ADVERTISEMENT

ವಿಶ್ವಕರ್ಮ ನಿಗಮದಿಂದ ಪಡೆದ ₹78 ಕೋಟಿಯನ್ನು ಸರ್ಕಾರ ಮನ್ನಾ ಮಾಡಲಿ: ನಂಜುಂಡಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 15:52 IST
Last Updated 7 ಜನವರಿ 2024, 15:52 IST
<div class="paragraphs"><p>ಕೆ.ಪಿ.ನಂಜುಂಡಿ</p></div>

ಕೆ.ಪಿ.ನಂಜುಂಡಿ

   

ಬೆಂಗಳೂರು: ‘ವಿಶ್ವಕರ್ಮ ನಿಗಮದಿಂದ 2014ರಿಂದ 2020ರ ಅವಧಿಯಲ್ಲಿ ಸಾಲ ಪಡೆದ 92 ಸಾವಿರ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಅವರು ಪಡೆದ ಸಾಲ ಮತ್ತು ಅದರ ಬಡ್ಡಿ ಮೊತ್ತ ₹78 ಕೋಟಿಯನ್ನು ‌ರಾಜ್ಯ ಸರ್ಕಾರ ಮನ್ನಾ ಮಾಡಬೇಕು’ ಎಂದು ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಕೆ.ಪಿ. ನಂಜುಂಡಿ ವಿಶ್ವಕರ್ಮ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಸಾಲ ಪಡೆದವರು ಬಡ್ಡಿ ಕಟ್ಟಲು ಪರದಾಡುತ್ತಿದ್ದು, ಸರ್ಕಾರ ಮಾನವೀಯತೆ ಪ್ರದರ್ಶಿಸಬೇಕು’ ಎಂದರು.

ADVERTISEMENT

‘ಬೇಲೂರಿನ ಚನ್ನಕೇಶವ ದೇವಸ್ಥಾನದ ಆವರಣದಲ್ಲಿ ಅಮರಶಿಲ್ಪಿ ಜಕಣಾಚಾರಿಯ ಪ್ರತಿಮೆಯನ್ನು ಸ್ಥಾಪಿಸಬೇಕು, ಸಮಾಜ ಸಂಘಟನೆ ಮತ್ತು ಹೋರಾಟದಲ್ಲಿ ಭಾಗವಹಿಸಿದ ಮುಖಂಡರೊಬ್ಬರನ್ನು ವಿಶ್ವಕರ್ಮ ನಿಗಮದ ಅಧ್ಯಕ್ಷರನ್ನಾಗಿ ಮಾಡಿ ₹50 ಕೋಟಿ ಅನುದಾನ ನೀಡಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.

‘ನಮ್ಮ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಲು ಅವಕಾಶ ಇದ್ದರೂ ವಂಚಿತವಾಗಿದೆ. ಸಾಮಾಜಿಕ ನ್ಯಾಯ ಸಿಗದೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದು ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಕುಲಶಾಸ್ತ್ರೀಯ ಅಧ್ಯಯನದ ಬಗ್ಗೆ ಜಾಗೃತಿ ಮೂಡಿಸಲು 162 ಹೋಬಳಿಗಳಲ್ಲಿ ಈಗಾಗಲೇ ಸಮಾವೇಶ ನಡೆಸಲಾಗಿದೆ. ಉಳಿದ 585 ಹೋಬಳಿಗಳಲ್ಲಿ ಸಮಾವೇಶ ನಡೆಸಿ, ಬೀದರ್‌ನಿಂದ ಬೆಂಗಳೂರುವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.