ADVERTISEMENT

ಹಾಲು ಖರೀದಿ ನಿಲ್ಲಿಸದಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಮೇ 2021, 20:50 IST
Last Updated 29 ಮೇ 2021, 20:50 IST

ಬೆಂಗಳೂರು: ‘ಹಾಲಿನ ಪೂರೈಕೆ ಹೆಚ್ಚಾಗಿರುವುದರಿಂದ ಮಾರಾಟ ಕಡಿಮೆಯಾಗಿದೆ ಎಂಬ ನೆಪವೊಡ್ಡಿ ಹಾಲಿನ ಖರೀದಿ ನಿಲ್ಲಿಸಲು ಕೆಎಂಎಫ್‌ ಚಿಂತನೆ ನಡೆಸಿದ್ದು, ಯಾವುದೇ ಕಾರಣಕ್ಕೆ ಹಾಲು ಖರೀದಿ ನಿಲ್ಲಬಾರದು’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದ್ದಾರೆ.

‘ಹಾಲನ್ನು ಮಾರಾಟ ಮಾಡದೆ, ರಸ್ತೆಗೆ ಸುರಿಯಲು ಆಗುವುದಿಲ್ಲ. ಮಾರಾಟ ಕಡಿಮೆಯಾಗಿರುವ ನೆಪದಲ್ಲಿ ಕೆಎಂಎಫ್‌ನ ಈ ಚಿಂತನೆ ಸರಿಯಲ್ಲ. ಕೂಡಲೇ ಈ ವಿಚಾರವನ್ನು ಕೈಬಿಡಬೇಕು’ ಎಂದು ಹೇಳಿದರು.

‘ಲಾಕ್‌ಡೌನ್ ನಂತರ ರೈತರಿಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ. ಲಾಕ್‌ಡೌನ್‌ನಿಂದಾಗಿ ಕೃಷಿ ಉತ್ಪನ್ನಗಳ ನಷ್ಟದ ವರದಿ ಮಂಡಿಸಿ, ರೈತರಿಗೆ ನಷ್ಟ ಪರಿಹಾರವನ್ನು ಸರ್ಕಾರ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಭತ್ತ ಕಟಾವು ಆದ ಕೂಡಲೇ, ಭತ್ತ ಬೆಳೆಯುವ ಎಲ್ಲ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ಸರ್ಕಾರ ತೆರೆಯಬೇಕು. ರೈತರಿಂದ ಕನಿಷ್ಠ ಬೆಂಬಲ ಬೆಲೆಗೆ ಖರೀದಿಸಬೇಕು. ಖರೀದಿ ಕೇಂದ್ರಗಳ ಮೂಲಕ ಈಗಾಗಲೇ ಖರೀದಿಸಿರುವ ಉತ್ಪನ್ನಗಳ ಹಣವನ್ನು ರೈತರ ಖಾತೆಗಳಿಗೆ ಕೂಡಲೇ ಜಮಾ ಮಾಡಬೇಕು’ ಎಂದೂ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.