ADVERTISEMENT

ನಮಗೂ ಕಾರ್ಯಾಧ್ಯಕ್ಷ ಸ್ಥಾನ ನೀಡಿ: ಎಡಗೈ ಸಮುದಾಯದ ಮುಖಂಡರ ಆಗ್ರಹ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿದ ಎಡಗೈ ಸಮುದಾಯದ ನಿಯೋಗ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 8:48 IST
Last Updated 23 ಜನವರಿ 2021, 8:48 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಬೆಂಗಳೂರು: ಕಾಂಗ್ರೆಸ್‌ ಹೈಕಮಾಂಡ್‌ ದಲಿತ ಬಲಗೈ ಸಮುದಾಯಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಿದ ಬೆನ್ನಲ್ಲೆ, ತಮಗೂ ಕಾರ್ಯಾಧ್ಯಕ್ಷ ಸ್ಥಾನ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಎಡಗೈ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.

ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಮತ್ತು ಮಾಜಿ ಸಚಿವ ಎಚ್‌. ಆಂಜನೇಯ ನೇತೃತ್ವದ ನಿಯೋಗ ಶಿವಕುಮಾರ್‌ ಅವರನ್ನ ಭೇಟಿ ಮಾಡಿ, ಎಡಗೈ ಮಾದಿಗ ಸಮುದಾಯಕ್ಕೆ ಕಾರ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಬಲಗೈ ಸಮುದಾಯಕ್ಕೆ ಸೇರಿದ ಧ್ರುವನಾರಾಯಣ್ ಅವರಿಗೆ ಇತ್ತೀಚೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ.

ಬಳಿಕ ಮಾತನಾಡಿದ ಎಚ್. ಆಂಜನೇಯ, ‘ದಲಿತ ಎಡಗೈ ಸಮುದಾಯವನ್ನು ನಿರ್ಲಕ್ಷಿಸಲಾಗಿದೆ. ಪಕ್ಷಕ್ಕೆ ದಲಿತ ಎಡಗೈ ಮತಗಳನ್ನು ಮರಳಿ ತರಬೇಕು. ಪಕ್ಷ ಸಂಘಟನೆ ಬಹಳ ಮುಖ್ಯ. ಮಾದಿಗ ಸಮುದಾಯ ಅತ್ಯಂತ ತುಳಿತಕ್ಕೊಳಗಾಗಿದೆ. ಇಂಥ ಸಮುದಾಯಕ್ಕೆ ಕಾಂಗ್ರೆಸ್ ನ್ಯಾಯ ಒದಗಿಸದಿದ್ದರೆ ಇನ್ಯಾರು ಒದಗಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.

ADVERTISEMENT

‘ಮಾದಿಗ ಸಮುದಾಯದವರಿಗೆ ಕಾರ್ಯಾಧ್ಯಕ್ಷ ಸ್ಥಾನ ಕೊಡಲೇಬೇಕು. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದಿದ್ದೇವೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಿದ್ದರಾಮಯ್ಯ ಅವರಿಗೂ ಮನವಿ ಮಾಡಿದ್ದೇವೆ’ ಎಂದರು.

ಎಲ್. ಹನುಮಂತಯ್ಯ ಮಾತನಾಡಿ, ‘ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಮಾದಿಗ ಸಮುದಾಯದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈ ಸಮುದಾಯದ ಬೆಂಬಲದಿಂದಲೇ ಕಾಂಗ್ರೆಸ್ ಇಷ್ಟು ವರ್ಷ ಅಧಿಕಾರ ಮಾಡಿದೆ. ನಮ್ಮ ಸಮುದಾಯ ಕಾಂಗ್ರೆಸ್‌ನ ನಿರಂತರ ಬೆಂಬಲಿಗರು. ಈಗ ಕಾಂಗ್ರೆಸ್ ಮೇಲೆ ಬೇರೆ ರೀತಿಯ ಅಭಿಪ್ರಾಯ ಬರಬಾರದು. ನಮ್ಮ ಸಮುದಾಯವನ್ನು ಬಿಟ್ಟು ಕಾಂಗ್ರೆಸ್ ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ, ಕಾರ್ಯಾಧ್ಯಕ್ಷ ಸ್ಥಾನ ನೀಡುವಂತೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಬಳಿ ಒತ್ತಾಯಿಸಿದ್ದೇವೆ. ಇದು ನಮ್ಮ ನಾಯಕರಿಗೂ ಮನವರಿಕೆಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.