ADVERTISEMENT

ಸತೀಶ ಜಾರಕಿಹೊಳಿಯನ್ನು ಮಣಿಸಲು ರಾಮುಲುಗೆ ಡಿಕೆಶಿ ಆಹ್ವಾನ: ಜನಾರ್ದನ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 11:15 IST
Last Updated 23 ಜನವರಿ 2025, 11:15 IST
<div class="paragraphs"><p>ಶ್ರೀರಾಮುಲು, ಡಿ.ಕೆ.ಶಿವಕುಮಾರ್ ಹಾಗೂ&nbsp;ಗಾಲಿ ಜನಾರ್ದನರೆಡ್ಡಿ</p></div>

ಶ್ರೀರಾಮುಲು, ಡಿ.ಕೆ.ಶಿವಕುಮಾರ್ ಹಾಗೂ ಗಾಲಿ ಜನಾರ್ದನರೆಡ್ಡಿ

   

ಬೆಂಗಳೂರು: ಸಚಿವ ಸತೀಶ ಜಾರಕಿಹೊಳಿ ಅವರನ್ನು ಮಣಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶ್ರೀರಾಮುಲು ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಬಿಜೆಪಿಯಲ್ಲಿ ಇರುವುದು ಅಥವಾ ಬಿಡುವುದು ರಾಮುಲುಗೆ ಬಿಟ್ಟ ವಿಚಾರ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾರಕಿಹೊಳಿ ಅವರನ್ನು ಮೂಲೆಗುಂಪು ಮಾಡಲು ಶ್ರೀರಾಮುಲು ಅವರನ್ನು ಹೇಗಾದರೂ ಸರಿ ಸೇರಿಸಿಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಬಳ್ಳಾರಿಯಲ್ಲಿ ಅವರಿಗಿರುವ ಜನಪ್ರಿಯತೆ ನೋಡಿ ಡಿ.ಕೆ.ಶಿವಕುಮಾರ್ ಈ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.

ADVERTISEMENT

ಪಕ್ಷದ ಪ್ರಮುಖ ನಾಯಕರ ಸಭೆಯಲ್ಲಿ ಶ್ರೀರಾಮುಲು ತಮ್ಮ ವಿರುದ್ಧ ಟೀಕಿಸಿರುವುದನ್ನು ಪ್ರಸ್ತಾಪಿಸಿದ ರೆಡ್ಡಿ, ‘ನಾನು ಸಾಯುವವರೆಗೂ ರಾಮುಲು ನನ್ನ ಸ್ನೇಹಿತ. ಆದರೆ ಶತ್ರುಗಳ ಜತೆ ಸೇರಿ ರಾಜಕೀಯ ಮಾಡುವುದು ಸರಿಯಲ್ಲ. ಅವರು ಪಕ್ಷ ಬಿಡುವ ಬಗ್ಗೆ ಬಳ್ಳಾರಿಯಲ್ಲಿ ಮನೆ ಮಾತಾಗಿದೆ. ಅವರು ಕಾಂಗ್ರೆಸ್‌ ಬಿಟ್ಟು ಬೇರೆ ಯಾವ ಪಕ್ಷ ಸೇರಲು ಸಾಧ್ಯವಿದೆ’ ಎಂದು ಪ್ರಶ್ನಿಸಿದರು.

‘ಶ್ರೀರಾಮುಲು ವಿರುದ್ಧ ನಾನು ಯಾರಿಗೂ ಯಾವುದೇ ರೀತಿಯಲ್ಲಿ ಚಾಡಿ ಹೇಳಿಲ್ಲ. ಪಕ್ಷದ ಪ್ರಮುಖ ನಾಯಕರ ಸಭೆಯಲ್ಲಿ ಅವರು ನನ್ನ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಅದಕ್ಕೆ ಸ್ಪಷ್ಟನೆ ಕೊಡುವುದು ನನ್ನ ಜವಾಬ್ದಾರಿ. ಲೋಕಸಭಾ ಚುನಾವಣೆಗೂ ಮೊದಲೇ ಬಿಜೆಪಿಯಲ್ಲಿ ನನ್ನ ಪಕ್ಷವನ್ನು ವಿಲೀನಗೊಳಿಸಿ ಸೇರಿಕೊಂಡಿದ್ದೇನೆ. 18 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದೇನೆ’ ಎಂದರು.

‘ಸಂಡೂರು ಕ್ಷೇತ್ರದ ಉಪಚುನಾವಣೆಯಲ್ಲಿ ಶ್ರೀರಾಮುಲು ಮೂರು ದಿನ ತಡವಾಗಿ ಕ್ಷೇತ್ರಕ್ಕೆ ಬಂದರು. ಅವರ ಜತೆ ಕೆಲಸ ಮಾಡಿದ್ದೇನೆ. ಕಾಂಗ್ರೆಸ್‌ ಕಡೆಯಿಂದ ಮುಖ್ಯಮಂತ್ರಿಯಿಂದ ಹಿಡಿದು ಇಡೀ ಸರ್ಕಾರವೇ ಬಂದು ಕುಳಿತಿತ್ತು. ಹಣದ ಹೊಳೆ ಹರಿಸಿದರು. ಇದರಿಂದ ನಮಗೆ ಸೋಲಾಯಿತು. ರಾಮುಲು ಕೆಲಸ ಮಾಡಿಲ್ಲ ಎಂದು ಚಾಡಿ ಹೇಳಿಲ್ಲ. ಅಲ್ಲದೆ, ಬಂಗಾರು ಹನುಮಂತು ಅವರಿಗೆ ನಾನು ಟಿಕೆಟ್‌ ಕೊಡಿಸಲಿಲ್ಲ. ಪಕ್ಷವೇ ಅವರನ್ನು ಗುರುತಿಸಿ ಟಿಕೆಟ್‌ ನೀಡಿತ್ತು. ಬಳ್ಳಾರಿಯಲ್ಲಿ ಸೋತಿದ್ದ ರಾಮುಲು ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಅಲ್ಲದೇ, ವಾಲ್ಮೀಕಿ ಜನಾಂಗದ ಮತ್ತೊಬ್ಬ ನಾಯಕ ಬಂದರೆ ತಮ್ಮ ಭವಿಷ್ಯಕ್ಕೆ ಪೆಟ್ಟು ಬೀಳಬಹುದು ಎಂಬ ಆತಂಕವೂ ಅವರನ್ನು ಕಾಡಿರಬಹುದು’ ಎಂದು ಹೇಳಿದರು.

‘ಕಳೆದ 14 ವರ್ಷಗಳಲ್ಲಿ ರಾಮುಲು ಹಲವು ವಿಚಾರಗಳನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ. ಮಾತನಾಡಲು ಬಹಳಷ್ಟು ವಿಚಾರಗಳು ಇವೆ. ಏಜೆನ್ಸಿಗಳು ತನಿಖೆ ಮಾಡಿದರೆ ಸಾಕಷ್ಟು ಸಂಗತಿ ಬಯಲಿಗೆ ಬರುತ್ತವೆ. ಅವುಗಳ ಬಗ್ಗೆ ಈಗ ಮಾತನಾಡುವುದಿಲ್ಲ. ಸಮಯ ಬಂದಾಗ ಮಾತನಾಡುತ್ತೇನೆ’ ಎಂದರು.

‘1991ರಲ್ಲಿ ರಾಮುಲು ಅವರ ಮಾವ ರೈಲ್ವೇಬಾಬು ಕೊಲೆ ಆದಾಗ ಶತ್ರುಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮಚ್ಚು, ಲಾಂಗು ಮತ್ತಿತರ ಮಾರಕಾಸ್ತ್ರಗಳನ್ನು ಹಿಡಿದರು. ರಾಮುಲು 40 ಮಂದಿ ಜತೆ ಹೊರಟಿದ್ದರು. ಮುಂದೆ ಆಗಬಹುದಾದ ಅನಾಹುತಗಳನ್ನು ಮನಗಂಡು ಅವರನ್ನು ತಡೆದೆ. ರಾಮುಲು ಜೀವಕ್ಕೂ ಬೆದರಿಕೆ ಇತ್ತು. ಹೀಗಾಗಿ ಅವರನ್ನು ಕಾಪಾಡಿದ್ದೆ. ಅವರನ್ನು ಸನ್ಮಾರ್ಗಕ್ಕೆ ತಂದಿದ್ದೆ. ಪ್ರತೀಕಾರಕ್ಕೆ ಮುಂದಾಗಿದ್ದ ರಾಮುಲುಗೆ ರಾಮಾಯಣ ಹೇಳಿ ಒಳ್ಳೆ ಮಾರ್ಗಕ್ಕೆ ತಂದಿದ್ದೆ’ ಎಂದರು.

‘ಆದರೆ, ಅವರು ಸೂರ್ಯನಾರಾಯಣ ರೆಡ್ಡಿ ಕೊಲೆಗೆ ಸಂಚು ಮಾಡಿದ್ದು ಗೊತ್ತಾಗಿ. ಅದನ್ನು ತಡೆದೆ. ಒಮ್ಮೆ ಅಪರಾಧ ಮಾಡಿದರೆ ಅದೇ ಮಾರ್ಗ ಹಿಡಿಯುತ್ತಾರೆ ಎಂದು ಬುದ್ದಿವಾದ ಹೇಳಿದ್ದೆ. ಅದೇ ನಾನು ಮಾಡಿದ ತಪ್ಪು’ ಎಂದು ಹೇಳಿದರು.

2004ರಲ್ಲಿ ಬಳ್ಳಾರಿಯಲ್ಲಿ ಕಾರ್ಪೊರೇಟರ್‌ ಒಬ್ಬರ ಕೊಲೆ ಆಯಿತು. ಆಗ ರಾಮುಲು ಮೊದಲ ಬಾರಿಗೆ ಶಾಸಕರಾಗಿದ್ದರು. ಕೊಲೆ ಆರೋಪ ಅವರ ಮೇಲೆ ಬಂದಿತು. ಆದರೆ ಆ ಕೊಲೆಯನ್ನು ಹಣ ಕೊಟ್ಟು ಮಾಡಿಸಿದ್ದು ಬೇರೆಯವರು. ಆ ಇಬ್ಬರ ವಿರುದ್ಧ ಆರೋಪ ಮಾಡಿದಾಗ ಅವರು ಮಾನನಷ್ಟ ಮೊಕದ್ದಮೆ ಹಾಕಿದರು ಎಂದರು.

‘ನಾನು ನನ್ನ ಸ್ನೇಹಿತನಿಗೆ ದ್ರೋಹ ಮಾಡಿದೆ, ಅವಮಾನ ಮಾಡಿದೆ ಎಂದು ರಾಮುಲು ಬಳ್ಳಾರಿಯಮ್ಮ ದೇವಿ ಬಳಿ ಹೋಗಿ ಕಣ್ಣೀರು ಹಾಕಲಿ. ಕರ್ಮ ಯಾರನ್ನೂ ಬಿಡುವುದಿಲ್ಲ. ರಾಮುಲು ನನ್ನ ವಿರುದ್ಧ ಸ್ವಾಮಿ ದ್ರೋಹ, ಆಸ್ತಿ ದ್ರೋಹ ಮತ್ತು ಮಾತೃ ದ್ರೋಹ ಮಾಡಿದ್ದಾರೆ’ ಎಂದು ಜನಾರ್ದನ ರೆಡ್ಡಿ ಹೇಳಿದರು.

ಬಿ.ವೈ.ವಿಜಯೇಂದ್ರ ಅವರನ್ನು ಅದ್ಯಕ್ಷ ಮಾಡಿದ್ದು ಪಕ್ಷದ ವರಿಷ್ಠರು. ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು ಮತ್ತು ಕೆಲಸ ಮಾಡಬೇಕು. ರೆಡ್ಡಿ ಮತ್ತು ವಿಜಯೇಂದ್ರ ವಿರುದ್ಧ ಮಾತನಾಡಿ ದೊಡ್ಡವನಾಗುತ್ತೇನೆ ಎಂದು ಅಂದುಕೊಂಡರೆ ದಡ್ಡತನ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.