ADVERTISEMENT

ಪಿಎಂ ಕಿಸಾನ್‌ ಸಮ್ಮಾನ್‌ಗೆ ಬಂತು ಆ್ಯಪ್‌

ಪಹಣಿಯಲ್ಲಿರುವ ಜಂಟಿ ಸ್ವಾಧೀನದಾರರು ಪ್ರತ್ಯೇಕವಾಗಿಯೇ ಮಾಹಿತಿ ಸಲ್ಲಿಸಬೇಕು

ನಟರಾಜ ನಾಗಸಂದ್ರ
Published 29 ಜೂನ್ 2019, 20:00 IST
Last Updated 29 ಜೂನ್ 2019, 20:00 IST
ಪಿಎಂ ಕಿಸಾನ್‌ ಆಪ್‌
ಪಿಎಂ ಕಿಸಾನ್‌ ಆಪ್‌   

ದೊಡ್ಡಬಳ್ಳಾಪುರ: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಲ್ಲಿ (ಪಿ.ಎಂ.ಕಿಸಾನ್) ರೈತರು ₹6 ಸಾವಿರ ಪಡೆಯಲು ಕಂದಾಯ ಇಲಾಖೆ ಭೂಮಿ ಉಸ್ತುವಾರಿ ಕೋಶದ ಸಹಯೋಗದೊಂದಿಗೆ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಿದೆ ಎಂದು ಬೆಂಗ
ಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ತಿಳಿಸಿದರು.

ಈ ಮೊಬೈಲ್‌ ಆ್ಯಪ್‌ ಅನ್ನು ಗೂಗಲ್‌ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು ಸ್ವಯಂ ದೃಢೀಕರಣ ಪತ್ರದಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿ ಮೊಬೈಲ್‌ ಮೂಲಕವೇ ಫೋಟೊ ತೆಗೆದು ರೈತರೇ ಅಪ್‌ಲೋಡ್ ಮಾಡಬಹುದಾಗಿದೆ ಎಂದರು.

ಆ್ಯಪ್‌ ಅನ್ನು ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಮತ್ತು ರೈತರು ಬಳಸಬಹುದಾಗಿದೆ. ಈ ತಂತ್ರಾಂಶದಲ್ಲಿ ತಮ್ಮ ಜಮೀನು ಇರುವ ಜಿಲ್ಲೆ, ತಾಲ್ಲೂಕು,ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿ ನಂತರ ತಮ್ಮ ಮೊಬೈಲ್ ನಂಬರ್ ಅನ್ನು ದಾಖ
ಲಿಸಿ ಮುಂದುವರಿಯಬೇಕು. ಮುಂದಿನ ಹಂತದಲ್ಲಿ ನಾಲ್ಕು ಸಂಖ್ಯೆಯ ಪಾಸ್‌ವರ್ಡ್‌ ನಂಬರ್ ದಾಖಲಿಸಬೇಕು. ನಂತರ ಗ್ರಾಮವನ್ನು ಆಯ್ಕೆ ಮಾಡಿ ಆಪ್‌ಲೋಡ್ ಎಂಬ ಬಟನ್ ಒತ್ತಬೇಕು.

ADVERTISEMENT

ಈ ಹಂತದಲ್ಲಿ ಗ್ರಾಮಕ್ಕೆ ಸಂಬಂಧಿಸಿದ ಭೂ ದಾಖಲೆಗಳ ವಿವರಗಳು ನೇರವಾಗಿ ಭೂಮಿ ದತ್ತಾಂಶದಿಂದ ಮೊಬೈಲ್‌ಗೆ ಡೌನ್‌ಲೋಡ್ ಆಗುತ್ತದೆ. ಸರ್ವೇ ಸಂಖ್ಯೆ ದಾಖಲಿಸಿ ಸ್ವಾಧೀನದಾರನ ಹೆಸರನ್ನು ಆಯ್ಕೆ ಮಾಡಬೇಕು. ವರ್ಗ, ಸಣ್ಣ, ಅತಿ ಸಣ್ಣ ಹಿಡುವಳಿದಾರ ಮಾಹಿತಿಯನ್ನು ಆಯ್ಕೆ ಮಾಡಿ ದೃಢೀಕರಿಸಿದ ನಂತರ ಆಧಾರ್ ಮಾಹಿತಿಯನ್ನು ದಾಖಲಿಸಬೇಕು ಅಥವಾ ಆಧಾರ್ ಮಾಹಿತಿಯನ್ನು ನೇರವಾಗಿ ಆಧಾರ್ ಕಾರ್ಡ್ ನಲ್ಲಿರುವ ಕ್ಯೂಆರ್‌ ಕೋಡ್ ಅನ್ನು ಮೊಬೈಲ್‌ನಿಂದ ಸ್ಕ್ಯಾನ್ ಮಾಡುವ ಮೂಲಕವು ಸ್ವಯಂಚಾಲಿತವಾಗಿ ಆಧಾರ್ ವಿವರ ದಾಖಲಿಸುವ ಸೌಲಭ್ಯವು ಇದೆ.

ಮೊಬೈಲ್ ಸಂಖ್ಯೆ, ಬ್ಯಾಂಕ್ ವಿವರ, ಐಎಫ್‌ಸಿ ಸಂಖ್ಯೆ ನಮೂದಿಸುವ ಮೂಲಕ ಸ್ವಯಂ ಚಾಲಿತವಾಗಿ ಬ್ಯಾಂಕ್ ಮತ್ತು ಬ್ರಾಂಚ್ ಹೆಸರು ಆಯ್ಕೆಯಾಗುವಂತೆ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಈ ಎಲ್ಲ ಪ್ರಕ್ರಿಯೆಯು ಮುಗಿದ ನಂತರ ದತ್ತಾಂಶವನ್ನು ಉಳಿಸಿ ಮುಂದಿನ ಸರ್ವೇ ನಂಬರ್‌ನ್ನು ದಾಖಲಿಸಬಹುದು. ಅಂತಿಮ ಹಂತದಲ್ಲಿ ಎಲ್ಲ ದತ್ತಾಂಶವನ್ನು ಅಪ್‌ಲೋಡ್‌ ಬಟನ್ ಒತ್ತುವ ಮೂಲಕ ಸಂಗ್ರಹಿಸಿದ ಮಾಹಿತಿ ಮತ್ತು ಛಾಯಾಚಿತ್ರಗಳನ್ನು ಕೇಂದ್ರ ಸರ್ವರ್‌ಗೆ ರವಾನೆಯಾಗಲಿದೆ. ಪಹಣಿಯಲ್ಲಿರುವ ಜಂಟಿ ಸ್ವಾಧೀನದಾರರು ಪ್ರತ್ಯೇಕವಾಗಿಯೇ ಮಾಹಿತಿಯನ್ನು ಸಲ್ಲಿಸಬೇಕು.ರೈತರು ರಾಜ್ಯದಲ್ಲಿ ಯಾವುದೇ ಭಾಗದಲ್ಲಿ ಹೊಂದಿರುವ ಜಮೀನಿನ ವಿವರಗಳನ್ನು ಸಲ್ಲಿಸಬಹುದಾಗಿದೆ.

ಪ್ಲೇಸ್ಟೋರ್‌ ಲಿಂಕ್‌ com.bmc.pmkisankarnataka

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.