ADVERTISEMENT

ಕೋಲಾರದ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ

ಘಟನೆ ನಡೆದು ವರ್ಷದೊಳಗೆ ನ್ಯಾಯಾಲಯ ತೀರ್ಪು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 17:15 IST
Last Updated 18 ಫೆಬ್ರುವರಿ 2023, 17:15 IST
ಆನಂದ್‌
ಆನಂದ್‌   

ಕೋಲಾರ: ಕಳೆದ ವರ್ಷ ಹದಿನಾಲ್ಕರ ಹರೆಯದ ಬಾಲಕಿಯೊಬ್ಬಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದ ಬಂಗಾರಪೇಟೆ ತಾಲ್ಲೂಕಿನ ನಾಲ್ವರು ಯುವಕರಿಗೆ ಪೋಕ್ಸೊ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಬಂಗಾರಪೇಟೆ ತಾಲ್ಲೂಕಿನ ಹೊಸಕೋಟೆ ಗ್ರಾಮದ ಆನಂದ್‌ (27), ಕಾಮಸಮುದ್ರ ಎ.ಕೆ. ಕಾಲೊನಿ ನಿವಾಸಿ ಪ್ರವೀಣ್ (21), ಕೆಜಿಎಫ್‌ ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಕಾಂತರಾಜ್ (28) ಮತ್ತು ಬೆಂಗನೂರು ಗ್ರಾಮದ ವೇಣು (19) ಶಿಕ್ಷೆಗೆ ಒಳಗಾದ ಅತ್ಯಾಚಾರಿಗಳು.

ಜನ್ಮದಿನಕ್ಕೆ ಹೊಸ ಬಟ್ಟೆ ಕೊಡಿಸದ ತಾಯಿಯೊಂದಿಗೆ ಮುನಿಸಿಕೊಂಡ ಬಾಲಕಿ 2022ರ ಫೆಬ್ರುವರಿ 18ರಂದು ಬಂಗಾರಪೇಟೆ ಬಸ್‌ ನಿಲ್ದಾಣದಲ್ಲಿ ಕುಳಿತಿದ್ದಳು. ಬಾಲಕಿಯನ್ನು ಅಪಹರಿಸಿದ ಯುವಕರು ತನಿಮಡುಗು ಗ್ರಾಮದ ಬಾರ್‌ ಹಿಂಭಾಗದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಸಂಬಂಧ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ADVERTISEMENT

ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಪಿ. ದೇವಮಾನೆ ಅವರು ಅಪರಾಧಿಗಳಿಗೆ ಶುಕ್ರವಾರ ಜೀವಾವಧಿ ಶಿಕ್ಷೆ ಹಾಗೂ ತಲಾ ₹25 ಸಾವಿರ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಡಿ. ಲಲಿತಕುಮಾರಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.