ADVERTISEMENT

ಕೆಪಿಎಸ್‌ಸಿ ನೌಕರರೇ ಸೋರಿಕೆ ಸೂತ್ರದಾರರು !

ಶೀಘ್ರಲಿಪಿಗಾರ್ತಿ, ಎಸ್‌ಡಿಎ ಬಂಧನ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 19:30 IST
Last Updated 25 ಜನವರಿ 2021, 19:30 IST
ಕೆಪಿಎಸ್‌ಸಿ ಸಿಬ್ಬಂದಿ
ಕೆಪಿಎಸ್‌ಸಿ ಸಿಬ್ಬಂದಿ    

ಬೆಂಗಳೂರು: ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕ ರಣದಲ್ಲಿ ಪ್ರಮುಖ ಆರೋಪಿಗಳು ಎನ್ನಲಾದ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಇಬ್ಬರು ನೌಕರರನ್ನು ಸಿಸಿಬಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

‘ಕೆಪಿಎಸ್‌ಸಿ ಬೆಂಗಳೂರು ಕಚೇರಿಯ ಶೀಘ್ರಲಿಪಿಗಾರ್ತಿ ಸನಾ ಬೇಡಿ ಹಾಗೂ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ರಮೇಶ್ ಅಲಿಯಾಸ್ ರಾಮಪ್ಪ ಹೆರ ಕಲ್ ಬಂಧಿತರು. ಇವರೇ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು. ಪ್ರಶ್ನೆಪತ್ರಿಕೆ ಕದ್ದು ಮಾರಾಟ ಮಾಡಿದ್ದರು’ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.

‘ಪ್ರಕರಣದಲ್ಲಿ ಬಂಧಿತರ ಸಂಖ್ಯೆ 16ಕ್ಕೆ ಏರಿದೆ. ಆರೋಪಿಗಳಿಂದ ಇದು ವರೆಗೂ ಒಟ್ಟು ₹ 82 ಲಕ್ಷ ರೂಪಾಯಿ ಜಪ್ತಿ ಮಾಡಲಾಗಿದೆ. ಮತ್ತಷ್ಟು ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ’ ಎಂದೂ ತಿಳಿಸಿದರು.

ADVERTISEMENT

ಪೆನ್‌ಡ್ರೈವ್‌ನಲ್ಲಿ ಪ್ರಶ್ನೆಪತ್ರಿಕೆ

‘ಪರೀಕ್ಷಾ ನಿಯಂತ್ರಕರ ವಿಭಾಗದಲ್ಲಿ ಸನಾ ಕೆಲಸ ಮಾಡುತ್ತಿದ್ದಳು. ರಮೇಶ್ ಸಹ ಮತ್ತೊಂದು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಕೆಲಸದ ಸ್ಥಳದಲ್ಲೇ ಅವ ರಿಬ್ಬರಿಗೂ ಪರಿಚಯವಾಗಿತ್ತು’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಪ್ರಶ್ನೆಪತ್ರಿಕೆ ಸಿದ್ಧತೆ ಮಾಡುವ ಕೆಲಸ ದಲ್ಲಿ ಸನಾ ಸಹ ನಿರತಳಾಗಿದ್ದಳು. ಅದು ತಿಳಿಯುತ್ತಿದ್ದಂತೆ ರಮೇಶ್, ಆಕೆ ಜೊತೆ ಹೆಚ್ಚು ಒಡನಾಟ ಬೆಳೆಸಿದ್ದ. ಎಫ್‌ಡಿಎ ಪರೀಕ್ಷೆ ಕಟ್ಟಿರುವುದಾಗಿ ಹೇಳುತ್ತಿದ್ದ ರಮೇಶ್, ಪರೀಕ್ಷೆ ಮುನ್ನಾದಿನವೇ ತನಗೆ ಪ್ರಶ್ನೆಪತ್ರಿಕೆ ನೀಡುವಂತೆ ಕೋರಿದ್ದ. ಆರಂಭದಲ್ಲಿ ಆತನ ಮಾತನ್ನು ಸನಾ ನಿರಾಕರಿಸಿದ್ದಳು.’

‘ನನ್ನದು ಬಡ ಕುಟುಂಬ. ತುಂಬಾ ಆರ್ಥಿಕ ಕಷ್ಟದಲ್ಲಿದ್ದೇನೆ. ಎಫ್‌ಡಿಎ ಹುದ್ದೆಗೆ ಆಯ್ಕೆಯಾಗಿ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕಿದೆ. ದಯ ವಿಟ್ಟು ಸಹಾಯ ಮಾಡಿ’ ಎಂದು ಪುನಃ ರಮೇಶ್, ಸನಾ ಹಿಂದೆ ಬಿದ್ದಿದ್ದ. ಹಲವು ಆಮಿಷಗಳನ್ನೂ ಒಡ್ಡಿದ್ದ. ಆತನ ಮಾತಿಗೆ ಒಪ್ಪಿಕೊಂಡಿದ್ದ ಸನಾ, ಪರೀಕ್ಷೆಗೂ ಎರಡು ದಿನ ಮುನ್ನವೇ ಪ್ರಶ್ನೆಪತ್ರಿಕೆಯ ದತ್ತಾಂಶವನ್ನು ಕದ್ದು ಪೆನ್‌ಡ್ರೈವ್‌ನಲ್ಲಿ ಸಂಗ್ರಹಿಸಿದ್ದಳು. ಅದೇ ಪೆನ್‌ಡ್ರೈವ್‌ನ್ನು ಆಕೆ, ರಮೇಶ್ ಕೈಗೆ ಕೊಟ್ಟಿದ್ದಳು’ ಎಂದೂ ಮೂಲಗಳು ತಿಳಿಸಿವೆ.

ಪ್ರಶ್ನೆಪತ್ರಿಕೆ ಮುದ್ರಿಸಿ ಮಾರಾಟ

‘ಪೆನ್‌ಡ್ರೈವ್ ಕೈಗೆ ಸಿಗುತ್ತಿದ್ದಂತೆ ಆರೋಪಿ, ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಿ ದ್ದ. ಪರಿಚಯಸ್ಥನೇ ಆಗಿದ್ದ ಬೆಳಗಾವಿಯ ರಾಚಪ್ಪ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ಇನ್‌ಸ್ಪೆಕ್ಟರ್ ಚಂದ್ರುನನ್ನು ಸಂಪರ್ಕಿಸಿದ್ದ. ಅವರಿಬ್ಬರಿಂದ ₹ 24 ಲಕ್ಷ ಪಡೆದು, ಪ್ರಶ್ನೆಪತ್ರಿಕೆ ನೀಡಿದ್ದ. ನಂತರ, ತಾನೂ ಪ್ರಶ್ನೆಪತ್ರಿಕೆ ಸಮೇತವೇ ತನ್ನೂರಿಗೆ ಹೋಗಿದ್ದ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಇತ್ತ ರಾಚಪ್ಪ ಹಾಗೂ ಚಂದ್ರು ಸಹ ಅಭ್ಯರ್ಥಿಗಳಿಂದ ತಲಾ ₹ 10 ಲಕ್ಷ ಪಡೆದು ಪ್ರಶ್ನೆಪತ್ರಿಕೆ ಹಂಚಿದ್ದರು. ಪರೀಕ್ಷೆಗೂ ಮುನ್ನಾದಿನವಾದ ಶನಿವಾರ ಚಂದ್ರು ಮನೆ ಮೇಲೆ ದಾಳಿ ನಡೆಸಿದಾಗಲೇ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಬಯಲಿಗೆ ಬಂತು’ ಎಂದೂ ತಿಳಿಸಿವೆ.

ಹಣದ ಬಗ್ಗೆ ಮಾಹಿತಿ ಸಂಗ್ರಹ

ಪ್ರಶ್ನೆಪತ್ರಿಕೆ ಪಡೆಯಲು ಸನಾ ಬೇಡಿ ಎಷ್ಟು ಹಣ ಪಡೆದಿದ್ದಳು ಎಂಬುದು ಇದುವರೆಗೂ ಗೊತ್ತಾಗಿಲ್ಲ. ಸನಾ ಹಾಗೂ ರಮೇಶ್‌ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಕಸ್ಟಡಿಗೆ ನೀಡುವಂತೆ ನ್ಯಾಯಾಲಯವನ್ನು ಕೋರಲಾಗುವುದು. ಕಸ್ಟಡಿಗೆ ಸಿಕ್ಕ ನಂತರ, ವಿಚಾರಣೆ ನಡೆಸಿದಾಗಲೇ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.