ADVERTISEMENT

ಜಾತ್ಯತೀತವಾದರೆ ಮುಸ್ಲಿಮರೂ ಬಿಜೆಪಿ ಜೊತೆ ಇರುತ್ತಾರೆ: ರೆಹಮಾನ್‌ ಖಾನ್‌

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 9:39 IST
Last Updated 23 ಅಕ್ಟೋಬರ್ 2021, 9:39 IST
ರೆಹಮಾನ್‌ ಖಾನ್‌
ರೆಹಮಾನ್‌ ಖಾನ್‌   

ಬೆಂಗಳೂರು: ‘ಮುಸ್ಲಿಮರ ಕೈಹಿಡಿಯಲು ಯಾವುದೇ ರಾಜಕೀಯ ಪಕ್ಷ ಬೇಕಿಲ್ಲ. ಸಂವಿಧಾನ ಒಂದೇ ಸಾಕು. ನಮ್ಮದು ಜಾತ್ಯತೀತ ದೇಶ. ಕಾಂಗ್ರೆಸ್ ಕೂಡ ಜಾತ್ಯತೀತ ಪಕ್ಷ. ಹೀಗಾಗಿ, ಮುಸ್ಲಿಂ ಸಮುದಾಯ ಕಾಂಗ್ರೆಸ್ ಜೊತೆಗಿದೆ. ಬಿಜೆಪಿ ಜಾತ್ಯತೀತವಾದರೆ ಮುಸ್ಲಿಮರೂ ಪಕ್ಷದ ಜೊತೆಗಿರುತ್ತಾರೆ’ ಎಂದು ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್‌ ಖಾನ್‌ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ದೇಶದಲ್ಲಿ ಮುಸ್ಲಿಂ ಸಮುದಾಯದವರು 22 ಕೋಟಿ ಇದ್ದಾರೆ. ಹೀಗಿರುವಾಗ ದೇಶದಲ್ಲಿ ಮುಸ್ಲಿಮರು ಹೇಗೆ ಅಲ್ಪಸಂಖ್ಯಾತರಾಗುತ್ತಾರೆ‘ ಎಂದು ಪ್ರಶ್ನಿಸಿದರು.

ಸಿ.ಎಂ ಇಬ್ರಾಹಿಂ ಕಾಂಗ್ರೆಸ್‌ ತೊರೆಯುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರು ಪಕ್ಷದ ಹಿರಿಯ ನಾಯಕ. ಅವರನ್ನು ವಿಧಾನ ಪರಿಷತ್‌ ನಾಯಕರನ್ನಾಗಿ ಮಾಡಬೇಕೋ ಬೇಡವೋ ಎಂಬುದಕ್ಕೆ ಸಮಾಜದ ಬಣ್ಣ ಕೊಡುವುದು ಬೇಡ. ಅವರು ಜೆಡಿಎಸ್‌ನಿಂದ ಕಾಂಗ್ರೆಸ್‌ ಸೇರಿದಾಗ ಸಚಿವರನ್ನಾಗಿ ಮಾಡಲಾಗಿತ್ತು. ನನಗೆ ಅಧಿಕಾರ ನೀಡಿದ್ದು ಕಾಂಗ್ರೆಸ್ ಪಕ್ಷ. ಅವರಿಗೂ ಕಾಂಗ್ರೆಸ್ ಪಕ್ಷ ಅಧಿಕಾರ ನೀಡಿಲ್ಲವೇ’ ಎಂದು ಮರು ಪ್ರಶ್ನಿಸಿದರು.

ADVERTISEMENT

ನೀರಾವರಿ ಇಲಾಖೆಯಲ್ಲಿನ ‘ಪರ್ಸಂಟೇಜ್‌’ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಕೆ‍ಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕುರಿತು ಎಂ.ಎ. ಸಲೀಂ ಮತ್ತು ಪಕ್ಷದ ನಾಯಕ ವಿ.ಎಸ್‌. ಉಗ್ರಪ್ಪನಡೆಸಿದ ಸಂಭಾಷಣೆ ಕುರಿತು ಮಾತನಾಡದ ಅವರು, ‘ಶಿಸ್ತು ಪಾಲನಾ ಸಮಿತಿ ನೀಡಿದ್ದ ನೋಟಿಸ್‌ಗೆ ಇಬ್ಬರೂ ಉತ್ತರ ನೀಡಿದ್ದಾರೆ. ನಾನಿನ್ನೂ ಅವರ ಉತ್ತರವನ್ನು ನೋಡಿಲ್ಲ. ಶಿಸ್ತು ಸಮಿತಿಯ ಸಭೆಯಲ್ಲಿ ಅವರ ಉತ್ತರ ನೋಡುತ್ತೇವೆ’ ಎಂದರು.

‘ಸಲೀಂ ಮಾತನಾಡಿದ್ದು ಮೇಲ್ನೋಟಕ್ಕೆ ಸ್ಪಷ್ಟವಾಗಿತ್ತು. ಹೀಗಾಗಿ, ಅವರ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ. ಆದರೆ, ಉಗ್ರಪ್ಪ ಅವರ ಮಾತು ಸ್ಪಷ್ಟವಾಗಿಲ್ಲ. ಅವರು ನಗೆಯಾಡಿದ್ದು ಕಾಣಿಸುತ್ತಿತ್ತು. ಕೆಪಿಸಿಸಿ ಅಧ್ಯಕ್ಷರನ್ನು ನಾವೇ ನೇಮಕ ಮಾಡಿದ್ದು ಎಂದಿದ್ದಾರೆ. ಅದೇನು ಮಹಾ ತಪ್ಪಲ್ಲ’ ಎಂದರು

ಜಾಫರ್ ಷರೀಫ್ ಮೊಮ್ಮಗನನ್ನ ಸೋಲಿಸಿದ್ದು ಸಿದ್ದರಾಮಯ್ಯ ಎಂಬ ಎಚ್‌.ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ರೆಹಮಾನ್‌ ಖಾನ್‌, ‘ಜಾಫರ್ ಷರೀಫ್ ಮೊಮ್ಮಗನಿಗೆ ಜೆಡಿಎಸ್‌ನಿಂದ ಟಿಕೆಟ್ ಕೊಟ್ಟು ಗೆಲ್ಲಿಸಬೇಕಿತ್ತು’ ಎಂದು ಕುಟುಕಿದರು.

‘ಕುಮಾರಸ್ವಾಮಿ ಹೇಳಿಕೆ ಎಲ್ಲವೂ ಸತ್ಯವಲ್ಲ. ಜಾಫರ್ ಷರೀಫ್ ಮೊಮ್ಮಗನನ್ನು ಸಿದ್ದರಾಮಯ್ಯ ಸೋಲಿಸಿದ್ದು ಎಂದಿದ್ದಾರೆ. ಹಾಗಾದರೆ ಜಾಫರ್ ಷರೀಫ್ ಮೊಮ್ಮಗನಿಗೆ ಕುಮಾರಸ್ವಾಮಿ ಟಿಕೆಟ್ ಕೊಟ್ಟು ಗೆಲ್ಲಿಸಬೇಕಿತ್ತು. ಯಾಕೆ ಹಾಗೆ ಮಾಡಲಿಲ್ಲ. ಹೀಗೆ ಮಾತನಾಡುತ್ತಾ ಹೋದರೆ ನಾವೂ ಕೂಡ ಸಾಕಷ್ಟು ಮಾತನಾಡಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.