ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಈ ವರ್ಷದ ದಸರಾ ಮತ್ತು ದೀಪಾವಳಿ ಹಬ್ಬದ ಅವಧಿಯಲ್ಲಿ ಕೆಎಂಎಫ್ ಮತ್ತು ಸದಸ್ಯ ಹಾಲು ಒಕ್ಕೂಟಗಳು ಒಟ್ಟಾಗಿ 1,100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿದ್ದು, ₹46 ಕೋಟಿ ದಾಖಲೆಯ ವಹಿವಾಟು ನಡೆಸಿದೆ ಎಂದು ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಅವರು ತಿಳಿಸಿದರು.
2024 ರ ದಸರಾ ಮತ್ತು ದೀಪಾವಳಿ ಹಬ್ಬದ ಅವಧಿಯಲ್ಲಿ ಒಟ್ಟು 725 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿ ₹33.48 ಕೋಟಿ ವಹಿವಾಟು ನಡೆಸಲಾಗಿತ್ತು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಿಂದಿನ ಸಾಲಿನ ವಹಿವಾಟಿಗೆ ಹೋಲಿಸಿದರೆ ಈ ಸಾಲಿನಲ್ಲಿ ಶೇ 38 ರಷ್ಟು ಹೆಚ್ಚು ಪ್ರಗತಿ ಸಾಧಿಸಿದ್ದು, ಇದು ಕೆಎಂಎಫ್ ಇತಿಹಾಸದಲ್ಲಿಯೇ ಸಾರ್ವಕಾಲಿಕ ದಾಖಲೆಯಾಗಿದೆ. ಈ ಬಾರಿ 2025ರ ಹಬ್ಬದ ಅವಧಿಗೆ ಹೆಚ್ಚುವರಿ ಬೇಡಿಕೆಯನ್ನು ಪರಿಗಣಿಸಿ, ಸುಮಾರು ಎರಡು ತಿಂಗಳುಗಳ ಮುಂಚಿತವಾಗಿ ಎಲ್ಲ ಸದಸ್ಯ ಹಾಲು ಒಕ್ಕೂಟಗಳ ಸಹಕಾರದೊಂದಿಗೆ ನಿಖರ ಯೋಜನೆ ರೂಪಿಸಿ 1000 ಮೆಟ್ರಿಕ್ ಟನ್ ಮಾರಾಟ ಗುರಿ ನಿಗದಿಪಡಿಸಲಾಗಿತ್ತು ಎಂದು ವೆಂಕಟೇಶ್ ತಿಳಿಸಿದರು.
ನಂದಿನಿ ಬ್ರ್ಯಾಂಡ್‌ನಡಿ ಲಭ್ಯವಿರುವ 40ಕ್ಕೂ ಹೆಚ್ಚು ಸಿಹಿ ಉತ್ಪನ್ನ ಮಾದರಿಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಕೆಎಂಎಫ್ ಮುಂಚಿತವಾಗಿಯೇ ಸಿದ್ಧತೆ ಕೈಗೊಂಡಿತ್ತು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸರಾಸರಿ 1 ಕೋಟಿ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ. ಅದರಲ್ಲಿ 65 ಲಕ್ಷ ಲೀಟರ್ ಹಾಲು, ಮೊಸರು ಮತ್ತು ಯುಎಚ್‌ಟಿ ಹಾಲು ಉತ್ಪನ್ನಗಳನ್ನು ರಾಜ್ಯ ಮತ್ತು ಹೊರ ರಾಜ್ಯ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ನಂದಿನಿ ಬ್ರ್ಯಾಂಡ್ ಅಡಿ ಹಾಲಿನೊಂದಿಗೆ ತುಪ್ಪ, ಬೆಣ್ಣೆ, ಪನೀರ್, ಸಿಹಿತಿನಿಸು, ಹಾಲಿನ ಪುಡಿ, ಪಾನೀಯಗಳು ಸೇರಿ 17 ಕ್ಕೂ ಹೆಚ್ಚು ಬಗೆಯ ಹಾಲಿನ ಉತ್ಪನ್ನಗಳನ್ನು ಆಂಧ್ರ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕೇರಳ ಹಾಗೂ ದೆಹಲಿ, ಅಸ್ಸಾಂ ಮತ್ತು ಕೆಲ ಹೊರ ದೇಶಗಳ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.
ನಂದಿನಿ ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದೆ. ಸದ್ಯಕ್ಕೆ ನಂದಿನಿ ಹಾಲು ಮತ್ತು ಉತ್ಪನ್ನಗಳ ಬೆಲೆ ಏರಿಕೆ ಪ್ರಸ್ತಾವನೆ ಇಲ್ಲಕೆ.ವೆಂಕಟೇಶ್,ಪಶುಸಂಗೋಪನೆ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.