
ಬೆಂಗಳೂರು: ಕೋಗಿಲು ಗ್ರಾಮದ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದವರಿಗೆ, ರಾಜ್ಯ ಸರ್ಕಾರವೇ ಬೇರೆ ಕಡೆ ವಸತಿ ಕಲ್ಪಿಸಲು ಮುಂದಾಗಿರುವುದಕ್ಕೆ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಈ ಸಂಬಂಧ ಮಂಗಳವಾರ ಸಾಲು–ಸಾಲು ಸುದ್ದಿಗೋಷ್ಠಿ ನಡೆಸಿರುವ ಬಿಜೆಪಿ ನಾಯಕರು, ‘ಸರ್ಕಾರವು ಯಾವ ಆಧಾರದಲ್ಲಿ ಮನೆ ನಿರ್ಮಿಸಿಕೊಡುತ್ತಿದೆ’ ಎಂದು ಪ್ರಶ್ನಿಸಿದ್ದಾರೆ. ಸರ್ಕಾರದ ಈ ನಡೆಯು ಭೂಮಾಫಿಯಾ, ಸರ್ಕಾರಿ ಜಮೀನು ಒತ್ತುವರಿ ಮತ್ತು ಅಕ್ರಮ ವಲಸೆಯನ್ನು ಉತ್ತೇಜಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಸಹ ಸರ್ಕಾರದ ಕ್ರಮವನ್ನು ಖಂಡಿಸಿದೆ.
‘ಸಿಎಂ ಡಿಸಿಎಂಗೆ ಶಕ್ತಿ ಇಲ್ಲವೇ?’ '
ಅಕ್ರಮ ವಲಸಿಗರನ್ನು ಗುರುತಿಸಿ ಅವರು ಮಾಡಿಕೊಂಡಿದ್ದ ಒತ್ತುವರಿಯನ್ನು ತೆರವುಗೊಳಿಸಿ ರಾಜ್ಯ ಸರ್ಕಾರ ಉತ್ತಮ ಕೆಲಸ ಮಾಡಿತ್ತು. ಆದರೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ ಮಣಿಯಿತು. ಈ ಮೂಲಕ ಅಕ್ರಮ ವಲಸಿಗರಿಗೆ ಕಾಯಂ ವಿಳಾಸ ನೀಡಲು ಮುಂದಾಗಿದೆ. ಕಾಂಗ್ರೆಸ್ ಹೈಕಮಾಂಡ್‌ನ ಒತ್ತಡವನ್ನು ಮೀರಿ ನಿಲ್ಲುವ ಶಕ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಇಲ್ಲವೇ? ಹೊರದೇಶಗಳಿಂದ ಕರ್ನಾಟಕಕ್ಕೆ ಬಂದಿರುವ ಅಕ್ರಮ ವಲಸಿಗರು ಮತ್ತು ರೋಹಿಂಗ್ಯಾಗಳನ್ನು ರಾಜ್ಯ ಸರ್ಕಾರವೇ ಸಕ್ರಮಗೊಳಿಸುವುದು ಎಷ್ಟು ಸರಿ? ಇವರಿಂದ ಅಪರಾಧ ಮಾದಕವಸ್ತು ಜಾಲದ ಹಾವಳಿ ಹೆಚ್ಚಾಗಲಿದೆ. ಅಂತಹವರನ್ನು ಗುರುತಿಸಿ ಹೊರಹಾಕಲು ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡಬೇಕಾದುದು ರಾಜ್ಯ ಸರ್ಕಾರದ ಕರ್ತವ್ಯ. ಕಾಂಗ್ರೆಸ್ ಸರ್ಕಾರವು ತನ್ನ ಕರ್ತವ್ಯವನ್ನು ಕಡೆಗಣಿಸಿದೆ.
-ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆ
‘ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿ’
ಕರ್ನಾಟಕಕ್ಕೆ ಒಬ್ಬರೇ ಮುಖ್ಯಮಂತ್ರಿ ಎಂದು ನಾನು ಭಾವಿಸಿದ್ದೆ. ಆದರೆ ಇಬ್ಬರು ಮುಖ್ಯಮಂತ್ರಿಗಳು ಇದ್ದಾರೆ ಎಂಬುದು ಈಚೆಗಷ್ಟೇ ನನಗೆ ಗೊತ್ತಾಯಿತು. ದೆಹಲಿಯಲ್ಲಿರುವ ಕೆ.ಸಿ.ವೇಣುಗೋಪಾಲ್ ರಾಜ್ಯದ ಮುಖ್ಯಮಂತ್ರಿ. ಅವರ ಆದೇಶವನ್ನು ಪಾಲಿಸುವ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಈಗ ಬಹಿರಂಗವಾಗಿದೆ. ವೇಣುಗೋಪಾಲ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ 24 ಗಂಟೆಗಳಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಸಭೆ ನಡೆಸಿ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡವರಿಗೆ ವಸತಿ ಕಲ್ಪಿಸಲು ಕ್ರಮ ತೆಗೆದುಕೊಂಡಿದ್ದಾರೆ. ಈ ಮೂವರಲ್ಲಿ ಯಾರು ಪ್ರಬಲರು ಎಂಬುದು ಇದರಿಂದಲೇ ಗೊತ್ತಾಗುತ್ತದೆ.
-ಲಹರ್ ಸಿಂಗ್ ಸಿರೋಯ ರಾಜ್ಯಸಭೆ ಸದಸ್ಯ
‘ಕನ್ನಡಿಗರಿಗೆ ಮನೆ ನೀಡಿ’
‘ಉತ್ತರ ಕರ್ನಾಟಕದಿಂದ ಬಂದಿರುವ ಸಾವಿರಾರು ಮಂದಿ ಬೆಂಗಳೂರಿನ ಹಲವು ಕೊಳೆಗೇರಿಗಳಲ್ಲಿ ನಿರ್ಗತಿಕರಾಗಿ ಜೀವನ ದೂಡುತ್ತಿದ್ದಾರೆ. ಸರ್ಕಾರವು ನಮ್ಮದೇ ಕನ್ನಡಿಗರಿಗೆ ಪಕ್ಕಾ ಮನೆಯ ವ್ಯವಸ್ಥೆ ಮಾಡಿಕೊಡಬೇಕು’ ಎಂದು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ನಾರಾಯಣಸ್ವಾಮಿ ಅವರು ಪತ್ರ ಬರೆದಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಕೊಳಚೆ ಪ್ರದೇಶ ನಿರ್ಮೂಲನಾ ಮಂಡಳಿಗೂ ಪತ್ರ ಬರೆದಿದ್ದಾರೆ. ‘ಬೆಂಗಳೂರನ್ನು ಬೆಳೆಸುವಲ್ಲಿ ಉತ್ತರ ಕರ್ನಾಟಕದ ಈ ಮಂದಿಯ ಶ್ರಮ ತ್ಯಾಗ ಮಹತ್ತರವಾದುದು. ‘ನಮ್ಮವರಿಗೆ’ ಶಾಶ್ವತ ನೆಲೆ ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದು ಕಳಕಳಿಯಿಂದ ಕೋರಿಕೊಳ್ಳುತ್ತೇನೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.
‘ನಮ್ಮವರಿಗೆ ಸುಣ್ಣ ಹೊರಗಿನವರಿಗೆ ಬೆಣ್ಣೆ’
ರಾಜ್ಯದ ಜನರಿಗೆ ಸುಣ್ಣ ಹೊರ ರಾಜ್ಯದವರಿಗೆ ಬೆಣ್ಣೆ. ಇದು ಹೊಸ ವರ್ಷಕ್ಕೆ ಕಾಂಗ್ರೆಸ್ ಸರ್ಕಾರದ ಹೊಸ ಗ್ಯಾರಂಟಿ. ಉತ್ತರ ಕರ್ನಾಟಕದ ಕಲಬುರ್ಗಿ ಬೀದರ್‌ವಿಜಯಪುರ ಯಾದಗಿರಿಯ 117 ಹಳ್ಳಿಗಳು ಜಲಾವೃತವಾಗಿ 20000ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. 14.58 ಲಕ್ಷ ಹೆಕ್ಟೇರ್‌ನಷ್ಟು ಬೆಳೆ ನಾಶವಾಗಿದೆ. ಉತ್ತರ ಕರ್ನಾಟಕದ ಜನರು ಮತ್ತು ರೈತರ ಕಣ್ಣೀರು ಕಾಂಗ್ರೆಸ್ ಸರ್ಕಾರಕ್ಕೆ ಕಾಣಲಿಲ್ಲವೇ? ಕೆ.ಜಿ.ಹಳ್ಳಿಯಲ್ಲಿ 29 ದಲಿತ ಕುಟುಂಬಗಳ ಮನೆಗಳನ್ನು ತೆರವು ಮಾಡುವಾಗ ಸರ್ಕಾರಕ್ಕೆ ಕಣ್ಣು–ಕಿವಿ ಇರಲಿಲ್ಲವೇ? ಕೇರಳದ ವಲಸಿಗರ ಕಣ್ಣೀರು ಒರೆಸಲು ಮುಂದಾಗಿರಲು ಕಾರಣವೇನು?
-ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.