ADVERTISEMENT

ವಾಲ್ಮೀಕಿ ಸಮುದಾಯದಿಂದ ತಕ್ಕಪಾಠ: ಕೆ.ಎನ್.ರಾಜಣ್ಣ

ಲೋಕಸಭೆ ಚುನಾವಣೆ: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 18:21 IST
Last Updated 30 ಜೂನ್ 2019, 18:21 IST
ಕೆ.ಎನ್.ರಾಜಣ್ಣ
ಕೆ.ಎನ್.ರಾಜಣ್ಣ   

ತುಮಕೂರು: ‘ಈ ನಾಯಕ (ವಾಲ್ಮೀಕಿ) ಸಮುದಾಯದವರು ಎಂದೆಂದಿಗೂ ನಮ್ಮ ಹಿಂಬಾಲಕರು ಎಂದು ಬಹುತೇಕ ರಾಜಕೀಯ ಮುಖಂಡರು ಬಹಳ ಹಿಂದಿನಿಂದಲೂ ಅಂದುಕೊಂಡಿದ್ದರು. ಅಂತಹ ಮುಖಂಡರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಮುದಾಯದವರು ತಕ್ಕ ಪಾಠ ಕಲಿಸಿದ್ದಾರೆ’ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.

ನಗರದಲ್ಲಿ ಗಿರಿಜನ ನಾಯಕ ನೌಕರರ ಕ್ಷೇಮಾಭಿವೃದ್ಧಿ ಬಳಗ ಭಾನುವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮ್ಮ ಸಮುದಾಯದವರು ಈಗ ಬುದ್ಧಿವಂತರಾಗಿದ್ದಾರೆ. ಯಾವುದೋ ಪಕ್ಷದ ಮುಖಂಡರು ಕರೆದರು ಎಂದು ನಾವೆಲ್ಲ ಕುರಿಗಳಂತೆ ತಲೆ ಅಲ್ಲಾಡಿಸುತ್ತ ಹೋಗಬಾರದು. ಸಮುದಾಯಕ್ಕೆ ಎಷ್ಟು ಲಾಭ ಆಗುತ್ತದೆ. ಏನು ಪ್ರಯೋಜನ ಎಂದು ಯೋಚಿಸಿ ಬೆಂಬಲಿಸಬೇಕು. ಇನ್ನೊಬ್ಬರನ್ನು ನಾಯಕರನ್ನಾಗಿ ಒಪ್ಪಿಕೊಳ್ಳುವ ಬದಲು, ನಾವೇ ‘ನಾಯಕರು’ ಎಂಬ ಭಾವನೆ ನಮಗೆ ರಕ್ತಗತವಾಗಿ ಬಂದಿದೆ’ ಎಂದು ಹೇಳಿದರು.

ADVERTISEMENT

‘ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಪಂಗಡವು ಶೇ 7.5ರಷ್ಟು ಮೀಸಲಾತಿ ಪಡೆಯುವುದು ಸಂವಿಧಾನದತ್ತ ಹಕ್ಕು. ಅದು ಭಿಕ್ಷೆಯಲ್ಲ. ಮೀಸಲಾತಿ ಹೆಚ್ಚಳಕ್ಕಾಗಿ ಇತ್ತೀಚೆಗೆ ನಡೆದ ಪಾದಯಾತ್ರೆಯಲ್ಲಿ ಬಹುಮಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಇನ್ನು ಹೆಚ್ಚಿನ ಜನರು ಸೇರಿ, ಮತ್ತಷ್ಟು ಪ್ರಚಾರ ದೊರೆತಿದ್ದರೆ ಒಳ್ಳೆಯದಿತ್ತು. ಹೋರಾಟದ ನೇತೃತ್ವವಹಿಸಿದ್ದ ಪ್ರಸನ್ನಾನಂದ ಸ್ವಾಮೀಜಿ ಹಾಗೂ ಬೆಂಬಲಿಸಿದ ಮಠಾಧೀಶರಿಗೆ ತುಮಕೂರಿನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿ ಸನ್ಮಾನಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.