ADVERTISEMENT

ಕೊಡಗು: ಬಜರಂಗದಳ ಕಾರ್ಯಕರ್ತರಿಗೆ ಶಾಲಾ ಆವರಣದಲ್ಲಿ ಶಸ್ತ್ರಾಸ್ತ್ರ ತರಬೇತಿ

‘‌ಶೌರ್ಯ ಪ್ರಶಿಕ್ಷಣ ವರ್ಗ’ದಲ್ಲಿ ಬಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ

​ಪ್ರಜಾವಾಣಿ ವಾರ್ತೆ
Published 15 ಮೇ 2022, 18:40 IST
Last Updated 15 ಮೇ 2022, 18:40 IST
ತ್ರಿಶೂಲ ದೀಕ್ಷೆ ಪಡೆಯುತ್ತಿರುವ ಕಾರ್ಯಕರ್ತರು
ತ್ರಿಶೂಲ ದೀಕ್ಷೆ ಪಡೆಯುತ್ತಿರುವ ಕಾರ್ಯಕರ್ತರು   

ಮಡಿಕೇರಿ: ಕೊಡಗಿನ ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ನಡೆದ‘ಶೌರ್ಯ ಪ್ರಶಿಕ್ಷಣ ವರ್ಗ’ದಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ, ತ್ರಿಶೂಲ ದೀಕ್ಷೆ ನೀಡಲಾಗಿದೆ.

ಸುಮಾರು ಹತ್ತು ದಿನ ಶಿಬಿರ ನಡೆದಿದೆ. ಈ ಅವಧಿಯಲ್ಲಿ ಒಮ್ಮೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್‌ ಸದಸ್ಯ ಸುಜಾ ಕುಶಾಲಪ್ಪ ಸಹ ಪಾಲ್ಗೊಂಡಿದ್ದರು ಎಂದು ಮೂಲಗಳು ಖಚಿತ ಪಡಿಸಿವೆ.

ಬಜರಂಗದಳ, ವಿಶ್ವ ಹಿಂದೂ ಪರಿಷತ್‌ನ 119 ಶಿಕ್ಷಣಾರ್ಥಿಗಳು ಸೇರಿ 140 ಮಂದಿ ಇದ್ದರು. ವಿವಿಧ ಜಿಲ್ಲೆಗಳಿಂದ ಕಾರ್ಯಕರ್ತರು ಬಂದಿದ್ದರು.

ADVERTISEMENT

ಶಾಲಾ ಆವರಣದಲ್ಲಿ ಬಂದೂಕು ಹಿಡಿದು ತರಬೇತಿ ಪಡೆಯುತ್ತಿರುವುದು, ಸಂಸ್ಥೆಯ ಸಭಾಂಗಣ ಮತ್ತು ಆವರಣದಲ್ಲಿ ತ್ರಿಶೂಲ ಹಿಡಿದು ದೀಕ್ಷೆ ಪಡೆಯುತ್ತಿರುವುದು, ತ್ರಿಶೂಲಕ್ಕೆ ಪೂಜೆ ಸಲ್ಲಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಶಸ್ತ್ರಾಸ್ತ್ರ ತರಬೇತಿ

‘ಶಸ್ತ್ರಾಸ್ತ್ರ ತರಬೇತಿಯ ಮಾಹಿತಿ ಇಲ್ಲ. ಆಯೋಜಕರೇ ಊಟ, ಮತ್ತಿತರ ವ್ಯವಸ್ಥೆ ಮಾಡಿಕೊಂಡಿದ್ದರು. ಇದರಲ್ಲಿ ಸಂಸ್ಥೆಯ ಪಾತ್ರವಿಲ್ಲ. ರಜೆಯಿದ್ದ ಕಾರಣ ಶಿಕ್ಷಕರೂ ಇರಲಿಲ್ಲ. ಈ ಹಿಂದೆ ರಾಷ್ಟ್ರಮಟ್ಟದ ತರಬೇತಿಯೂ ನಡೆದಿತ್ತು. ಹೊರ ರಾಜ್ಯದಿಂದ ಶಿಕ್ಷಣಾರ್ಥಿಗಳುಬಂದಿದ್ದರು’ ಎಂದು ಸಂಸ್ಥೆಯ ಅಧ್ಯಕ್ಷ ಜರು ಗಣಪತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರೇ, ಶಾಲೆಗಳಲ್ಲಿ ಹಿಜಾಬ್‌ ನಿರ್ಬಂಧ ವಿಧಿಸಿರುವ ನಿಮ್ಮ ಸರ್ಕಾರ, ಬಜರಂಗದಳಕ್ಕೆ ಒಂದು ವಾರ ಅಕ್ರಮ ಶಸ್ತ್ರಾಸ್ತ್ರ ತರಬೇತಿ ಶಿಬಿರ ನಡೆಸಲು ಅನುಮತಿ ಕೊಟ್ಟ ಪೊನ್ನಂಪೇಟೆಯ ಸಾಯಿ ಶಂಕರ ಶಿಕ್ಷಣ ಸಂಸ್ಥೆಯ ವಿರುದ್ಧ ಯಾವ ಕ್ರಮ ಕೈಗೊಂಡಿದೆ’ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್‌ ಕೊಡ್ಲಿಪೇಟೆ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ಧಾರೆ

‘ವಿಚಾರ ತಿಳಿಯದೆ ಆಕ್ಷೇಪಿಸುತ್ತಿರುವರಿಗೆ ತಲೆ ಸರಿಯಿಲ್ಲ. ಶೌರ್ಯ ಪ್ರಶಿಕ್ಷಣ ವರ್ಗದಲ್ಲಿ ಶಸ್ತ್ರಾಸ್ತ್ರ ತರಬೇತಿ ಕೊಡುವುದಿಲ್ಲ. ಯೋಗ ಕಲಿಸುವ, ಆತ್ಮಸ್ಥೈರ್ಯ ತುಂಬುವ ಕೆಲಸ ನಡೆಯಲಿದೆ’ ಎಂದು ವಿಶ್ವ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಪಿ.ಕೃಷ್ಣಮೂರ್ತಿ ಹೇಳಿದರು.

ಕಾರ್ಯಕ್ರಮದ ಚಿತ್ರಗಳು ಜಾಲತಾಣದಲ್ಲಿ ವೈರಲ್‌ ಆದ ನಂತರ ಪೊಲೀಸರು ಶಿಬಿರದ ಮಾಹಿತಿ ಕಲೆಹಾಕಿದ್ಧಾರೆ ಎಂದು ಮೂಲಗಳು ತಿಳಿಸಿವೆ. ಪ್ರತಿಕ್ರಿಯೆಗೆ ಎಸ್‌ಪಿ ಅಯ್ಯಪ್ಪ ಅವರನ್ನು ಸಂಪರ್ಕಿಸಿದರೂ ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.