಿಇಒ ವಿಪುಲ್ ಟಂಡನ್‌, ಸಿಎಫ್‌ಒ ಶ್ರೀಪಾದ್ ರಾಮನಾಥನ್‌, ಬೆಲ್‌–ರೈಸ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬಾಡ್ವೆ, ಫ್ಲೂಯಿಡ್‌ ಕಂಟ್ರೋಲ್ಸ್‌ನ ಸಿಇಒ ಡಾ.ತಾನಸೇನ್ ಚೌಧರಿ, ಫಿನೋಲೆಕ್ಸ್ ಇಂಡಸ್ಟ್ರೀಸ್‌ ವ್ಯವಸ್ಥಾಪಕ ನಿರ್ದೇಶಕ ಉದೀಪ್ತ್‌ ಅಗರವಾಲ್ ಅವರೊಂದಿಗೆ ಮಾತುಕತೆ ನಡೆಸಿದರು. ರಾಜ್ಯ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.