ADVERTISEMENT

ಕೆಪಿಎಸ್‌ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ: ದೂರು

​ಪ್ರಜಾವಾಣಿ ವಾರ್ತೆ
Published 5 ಮೇ 2025, 16:06 IST
Last Updated 5 ಮೇ 2025, 16:06 IST
ಕೆಪಿಎಸ್‌ಸಿ
ಕೆಪಿಎಸ್‌ಸಿ    

ಬೆಂಗಳೂರು: ಗೆಜೆಟೆಡ್‌ ಪ್ರೊಬೆಷನರಿ ಗ್ರೂಪ್‌ ‘ಎ’ ಮತ್ತು ಗ್ರೂಪ್‌ ‘ಬಿ’ ವೃಂದದ 384 ಹುದ್ದೆಗಳ ನೇಮಕಾತಿಗಾಗಿ ಸೋಮವಾರ (ಮೇ 5) ನಡೆದ ಮುಖ್ಯ ಪರೀಕ್ಷೆಯ ಸಾಮಾನ್ಯ ಅಧ್ಯಯನ–1 ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ದೂರು ಸಲ್ಲಿಸಿದ್ದಾರೆ.

‍ಬೆಂಗಳೂರಿನ ಕಸ್ತೂರಬಾ ನಗರದ ಬಿಬಿಎಂಪಿ ಸಂಯೋಜಿತ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಪ್ರಶ್ನೆಪತ್ರಿಕೆ ಸೋರಿಕೆಯಾಗಿವೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.

‘ಕೇಂದ್ರಕ್ಕೆ ಕಳುಹಿಸಿದ ಪ್ರಶ್ನೆಪತ್ರಿಕೆಯ ಬಂಡಲ್‌ ಮೇಲ್ಭಾಗದಲ್ಲಿ ಮಾತ್ರ ಮುಚ್ಚಿದ್ದು, ಒಳ ಭಾಗದಲ್ಲಿ (ಎರಡನೇ ಶೀಲ್ಡ್‌) ತೆರೆದಿತ್ತು. ಈ ಕುರಿತು ಪರೀಕ್ಷಾ ಮೇಲ್ವಿಚಾರಕರು, ಅಲ್ಲಿನ ಪ್ರಾಂಶುಪಾಲರನ್ನು ಪ್ರಶ್ನಿಸಿದಾಗ, ಅದೇ ರೀತಿಯೇ ಕಳಹಿಸಿರುವುದಾಗಿ ಕೆಪಿಎಸ್‌ಸಿ ಹೇಳಿದೆ ಎಂದು ಉತ್ತರಿಸಿದ್ದರು. ಪರೀಕ್ಷೆಯ ನಂತರ ಕೇಂದ್ರಕ್ಕೆ ಬಂದ ಅಧಿಕಾರಿಗಳು, ಪ್ರಶ್ನೆ ಮಾಡಿದ ಅಭ್ಯರ್ಥಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ಪರೀಕ್ಷಾ ಸಿಬ್ಬಂದಿ ಮತ್ತು ಅಭ್ಯರ್ಥಿಗಳ ಮಧ್ಯೆ ಜಟಾಪಟಿಗೆ ದಾರಿ ಮಾಡಿಕೊಟ್ಟಿತು. ಕೇಂದ್ರದ ಒಳಗೆ ಮೊಬೈಲ್‌ ನಿಷೇಧವಿದ್ದರೂ ಪ್ರಕರಣವನ್ನು ಚಿತ್ರೀಕರಿಸಲಾಗಿದೆ. ಮೊಬೈಲ್‌ ತರಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಅಭ್ಯರ್ಥಿಯ ಮೇಲೆ ನಡೆದ ಹಲ್ಲೆ ಪ್ರಕರಣದ ವಿರುದ್ಧ ಪೊಲೀಸ್‌ ಠಾಣೆಗೂ ದೂರು ನೀಡಲಾಗುವುದು. ಕೆಪಿಎಸ್‌ಸಿ ಎಡವಟ್ಟುಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಅಭ್ಯರ್ಥಿಗಳು ಹೇಳಿದರು. 

ಸಾಮಾನ್ಯ ಅಧ್ಯಯನ–2 ಪರೀಕ್ಷೆ ಮೇ 7ರಂದು:

ಮೇ 7ರಂದು ಬೆಳಿಗ್ಗೆ 9ರಿಂದ 12, ಸಾಮಾನ್ಯ ಅಧ್ಯಯನ–2; ಮೇ 7ರಂದು ಮಧ್ಯಾಹ್ನ ‌2ರಿಂದ 5, ಸಾಮಾನ್ಯ ಅಧ್ಯಯನ–3; ಮೇ 9ರಂದು ಬೆಳಿಗ್ಗೆ 9ರಿಂದ 12, ಸಾಮಾನ್ಯ ಅಧ್ಯಯನ–4; ಮೇ 9ರಂದು ಮಧ್ಯಾಹ್ನ 2  ಗಂಟೆಯಿಂದ 5 ಗಂಟೆಯವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.