
ಬೆಂಗಳೂರು: ಕರ್ನಾಟಕ ವಿದ್ಯುತ್ ನಿಮಗದ (ಕೆಪಿಸಿಎಲ್) 622 ಹುದ್ದೆಗಳ ನೇಮಕಾತಿಗೆ ನಡೆಸಿದ್ದ ಮರುಪರೀಕ್ಷೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಇಂದು ಪ್ರಕಟಿಸಿದೆ.
2025ರ ಡಿಸೆಂಬರ್ 27 ಹಾಗೂ 28ರಂದು ಮರು ಪರೀಕ್ಷೆ ನಡೆದಿತ್ತು.
ಈ ಕುರಿತು 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿರುವ ಕೆಇಎ, 'ಶೀಘ್ರದಲ್ಲೇ ಅಭ್ಯರ್ಥಿಗಳು ಪಡೆದ ಅಂಕಗಳ ವಿವರ ಸಮೇತ ಪೂರ್ಣ ಪಟ್ಟಿಯನ್ನು ಕೆಪಿಸಿಎಲ್‌ಗೆ ಹಸ್ತಾಂತರ ಮಾಡಲಾಗುತ್ತದೆ' ಎಂದು ತಿಳಿಸಿದೆ.
ಹಿಂದೆ ನಡೆಸಲಾಗಿದ್ದ ನೇಮಕಾತಿ ಪರೀಕ್ಷೆಯ ಫಲಿತಾಂಶಗಳನ್ನು ಸುಪ್ರೀಂ ಕೋರ್ಟ್ ಆದೇಶದಂತೆ ರದ್ದು ಮಾಡಲಾಗಿತ್ತು.
'ತಾತ್ಕಾಲಿಕ ಫಲಿತಾಂಶಕ್ಕೆ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ, ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗಿದೆ' ಎಂದು ಸ್ಪಷ್ಟಪಡಿಸಿರುವ ಪ್ರಾಧಿಕಾರ, 'ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮರು ಪರೀಕ್ಷೆ ನಡೆಸಲಾಯಿತು. ಎಂಟು ದಿನಗಳಲ್ಲಿ ತಾತ್ಕಾಲಿಕ ಹಾಗೂ ಹತ್ತು ದಿನಗಳಲ್ಲಿ ಅಂತಿಮ ಫಲಿತಾಂಶವನ್ನು ಪ್ರಕಟಿಸುವ ಮೂಲಕ ಕೆಇಎ ದಾಖಲೆ ಬರೆದಿದೆ' ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಹೇಳಿದ್ದಾರೆ.
ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪಟ್ಟಿಯನ್ನು ನೋಡಬಹುದಾಗಿದೆ.