ADVERTISEMENT

ಕೆಪಿಎಸ್‌ಸಿ: ಹುದ್ದೆ ಭರ್ತಿಗೆ ಆತುರ

ಒಳ ಮೀಸಲಾತಿ ಅನ್ವಯಿಸದೇ 945 ಕೃಷಿ ಅಧಿಕಾರಿಗಳ ಹುದ್ದೆ ತುಂಬಲು ಸೆ. 6ರಿಂದ ಪರೀಕ್ಷೆ

ಚಂದ್ರಹಾಸ ಹಿರೇಮಳಲಿ
Published 29 ಆಗಸ್ಟ್ 2025, 23:22 IST
Last Updated 29 ಆಗಸ್ಟ್ 2025, 23:22 IST
<div class="paragraphs"><p>ಕೆಪಿಎಸ್‌ಸಿ </p></div>

ಕೆಪಿಎಸ್‌ಸಿ

   

ಬೆಂಗಳೂರು: ಪರಿಶಿಷ್ಟ ಸಮುದಾಯ ಪ್ರತಿನಿಧಿಸುವ ಸಚಿವರ ವಿರೋಧದ ಮಧ್ಯೆಯೂ ಒಳಮೀಸಲಾತಿ ಅನ್ವಯಿಸದೆ 817 ಸಹಾಯಕ ಕೃಷಿ ಅಧಿಕಾರಿಗಳೂ ಸೇರಿ 945 ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮುಂದಾಗಿದೆ.

ಕೃಷಿ ಇಲಾಖೆಯಲ್ಲಿ ‘ಎ’ ಮತ್ತು ‘ಬಿ’ ವೃಂದದ 3,319 ಹುದ್ದೆಗಳು ಖಾಲಿ ಇದ್ದು, ಅವುಗಳಲ್ಲಿ ‘ಎ’ ವೃಂದದ 128 ಹುದ್ದೆಗಳೂ ಸೇರಿ 945 ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಸಲು ಕೋರಿ ಕೆಪಿಎಸ್‌ಸಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ನಂತರ 2024ನೇ ಸೆಪ್ಟೆಂಬರ್‌ 20ರಂದು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಅದೇ ವೇಳೆಗೆ ಒಳಮೀಸಲಾತಿ ಕುರಿತು ಸುಪ್ರೀಂಕೋರ್ಟ್‌ ತೀರ್ಪು ಬಂದಿದ್ದರಿಂದ ಅಧಿಸೂಚನೆ ರದ್ದು ಮಾಡಲಾಗಿತ್ತು. ಕೆಪಿಎಸ್‌ಸಿ ಮತ್ತೆ 2024ನೇ ಡಿಸೆಂಬರ್‌ 31ರಂದು ತಿದ್ದುಪಡಿ ಅಧಿಸೂಚನೆ ಹೊರಡಿಸಿತ್ತು.

ADVERTISEMENT

ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳ ದತ್ತಾಂಶ ಸಂಗ್ರಹಿಸಿ, ಒಳ ಮೀಸಲಾತಿ ಕಲ್ಪಿಸುವ ಕುರಿತು ಪರಿಶೀಲಿಸಿ, ಸೂಕ್ತ ಶಿಫಾರಸುಗಳ ಸಹಿತ ವರದಿ ನೀಡಲು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಾಜ್ಯ ಸರ್ಕಾರ ರಚಿಸಿತ್ತು. ಆಯೋಗ ವರದಿ ನೀಡಿ, ಒಳ ಮೀಸಲಾತಿ ಇತ್ಯರ್ಥವಾಗುವವರೆಗೆ 2024ನೇ ಅಕ್ಟೋಬರ್‌ 28ಕ್ಕೆ ಅನ್ವಯವಾಗುವಂತೆ ಎಲ್ಲ ನೇಮಕಾತಿ ಅಧಿಸೂಚನೆಗಳನ್ನು ತಡೆಹಿಡಿಯಬೇಕು. ಇಲಾಖೆಗಳು, ನಿಗಮ–ಮಂಡಳಿಗಳು ಸೇರಿದಂತೆ ಯಾವುದೇ ಸರ್ಕಾರಿ ಸಂಸ್ಥೆಗಳು ನೇಮಕಾತಿ ಅಧಿಸೂಚನೆ ಹೊರಡಿಸಬಾರದು ಎಂದು ಸರ್ಕಾರ ಸುತ್ತೋಲೆ ಹೊರಡಿಸಿತ್ತು.

ಸರ್ಕಾರದ ಸ್ಪಷ್ಟ ಸೂಚನೆ ಇದ್ದರೂ ಕೆಪಿಎಸ್‌ಸಿಯು ಕಲ್ಯಾಣ ಕರ್ನಾಟಕದ 273 ಹುದ್ದೆಗಳಿಗೂ ಸೇರಿ ನೇಮಕಾತಿ ಪ್ರಕ್ರಿಯೆ ಆರಂಭಿಸಿ, ಪರೀಕ್ಷಾ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಿದೆ. 

‘ಪರಿಶಿಷ್ಟ ಜಾತಿಗೆ ಲಭ್ಯವಿರುವ ಶೇಕಡ 17ರಷ್ಟು ಮೀಸಲಾತಿಯ ಪೈಕಿ, ಎಡಗೈ ಸಂಬಂಧಿತ ಜಾತಿಗಳಿರುವ ‘ಎ’ ಪ್ರವರ್ಗಕ್ಕೆ ಶೇ 6, ಬಲಗೈ ಸಂಬಂಧಿತ ಜಾತಿಗಳಿರುವ ‘ಬಿ’ ಪ್ರವರ್ಗಕ್ಕೆ ಶೇ 6 ಹಾಗೂ ಲಂಬಾಣಿ, ಬೋವಿ, ಕೊರಚ, ಕೊರಮ ಮತ್ತು ಅಲೆಮಾರಿ ಜಾತಿಗಳಿರುವ ‘ಸಿ’ ಪ್ರವರ್ಗಕ್ಕೆ ಶೇ 5ರಷ್ಟು ಒಳ ಮೀಸಲಾತಿ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ, ಕೃಷಿ ಇಲಾಖೆಯಲ್ಲಿ ಖಾಲಿ ಇರುವ ‘ಎ’ ಮತ್ತು ‘ಬಿ’ ವೃಂದದ 945 ಹುದ್ದೆಗಳನ್ನು ಭರ್ತಿ ಮಾಡಬೇಕು. ಇಲ್ಲದಿದ್ದರೆ ದಲಿತ ಸಮುದಾಯದ ಕೃಷಿ ಪದವೀಧರ (ಬಿ.ಎಸ್‌ಸಿ) ಅಭ್ಯರ್ಥಿಗಳಿಗೆ ಭಾರಿ ಅನ್ಯಾಯವಾಗುತ್ತದೆ. ದಲಿತರ ದಶಕಗಳ ಒಳ ಮೀಸಲಾತಿ ಹೋರಾಟಕ್ಕೆ ಅರ್ಥವೇ ಇಲ್ಲದಂತೆ ಆಗುತ್ತದೆ’ ಎನ್ನುತ್ತಾರೆ ಮಾಜಿ ಸಚಿವ ಎಚ್‌.ಆಂಜನೇಯ.

ಕೃಷಿ ಅಧಿಕಾರಿಗಳ ಹುದ್ದೆ ಭರ್ತಿ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಲು ಸೂಚಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ
ಡಾ.ಎಚ್‌.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.