ADVERTISEMENT

ನಾಪೋಕ್ಲು: ಅರಮನೆ ರಸ್ತೆಗೆ ಕಾಯಕಲ್ಪ, ಹಾದಿ ಸುಗಮ

ಪ್ರವಾಸಿಗರನ್ನು ಸೆಳೆಯುವ ನಾಲ್ಕುನಾಡು ಅರಮನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 19:30 IST
Last Updated 13 ಫೆಬ್ರುವರಿ 2020, 19:30 IST
ನಾಪೋಕ್ಲು ಸಮೀಪದ ಕಕ್ಕಬ್ಬೆಯ ಯವಕಪಾಡಿ ಗ್ರಾಮದಲ್ಲಿರುವ ನಾಲ್ಕುನಾಡು ಅರಮನೆ
ನಾಪೋಕ್ಲು ಸಮೀಪದ ಕಕ್ಕಬ್ಬೆಯ ಯವಕಪಾಡಿ ಗ್ರಾಮದಲ್ಲಿರುವ ನಾಲ್ಕುನಾಡು ಅರಮನೆ   

ನಾಪೋಕ್ಲು: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ನಾಲ್ಕುನಾಡು ಅರಮನೆಗೆ ತೆರಳುವ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾರ್ಪಡಿಸಿದ್ದು ಪ್ರವಾಸಿಗರಿಗೆ ಸಂತಸ ತಂದಿದೆ. ಇದೀಗ ನಿರ್ಮಿಸಲಾದ ರಸ್ತೆಯಿಂದಾಗಿ ಅರಮನೆಯ ಶೋಭೆ ಮತ್ತಷ್ಟು ಹೆಚ್ಚಿದೆ. ಅರಮನೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಶೌಚಾಲಯ ಸೇರಿದಂತೆ ಮೂಲ ಸೌಕರ್ಯವಿಲ್ಲದ ಬಗ್ಗೆ ಪ್ರವಾಸಿಗರು ಹಲವು ಬಾರಿ ತಮ್ಮ ಅಳಲು ತೋಡಿಕೊಂಡಿದ್ದರು.

ಅಪರೂಪದ ಅರಮನೆ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ನಾಮ ಫಲಕ, ರಸ್ತೆ ಸೂಚನಾ ಫಲಕ ಇಲ್ಲದಿರುವುದು,ರಸ್ತೆ ಸಂಪೂರ್ಣ ಹದಗೆಟ್ಟರುವುದು ಆಕ್ಷೇಪಕ್ಕೆ ಕಾರಣವಾಗಿತ್ತು. ಲೋಕೋಪಯೋಗಿ ಇಲಾಖೆ ನಾಲ್ಕುನಾಡು ಅರಮನೆಗೆ ಕಾಂಕ್ರಿಟ್ ರಸ್ತೆ ನಿರ್ಮಿಸಿದೆ. ₹3 ಕೋಟಿ ರೂಪಾಯಿ ವೆಚ್ಚದಲ್ಲಿ 2.3 ಕಿ.ಮೀ. ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದು ಪ್ರಮುಖ ಸೌಲಭ್ಯವೊಂದನ್ನು ಕಲ್ಪಿಸಿದಂತಾಗಿದೆ. ರಸ್ತೆಯು 5.5 ಮೀ ಅಗಲವಿದ್ದು ವಾಹನಗಳು ಸುಲಲಿತವಾಗಿ ಸಂಚರಿಸುವಂತಾಗಿದೆ ಎಂದು ಲೋಕೊಪಯೋಗಿ ಇಲಾಖೆಯ ಮೇಲ್ವಿಚಾರಕ ಚಂಗಪ್ಪ ಹೇಳಿದರು.

ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿರುವ ಕೊಡಗು ರಾಜ ವೀರರಾಜೇಂದ್ರ ನಿರ್ಮಿಸಿದ ನಾಲ್ಕುನಾಡು ಅರಮನೆ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರಮುಖವಾದುದು. ಕೊಡಗಿನ ಅರಸ ಬೇಸಿಗೆ ಶಿಬಿರವಾಗಿ ಇದನ್ನು ಕಟ್ಟಿಸಿದ್ದು ಟಿಪ್ಪು ಸುಲ್ತಾನನಿಂದ ಹಾಗೂ ಬ್ರಿಟೀಷರಿಂದ ರಕ್ಷಿಸಿಕೊಳ್ಳಲು ಈ ದಟ್ಟಾರಣ್ಯದಲ್ಲಿ ಅರಮನೆಯನ್ನು ನಿರ್ಮಿಸಲಾಗಿದೆ ಎಂದು ಇತಿಹಾಸ ತಿಳಿಸುತ್ತದೆ.

ADVERTISEMENT

ಈಗ ಇದು ಪ್ರವಾಸಿಗರ, ಬೆಟ್ಟ ಚಾರಣಿಗರ ಅಚ್ಚುಮೆಚ್ಚಿನ ತಾಣವಾಗಿ ರೂಪುಗೊಂಡಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಿಂದ 33 ಕಿ.ಮೀ. ಮತ್ತು ಕಕ್ಕಬ್ಬೆಯಿಂದ 3 ಕಿ.ಮೀ ಅಂತರದಲ್ಲಿರುವ ಈ ಅರಮನೆಯನ್ನು 1789-91ರ ಕಾಲ ಘಟ್ಟದಲ್ಲಿ ನಿರ್ಮಿಸಿರುವ ಬಗ್ಗೆ ದಾಖಲೆಗಳಿವೆ. ಈಗ ಅರಮನೆಯಿರುವ ಸ್ಥಳ ಹಿಂದೆ ಪುಲಿಯಂಡ ಕುಟುಂಬಸ್ಥರಿಗೆ ಸೇರಿದಾಗಿತ್ತು. ಇಲ್ಲಿನ ಸುಂದರ ಪರಿಸರಕ್ಕೆ ಮಾರು ಹೋದ ರಾಜ ಅವರಿಗೆ ಬದಲಿ ಜಾಗ ನೀಡಿ ಇಲ್ಲಿ ಅರಮನೆ ನಿರ್ಮಿಸಿದನು ಎಂಬುದು ಇತಿಹಾಸ.

ಇದು ತಡಿಯಂಡ ಮೋಳ್ ಬೆಟ್ಟ ತಪ್ಪಲಿನಲ್ಲಿದ್ದು ದೊಡ್ಡ ದೊಡ್ಡ ಮರದ ತೊಲೆಗಳಿಂದ ಮಂಗಳೂರು ಹೆಂಚಿನ ಸಹಾಯದಿಂದ ನಿರ್ಮಿಸಲಾದ ಎರಡಂತಸ್ತಿನ ದೊಡ್ಡ ಕಟ್ಟಡ. ಇದರಲ್ಲಿ ಸುಂದರ ವಾಸ್ತು ಶಿಲ್ಪ ಮತ್ತು ಕೆತ್ತನೆಗಳನ್ನು ಯಥೇಚ್ಚವಾಗಿ ಕಾಣಬಹುದು. ಎದುರಿಗೆ ದೊಡ್ಡದಾದ ಹೆಬ್ಬಾಗಿಲು, ಒಳಗೆ ವಿಶಾಲವಾದ ಪ್ರಾಂಗಣ, ಅರಮನೆಯ ಎಡ ಪಾರ್ಶದಲ್ಲಿ ಸುಂದರವಾಗಿ ನಿರ್ಮಿಸಿದ ಮದುವೆ ಮಂಟಪ ನಮ್ಮನ್ನು ಸೆಳೆಯುತ್ತದೆ.

ರಾಜ ವೀರರಾಜೇಂದ್ರನ ಸಹೋದರಿ ದೇವಮ್ಮಾಜಿಯ ವಿವಾಹಕ್ಕೆ ಈ ಮಂಟಪವನ್ನು ನಿರ್ಮಿಸಲಾಯಿತು ಎಂದು ಹೇಳಲಾಗುತ್ತಿದೆ. ಮುಂದೆ ಅರಮನೆಯ ಮೆಟ್ಟಲೇರಿದರೆ ಎಡಕ್ಕೆ ದೊಡ್ಡ ಚಾವಡಿ, ಕೆಳ ಅಂತಸ್ತಿನಲ್ಲಿ ಐದಾರು ಕೊಠಡಿಗಳು.ಕೆಳಗಿನಿಂದ ಮೇಲಂತಸ್ತಿಗೆ ಸಾಗುವ ಮರದ ಏಣಿ ಏರಿ ಹೋದರೆ ದೊಡ್ಡದಾದ ರಾಜನ ದರ್ಬಾರು ಎದುರಾಗುತ್ತದೆ. ಒಳಗಿನ ಚಾವಡಿಯ ಎರಡು ಬದಿಯಲ್ಲಿರುವ ರಾಜ ಮತ್ತು ರಾಣಿಯರ ಪ್ರತ್ಷೇಕ ಕೊಠಡಿಗಳು ಈ ಕೋಣೆಗಳ ಗೋಡೆಗಳಲ್ಲಿ ಅಪರೂಪದ ಪ್ರಸಿದ್ಧ ಕಲಾಕೃತಿಗಳನ್ನು ಕಾಣಬಹುದು.

ಸಂರಕ್ಷಣೆಗೆ ಆದ್ಯತೆ: ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಐತಿಹಾಸಿಕ ಸ್ಮಾರಕಗಳ, ಕಟ್ಟಡಗಳ ರಕ್ಷಣೆ ಹಾಗೂ ಅಭಿವೃದ್ಧಿಗೆ ಕ್ರಮ ಕೈಗೊಂಡಿರುವದರಿಂದ ಇಂಟೆಕ್ ಸಂಸ್ಥೆ ಈ ಅರಮನೆಯ ಉಸ್ತುವಾರಿ ವಹಿಸಿಕೊಂಡು ಇಲ್ಲಿರುವ ಕಲಾಕೃತಿಗಳನ್ನು ಸ್ವಚ್ಛಗೊಳಿಸಿ ರಕ್ಷಿಸುವ ಕೆಲಸಮಾಡುತ್ತಿದೆ. ಪ್ರವಾಸಿಗರು ಉಚಿತವಾಗಿ ಅರಮನೆಯನ್ನು ವೀಕ್ಷಿಸಬಹುದು.

ನಾಲ್ಕುನಾಡು ಅರಮನೆಗೆ ತೆರಳುವ ರಸ್ತೆ ದುಸ್ಥಿತಿಯಿಂದ ಕೂಡಿದ್ದು ರಸ್ತೆ ದುರಸ್ಥಿ ಪಡಿಸುವಂತೆ ಹಲವು ಬಾರಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಇದೀಗ ಕಾಂಕ್ರೀಟ್ ರಸ್ತೆ ನಿರ್ಮಾಣದಿಂದ ಗ್ರಾಮಸ್ಥರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ. ಪ್ರವಾಸಿಗರಿಗೂ ಅರಮನೆಯ ಹಾದಿ ಸುಗಮವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.