ಬೆಂಗಳೂರು: ಕೊಪ್ಪಳದಲ್ಲಿ ವಾಲ್ಮೀಕಿ ಸಮಾಜದ ಯುವಕ ಗವಿ ಸಿದ್ದಪ್ಪ ಅವರನ್ನು ಹತ್ಯೆ ಮಾಡಿದ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸುವಂತೆ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದರು.
ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಮುಸ್ಲಿಂ ಯುವತಿಯನ್ನು ಪ್ರೀತಿಸಿದ ಎಂಬ ಕಾರಣಕ್ಕೆ ಗವಿ ಸಿದ್ಧಪ್ಪ ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಹೇಳಿದರು. ಸರ್ಕಾರ ತಕ್ಷಣವೇ ಉತ್ತರ ನೀಡಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಒಕ್ಕೊರಲಿನಿಂದ ಆಗ್ರಹಿಸಿದರು.
ಕೊಲೆಗಾರರು ಕೊಲೆ ಮಾಡುವುದಕ್ಕೂ ಮೊದಲೇ ಇನ್‌ಸ್ಟಾಗ್ರಾಂನಲ್ಲಿ ಕೊಲೆಯ ಬೆದರಿಕೆ ಹಾಕಿದ್ದರು. ಆದರೆ, ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಗವಿಸಿದ್ಧಪ್ಪ ಅವರದು ಬಡ ಕುಟುಂಬ. ಕೂಲಿ ಕೆಲಸ ಮಾಡುತ್ತಿದ್ದಾರೆ. ಆ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು. ಇವರ ಕುಟುಂಬದ ಒಬ್ಬ ವ್ಯಕ್ತಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.
ವಿರೋಧಪಕ್ಷದ ನಾಯಕ ಆರ್.ಅಶೋಕ, ಡಾ.ಸಿ.ಎನ್.ಅಶ್ವತ್ಥನಾರಾಯಣ ಸೇರಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸರ್ಕಾರ ತಕ್ಷಣವೇ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಗವಿಸಿದ್ದಪ್ಪ ಅವರ ಹತ್ಯೆ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಬಿಜೆಪಿ–ಜೆಡಿಎಸ್ ನಿಯೋಗ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಬುಧವಾರ ಮನವಿ ಸಲ್ಲಿಸಿತು.
ಭೇಟಿಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಸಚಿವ ಬಿ.ಶ್ರೀರಾಮುಲು ‘ಬೀದರ್ ಕಲಬುರಗಿ ರಾಯಚೂರು ಬಳ್ಳಾರಿ ಕೊಪ್ಪಳದ ಜನತೆ ಜಾತ್ಯತೀವಾಗಿ ಎಲ್ಲರನ್ನೂ ಪ್ರೀತಿಸುವವರು. ಆದರೆ ಗ್ಯಾರಂಟಿ ಸರ್ಕಾರ ಬಂದ ಬಳಿಕ ಬಡವರ ಹಿಂದೂಪರ ಕಾರ್ಯಕರ್ತರ ಪ್ರಾಣಕ್ಕೆ ಗ್ಯಾರಂಟಿ ಇಲ್ಲವಾಗಿದೆ’ ಎಂದರು.
‘ಗುಪ್ತಚರ ಇಲಾಖೆ ವೈಫಲ್ಯವಾಗಿದೆ. ಇದರ ಹೊಣೆ ಹೊತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿಯವರಿಗೆ ಕುರ್ಚಿ ಉಳಿಸಿಕೊಳ್ಳುವುದನ್ನು ಬಿಟ್ಟು ಬೇರೇನೂ ಮಾಡುತ್ತಿಲ್ಲ’ ಎಂದು ಅವರು ದೂರಿದರು.
‘ಮುಸ್ಲಿಂ ಹುಡುಗಿಯನ್ನು ಪ್ರೀತಿ ಮಾಡಿದ ಕಾರಣಕ್ಕೆ ಗವಿ ಸಿದ್ದಪ್ಪ ನಾಯಕ ಹತ್ಯೆಯಾಗಿದ್ದಾನೆ. ಯಾರೂ ಪ್ರೀತಿ ಮಾಡಬಾರದೇ? ಅದೇ ಹುಡುಗಿ ಬಂದು ಪ್ರೀತಿ ಮಾಡಿದ್ದಾಳೆ. ನನ್ನ ಮಗ ಅಲ್ಲಿಗೆ ಹೋಗಿಲ್ಲ ಎಂದು ಗವಿಸಿದ್ದಪ್ಪ ಅವರ ತಂದೆ ತಿಳಿಸಿದ್ದಾರೆ. ಹತ್ಯೆಯನ್ನು 8 ರಿಂದ 10 ಜನ ಸೇರಿ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದ್ದರಿಂದ ಎನ್‌ಐಎ ತನಿಖೆ ಆಗಬೇಕು. ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು’ ಎಂದು ಅವರು ಒತ್ತಾಯಿಸಿದರು. ನಿಯೋಗದಲ್ಲಿ ಬಿ.ವೈ.ವಿಜಯೇಂದ್ರ ಆರ್.ಅಶೋಕ ಜಿ.ಜನಾರ್ದನರೆಡ್ಡಿ ರಾಜುಗೌಡ ಶಿವನಗೌಡ ನಾಯಕ ಮೊದಲಾದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.