ADVERTISEMENT

ಮಿಸ್ಟರ್ ಕಮಿಷನರ್, ಬಿ ಕೇರ್ ಫುಲ್: ಪೊಲೀಸರಿಗೆ ಎಚ್ಚರಿಕೆ ನೀಡಿದ ಡಿಕೆಶಿ

ಗಲಭೆಗೆ ಪೊಲೀಸರ ವೈಫಲ್ಯವೇ ಕಾರಣ ಎಂದು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 16:52 IST
Last Updated 20 ಆಗಸ್ಟ್ 2020, 16:52 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್    

ಬೆಂಗಳೂರು: ‘ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಗಲಭೆಗೆ ಕಾಂಗ್ರೆಸ್ಸಲ್ಲ; ಪೊಲೀಸರ ವೈಫಲ್ಯವೇ ಕಾರಣ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನ ಆಚರಣೆ ಹಾಗೂ 'ಜನಧ್ವನಿ' ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷವನ್ನು ಸಿಲುಕಿಸಲು ಪ್ರಯತ್ನ ನಡೆಯುತ್ತಿದೆ. ಅದು ಮುಂದುವರಿದರೆ ಬಿಜೆಪಿ ವಿರುದ್ಧ ಅಲ್ಲ, ಪೊಲೀಸರ ವಿರುದ್ಧ ಹೋರಾಟ ಆರಂಭಿಸುತ್ತೇವೆ. ಮಿಸ್ಟರ್ ಕಮಿಷನರ್, ಬಿ ಕೇರ್ ಫುಲ್’ ಎಂದು ಪೊಲೀಸ್‌ ಕಮಿಷನರ್‌ ವಿರುದ್ಧವೇ ಆಕ್ರೋಶ ಹೊರಹಾಕಿದರು.

‘ಪೊಲೀಸ್‌ ಕಮಿಷನರ್ ಅವರೇ, ನೀವು ಬಿಜೆಪಿಯ ಏಜೆಂಟ್ ರೀತಿಯಲ್ಲಿ ವರ್ತನೆ ಮಾಡಬೇಡಿ. ನಿಷ್ಪಕ್ಷಪಾತವಾಗಿ ತನಿಖೆ ಮಾಡಿ. ಸರ್ಕಾರದ ತಾಳಕ್ಕೆ ಕುಣಿಯಬೇಡಿ. ಕಾಂಗ್ರೆಸ್‌ನವರ ಮೇಲೆ ಮಸಿ ಬಳಿಯಲು ಮುಂದಾದರೆ ಈ ಡಿ.ಕೆ ಶಿವಕುಮಾರ್ ಸಹಿಸಲ್ಲ’ ಎಂದರು.

ADVERTISEMENT

‘ತಪ್ಪು ಮಾಡಿದವರನ್ನು ಶಿಕ್ಷಿಸಿ. ಕಾನೂನು ಕೈಗೆತ್ತಿಕೊಂಡವರನ್ನು ಬಂಧಿಸಿ. ನಾವು ಪ್ರಶ್ನಿಸಲ್ಲ. ಆದರೆ, ನಿಮಗೆ ನಂಬರ್ ಬೇಕು ಎಂದು ಅಮಾಯಕರನ್ನು ಬಂಧಿಸಿದರೆ ನೋಡಿಕೊಂಡು ಸುಮ್ಮನಿರುವುದಿಲ್ಲ’ ಎಂದೂ ಎಚ್ಚರಿಕೆ ನೀಡಿದರು.

‘ಸಚಿವರು, ಶಾಸಕರು, ಸಂಸದರು ಪ್ರಚೋದನಾಕಾರಿ ಹೇಳಿಕೆ ಕೊಟ್ಟರಲ್ಲ ಆಗ ಏಕೆ ಕ್ರಮ ಕೈಗೊಳ್ಳಲಿಲ್ಲ. ಮುಖ್ಯಮಂತ್ರಿಗಳೇ, ಗೃಹ ಸಚಿವರೇ ಏನು ಮಾಡುತ್ತಿದ್ದೀರಿ. ನಿಮ್ಮ ತಪ್ಪು ಮರೆಮಾಚಲು ಕಾಂಗ್ರೆಸ್ ಮೇಲೆ ಹಾಕಲು ಹೊರಟಿದ್ದೀರಿ. ಇದಕ್ಕೆ ನಾವು ಬಗ್ಗುವುದಿಲ್ಲ. ನಮ್ಮ ಯಾವುದೇ ಒಬ್ಬ ಕಾರ್ಯಕರ್ತನ ವಿರುದ್ಧ ಸುಳ್ಳು ಆರೋಪ ಮಾಡಿದರೂ ಅವನ ಪರ ನಿಂತು ಹೋರಾಡುತ್ತೇನೆ’ ಎಂದರು.

‘ಜನಧ್ವನಿ’ ಹೋರಾಟ ಮುಂದುವರಿಯಲಿದೆ: ‘ಜನರ ಸಮಸ್ಯೆಯನ್ನು ವಿಧಾನಸೌಧ ಹಾಗೂ ರಾಜಭವನದಲ್ಲಿರುವವರಿಗೆ ಮುಟ್ಟಿಸಲು ಜನಧ್ವನಿ ಕಾರ್ಯಕ್ರಮ ಮಾಡಿದ್ದೇವೆ. ಈ ಕಾರ್ಯಕ್ರಮ ಇಂದಿಗೆ ಮುಗಿಯುವುದಿಲ್ಲ. ಇದು ಪ್ರಾರಂಭ. ನಿಮ್ಮನ್ನು (ಕಾಂಗ್ರೆಸ್‌) ವಿಧಾನಸೌಧದಲ್ಲಿ ಕೂರಿಸುವವರೆಗೂ ಜನಧ್ವನಿ ಕಾರ್ಯಕ್ರಮವನ್ನು ತೆಗೆದುಕೊಂಡು ಹೋಗುತ್ತೇನೆ’ ಎಂದರು.

ಬಿಜೆಪಿ ವಿರುದ್ಧ ಟೀಕೆ: ‘ರಾಜ್ಯ ನಿಮಗೆ (ಬಿಜೆಪಿ) 25 ಸಂಸದರನ್ನು ಕೊಟ್ಟಿದೆ. ಅವರಲ್ಲಿ ಒಬ್ಬರೂ ಜನರ ಪರ ಧ್ವನಿ ಎತ್ತಲಿಲ್ಲ. ಹೀಗಾಗಿ, ಕಾಂಗ್ರೆಸ್ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.