ADVERTISEMENT

KPSC ಭ್ರಷ್ಟಾಚಾರ: ಲೋಕಾಯುಕ್ತ ಶಿಫಾರಸುಗಳ ತಿರಸ್ಕಾರ; ವಿಚಾರಣೆಗೆ ಸರ್ಕಾರ ನಕಾರ

2011ರ ಕೆಪಿಎಸ್‌ಸಿ ನೇಮಕಾತಿ ಅಕ್ರಮ–ಕ್ರಮ ಕೈಬಿಡಲು ನಿರ್ಧಾರ; ಲೋಕಾಯುಕ್ತ ಶಿಫಾರಸುಗಳ ತಿರಸ್ಕಾರ

​ಪ್ರಜಾವಾಣಿ ವಾರ್ತೆ
Published 22 ಮೇ 2025, 21:17 IST
Last Updated 22 ಮೇ 2025, 21:17 IST
ಕೆಪಿಎಸ್‌ಸಿ
ಕೆಪಿಎಸ್‌ಸಿ    

ಬೆಂಗಳೂರು: 2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿದ, ಕರ್ನಾಟಕ ಲೋಕಸೇವಾ ಆಯೋಗದ ಹಿಂದಿನ ಅಧ್ಯಕ್ಷರು ಮತ್ತು ಎಂಟು ಸದಸ್ಯರ ವಿರುದ್ಧದ ವಿಚಾರಣೆಯ ಪ್ರಸ್ತಾವ ಕೈಬಿಡಲು ಸರ್ಕಾರ ತೀರ್ಮಾನಿಸಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಲವು ಅಧಿಕಾರಿಗಳ ವಿರುದ್ಧ ವಿಚಾರಣೆ ಹಾಗೂ ಮತ್ತೆ ಕೆಲವರ ವಿರುದ್ಧ ಆರೋಪ ಸಾಬೀತಾಗಿಲ್ಲ ಎಂದು ಲೋಕಾಯುಕ್ತ ಹೇಳಿತ್ತು. ವಿಚಾರಣೆ ನಡೆಸುವಂತೆ ಲೋಕಾಯುಕ್ತ ಮಾಡಿದ್ದ ಶಿಫಾರಸುಗಳನ್ನು ಸರ್ಕಾರ ಕೈಬಿಟ್ಟಿದೆ.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಈ ವಿಷಯ ತಿಳಿಸಿದರು.

ADVERTISEMENT

ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಆಯ್ಕೆ ಪ್ರಕಿಯೆಯಲ್ಲಿ ಅವ್ಯವಹಾರ ನಡೆದಿರುವ ತನಿಖೆ ನಡೆಸಿದ್ದ ಸಿಐಡಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. 

2011ರ ನೇಮಕಾತಿ ವೇಳೆ ಕೆಪಿಎಸ್‌ಸಿಯ ಅಧ್ಯಕ್ಷರಾಗಿದ್ದ ಗೋನಾಳ್ ಭೀಮಪ್ಪ, ಸದಸ್ಯರಾಗಿದ್ದ ಮಂಗಳಾ ಶ್ರೀಧರ್, ಎಸ್.ಆರ್.ರಂಗಮೂರ್ತಿ, ಬಿ.ಎಸ್.ಕೃಷ್ಣಪ್ರಸಾದ್, ಎನ್.ಮಹದೇವ್, ಎಚ್.ವಿ. ಪಾರ್ಶ್ವನಾಥ್, ಎಸ್.ದಯಾಶಂಕರ್, ಎಚ್.ಡಿ. ಪಾಟೀಲ, ಎನ್.ರಾಮಕೃಷ್ಣ ಹಾಗೂ ಬಿ.ಟಿ. ಕನಿರಾಮ್ ಅವರ ವಿರುದ್ಧದ ವಿಚಾರಣೆಗೆ ರಾಷ್ಟ್ರಪತಿಯವರಿಂದ ಅನುಮತಿ ಪಡೆಯಲು ಸಿಐಡಿ ಶಿಫಾರಸು ಮಾಡಿತ್ತು. ಈ ಪ್ರಸ್ತಾಪ ಕೈಬಿಡಲು ತೀರ್ಮಾನಿಸಲಾಯಿತು ಎಂದು ಪಾಟೀಲ ತಿಳಿಸಿದರು.

ಇತರ ಪ್ರಕರಣಗಳು:

  • ಅರಣ್ಯ ಇಲಾಖೆಯ ಹಿಂದಿನ ವಲಯ ಅರಣ್ಯಾಧಿಕಾರಿ (ಈಗ ನಿವೃತ್ತ) ಆರ್‌.ಸುರೇಶ್‌ ಮತ್ತು ಹಾಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೈಯ್ಯದ್‌ ನಿಜಾಮುದ್ದೀನ್‌ ವಿರುದ್ಧ 2015–16 ನೇ ಸಾಲಿನಲ್ಲಿ ಕಳಪೆ ಕಾಮಗಾರಿ ಕೈಗೊಂಡಿದ್ದಾರೆ ಎಂಬ ಕಾರಣಕ್ಕೆ ದೂರು ದಾಖಲಾಗಿತ್ತು. ಇವರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿಲ್ಲ ಎಂದು ಲೋಕಾಯುಕ್ತ ಸಂಸ್ಥೆ ಹೇಳಿದೆ. ಆದ್ದರಿಂದ ಪ್ರಕರಣ ಕೈ ಬಿಡಲಾಗಿದೆ.

  • ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಸಂಗನಾಳ ವಿರುದ್ಧದ ಆರೋಪವನ್ನು ದೋಷಮುಕ್ತಗೊಳಿಸಿ ಲೋಕಾಯುಕ್ತ ಪ್ರಕರಣ ಮುಕ್ತಾಯಗೊಳಿಸಿದೆ. ನ್ಯಾಯಾಲಯವೂ ಪ್ರಕರಣ ಖುಲಾಸೆಗೊಳಿಸಿ, ದೋಷ ಮುಕ್ತಗೊಳಿಸಿದೆ.

  • ಕಾವೇರಿ ನೀರಾವರಿ ನಿಗಮ ನಿಯಮಿತದ ಸಹಾಯಕ ಎಂಜಿನಿಯರ್‌ ಅನಿಲ್‌ಕುಮಾರ್ ವೈ.ಡಿ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಹಾದೇವ ಬಿ.ಕೆ ವಿರುದ್ಧ ಇಲಾಖೆ ವಿಚಾರಣೆ ನಡೆಸಲು ಮಾಡಿರುವ ಶಿಫಾರಸು ಕೈಬಿಡಲಾಗಿದೆ.

  • ಕರ್ನಾಟಕ ನೀರಾವರಿ ನಿಗಮದ ನಿವೃತ್ತ ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳಾದ ವೀರಭದ್ರಸ್ವಾಮಿ ಮತ್ತು ಕಲ್ಲಪ್ಪ ಅವರು ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮಾಡಿದ್ದ ಶಿಫಾರಸು ಕೈಬಿಡಲಾಗಿದೆ.

ಸೇವೆಗೆ ಮರುಸ್ಥಾಪನೆ: ವಿಜಯಪುರ ವೈದ್ಯಾಧಿಕಾರಿ ಡಾ.ಶಿವಯೋಗಿ ಮಲ್ಲೇಶಪ್ಪ ಅವರ ಮೇಲ್ಮನವಿ ಪುರಸ್ಕರಿಸಿ ದಂಡನಾ ಆದೇಶ ರದ್ದುಗೊಳಿಸಿರುವ ಹೈಕೋರ್ಟ್‌ನ ಧಾರವಾಡ ಪೀಠ ಅವರ ಅವರಿಗೆ ಮತ್ತೆ ಹುದ್ದೆ ನೀಡುವಂತೆ ಸೂಚಿಸಿದೆ. ಆದೇಶವನ್ನು ಪಾಲಿಸುವುದರ ಜತೆಗೆ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ.

ಈ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಈಗಾಗಲೇ ನೇಮಕಾತಿ ಆಗಿದೆ. ಕರ್ನಾಟಕ ಲೋಕಸೇವಾ ಆಯೋಗ ಸಾಂವಿಧಾನಿಕ ಸಂಸ್ಥೆಯಾಗಿದ್ದು, ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಆರೋಪ ಹೊತ್ತವರು ಅಧಿಕಾರದಲ್ಲಿ ಇದ್ದಿದ್ದರೆ, ಅಲ್ಲಿಂದ ಇಳಿಸುವುದಕ್ಕೆ ಮಾತ್ರ ಸಾಧ್ಯವಿತ್ತು. ಈಗ ಯಾರೂ ಅಧಿಕಾರದಲ್ಲಿ ಇಲ್ಲ. ಆದ್ದರಿಂದ ಪ್ರಕರಣವನ್ನು ಮುಕ್ತಾಯಗೊಳಿಸಲು ನಿರ್ಧರಿಸಲಾಯಿತು.
– ಎಚ್‌.ಕೆ.ಪಾಟೀಲ, ಕಾನೂನು ಸಚಿವ

ಮೀನಾ, ರಾಮಮೂರ್ತಿ ವಿರುದ್ಧ ಕ್ರಮ ಇಲ್ಲ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಹಿಂದಿನ ಅಧ್ಯಕ್ಷರಾಗಿದ್ದ ನಿವೃತ್ತ ಐಎಎಸ್‌ ಅಧಿಕಾರಿಗಳಾದ ಭರತ್‌ ಲಾಲ್‌ ಮೀನಾ ಮತ್ತು ಪಿ.ಬಿ.ರಾಮಮೂರ್ತಿ ವಿರುದ್ಧ ಕರ್ನಾಟಕ ಲೋಕಾಯುಕ್ತ ಸಲ್ಲಿಸಿದ್ದ ವರದಿಯ ಶಿಫಾರಸುಗಳನ್ನು ಕೈಬಿಡಲು ಸಚಿವ ಸಂಪುಟ ತೀರ್ಮಾನಿಸಿದೆ.

ಇವರು ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವ ಸಂದರ್ಭದಲ್ಲಿ  ಕಟ್ಟಡಗಳ ಮಾಲೀಕರಿಗೆ ಅನುಕೂಲ ಮಾಡಿ, ತಿರುಚಿ ಅಭಿಪ್ರಾಯ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಈ ಆರೋಪವನ್ನು ತಳ್ಳಿ ಹಾಕಿ ಸಚಿವ ಸಂಪುಟ ಉಪಸಮಿತಿಯು, ಕಟ್ಟಡ ನಕ್ಷೆ ಅನುಮೋದನೆಯು ಚಾಲ್ತಿಯಲ್ಲಿರುವ ಕಟ್ಟಡ ಬೈ–ಲಾ ಅನುಸಾರವಾಗಿಯೇ ಇದೆ. ಆದ್ದರಿಂದ ಶಿಸ್ತು ವಿಚಾರಣೆ ನಡೆಸಬೇಕು ಎನ್ನುವ ಲೋಕಾಯುಕ್ತದ ಶಿಫಾರಸು ಕೈಬಿಡಲು ಶಿಫಾರಸು ಮಾಡಿತ್ತು ಎಂದು ಎಚ್‌.ಕೆ.ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.