ADVERTISEMENT

ಕಿತ್ತೂರು ಕರ್ನಾಟಕ ಘೋಷಣೆ ಸದ್ಯಕ್ಕಿಲ್ಲ: ಯಡಿಯೂರಪ್ಪ

ಹೆಸರು ಬದಲಿಸಲು ಜಯಮೃತ್ಯುಂಜಯ ಸ್ವಾಮೀಜಿ ಮನವಿ: ಸ್ಪಷ್ಟ ಪ್ರತಿಕ್ರಿಯೆ ನೀಡದ ಸಿ.ಎಂ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 19:31 IST
Last Updated 23 ಅಕ್ಟೋಬರ್ 2019, 19:31 IST
ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಗೆ ಬಿ.ಎಸ್‌. ಯಡಿಯೂರಪ್ಪ ಪುಷ್ಪ ನಮನ ಸಲ್ಲಿಸಿದರು. ಲೀಲಾದೇವಿ ಆರ್. ಪ್ರಸಾದ್‌ ಹಾಗೂ ಬಸವಜಯಮೃತ್ಯುಂಜಯ ಸ್ವಾಮೀಜಿ ಇದ್ದರು –ಪ್ರಜಾವಾಣಿ ಚಿತ್ರ
ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಗೆ ಬಿ.ಎಸ್‌. ಯಡಿಯೂರಪ್ಪ ಪುಷ್ಪ ನಮನ ಸಲ್ಲಿಸಿದರು. ಲೀಲಾದೇವಿ ಆರ್. ಪ್ರಸಾದ್‌ ಹಾಗೂ ಬಸವಜಯಮೃತ್ಯುಂಜಯ ಸ್ವಾಮೀಜಿ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಮಾದರಿಯಲ್ಲೇ ಮುಂಬೈ ಕರ್ನಾಟಕದ ಹೆಸರನ್ನು ಕಿತ್ತೂರು ಕರ್ನಾಟಕ ಎಂದು ಬದಲಿಸುವ ಬೇಡಿಕೆ ಸದ್ಯಕ್ಕೆ ಕೈಗೂಡುವ ಸಾಧ್ಯತೆ ಇಲ್ಲ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ’ದಲ್ಲಿ ಮಾತನಾಡಿದ ಅವರು,‘ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ’ ಎಂದು ನಾಮಕರಣ ಮಾಡಬೇಕು’ ಎಂದು ಕೂಡಲಸಂಗಮದ ಪಂಚಮಸಾಲಿ ಮಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.

ಇದಕ್ಕೆ ಸ್ಪಷ್ಟ ಪ್ರತಿಕ್ರಿಯೆ ನೀಡದ ಯಡಿಯೂರಪ್ಪ,‘ಇದೀಗ ಪುನಃ ಪ್ರವಾಹ ಕಾಣಿಸಿಕೊಂಡಿದ್ದರಿಂದ ಸರ್ಕಾರ
ಹೊಸ ಘೋಷಣೆಗಳನ್ನು ಮಾಡುವ ಸ್ಥಿತಿಯಲ್ಲಿಲ್ಲ.ಮುಂದಿನ ದಿನಗಳಲ್ಲಿ ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ, ಈಡೇರಿಸಲಾಗುವುದು’ ಎಂದಷ್ಟೇ ಹೇಳಿದರು.

ADVERTISEMENT

‘ಚೆನ್ನಮ್ಮನ ಹುಟ್ಟೂರು ಕಾಕತಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಬದ್ಧ. ಕಿತ್ತೂರು ಕೋಟೆಯನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಅವರು ಭರವಸೆ ನೀಡಿದರು.

ಇದಕ್ಕೆ ಮೊದಲು ಮಾತನಾಡಿದ ಸ್ವಾಮೀಜಿ,‘ನಮ್ಮ ಭಾಗದ ಹೆಸರು ಬದಲಾಯಿಸಬೇಕೆಂಬುದು ಜನರ ಆಶೋತ್ತರವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಂಡು, ಅಭಿವೃದ್ಧಿಗೆ ನೆರವಾಗಬೇಕು. ಅದೇ ರೀತಿ, ಚೆನ್ನಮ್ಮನ ಹೆಸರನ್ನು ಮಹಿಳಾ ಸಬಲೀಕರಣ ಯೋಜನೆಗಳಿಗೆ ನಾಮಕರಣ ಮಾಡುವ ಜತೆಗೆ ರಾಜಧಾನಿಯಲ್ಲಿ ಬೃಹತ್ ಭವನವನ್ನು ಸರ್ಕಾರ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

‘ಕಿತ್ತೂರು ಚನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೊನೆಯ ಯುದ್ಧದ ಸಮಯದಲ್ಲಿ ಬಳಸಿದ ಖಡ್ಗಗಳುಇಂಗ್ಲೆಂಡ್‌ನ ಬ್ರಿಟಿಷ್‌ ಗ್ರಂಥಾಲಯದಲ್ಲಿವೆ. ಅವುಗಳನ್ನು ತರಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿರುವ ಅವರ ಸಮಾಧಿ ಸ್ಥಳ, ಜನ್ಮ ಸ್ಥಳ ಕಾಕತಿ ಹಾಗೂ ಕಿತ್ತೂರು ಕೋಟೆಗಳನ್ನು ರಾಷ್ಟ್ರೀಯ ಸ್ಮಾರಕಗಳೆಂದು ಘೋಷಿಸಬೇಕು’ ಎಂದು ಆಗ್ರಹಿಸಿದರು.

ಇತರ ಬೇಡಿಕೆಗಳು

* ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ಹೆಸರಿಡಬೇಕು

* ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬೆಳವಡಿ ಮಲ್ಲಮ್ಮ ಅವರ ಹೆಸರಿಡಬೇಕು

* ಮುಂ‌ದಿನ ಶೈಕ್ಷಣಿಕ ವರ್ಷದಿಂದ ಶಾಲಾ–ಕಾಲೇಜಿನಲ್ಲಿ ಚೆನ್ನಮ್ಮನ ಜಯಂತಿ ಆಚರಿಸಬೇಕು

***

ಕಿತ್ತೂರು ರಾಣಿ ಚನ್ನಮ್ಮ ಅವರಿಗೆ ಜಾತಿಯ ಬಣ್ಣ ಕಟ್ಟಬಾರದು. ಅವರ ಹೆಸರಿನಲ್ಲಿರುವ ಪ್ರಶಸ್ತಿಯನ್ನು ಲೆಟರ್‌ ಹೆಡ್‌ ಸಂಸ್ಥೆ ಸೂಚಿಸಿದವರಿಗೆ ನೀಡಬೇಡಿ

– ಲೀಲಾದೇವಿ ಆರ್. ಪ್ರಸಾದ್, ಅಕ್ಕಮಹಾದೇವಿ ಟ್ರಸ್ಟ್ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.