ADVERTISEMENT

ಕೆಪಿಟಿಸಿಎಲ್‌, ಎಸ್ಕಾಂ | ಪಿಂಚಣಿ ಹೊರೆ: ಗ್ರಾಹಕರಿಗೆ ಬರೆ

ಕೆಪಿಟಿಸಿಎಲ್‌, ಎಸ್ಕಾಂಗಳ ಭಾರ ಬಳಕೆದಾರರ ಜೇಬಿಗೆ l ಕೃಷಿ ಪಂಪ್‌ಸೆಟ್‌ಗೂ ಅನ್ವಯ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2025, 23:30 IST
Last Updated 19 ಮಾರ್ಚ್ 2025, 23:30 IST
   

ಬೆಂಗಳೂರು: ವಿದ್ಯುತ್ ಪ್ರಸರಣ ಮತ್ತು ಸರಬರಾಜು ಸಂಸ್ಥೆಗಳ ಸಿಬ್ಬಂದಿಯ ಪಿಂಚಣಿ, ಗ್ರಾಚ್ಯುಟಿಗೆ ಸರ್ಕಾರ ನೀಡಬೇಕಾದ ಪಾಲಿನ ಮೊತ್ತವನ್ನು ಗ್ರಾಹಕರಿಂದಲೇ ವಸೂಲಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ವಿದ್ಯುತ್ ಬಳಕೆದಾರರಿಗೆ ಏಪ್ರಿಲ್ 1ರಿಂದಲೇ ಹೊಸ ‘ಬರೆ’ಯ ಶಾಖ ತಟ್ಟಲಿದೆ. 

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಎಲ್‌) ಮತ್ತು ಎಲ್ಲ ವಿದ್ಯುತ್‌ ಸರಬರಾಜು ಕಂಪನಿಗಳ (ಎಸ್ಕಾಂ) ಸಿಬ್ಬಂದಿಯ ಪಿಂಚಣಿ ಹಾಗೂ ಗ್ರಾಚ್ಯುಟಿಯ ಮೊತ್ತವನ್ನು ರಾಜ್ಯ ಸರ್ಕಾರ ಪಾವತಿಸಬೇಕಿತ್ತು. ಈ ವಿಷಯದ ಬಗ್ಗೆ ವ್ಯಾಜ್ಯ ಇತ್ಯರ್ಥವಾಗಿದೆ.


ಸರ್ಕಾರದ ಪಾಲನ್ನು ವಿದ್ಯುತ್‌ ಬಳಕೆದಾರರಿಂದಲೇ ವಸೂಲಿ ಮಾಡಲು ಅವಕಾಶ ಕಲ್ಪಿಸಿ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಆದೇಶ ಹೊರಡಿಸಿದೆ.

ADVERTISEMENT

ಗ್ರಾಹಕರು ಬಳಸುವ ಪ್ರತಿ ಯೂನಿಟ್‌ ವಿದ್ಯುತ್‌ ಮೇಲೆ 2025–26ರಲ್ಲಿ ತಲಾ 36 ಪೈಸೆ, 2026–27
ರಲ್ಲಿ ತಲಾ 35 ಪೈಸೆ ಮತ್ತು 2027–28ರಲ್ಲಿ ತಲಾ 34 ಪೈಸೆಯನ್ನು ಹೆಚ್ಚುವರಿಯಾಗಿ ವಿಧಿಸಲು ಆಯೋಗ ಒಪ್ಪಿಗೆ ನೀಡಿದೆ.

ಪಿಂಚಣಿ ಹಾಗೂ ಗ್ರಾಚ್ಯುಟಿ ಬಾಬ್ತು 2021–22ರಿಂದ 2024–25ನೇ ಆರ್ಥಿಕ ವರ್ಷಗಳವರೆ
ಗಿನ ಹಿಂಬಾಕಿ ಮತ್ತು 2025–26ನೇ ಆರ್ಥಿಕ ವರ್ಷದಿಂದ ಆಗುವ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲು ಕೋರಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಎಲ್‌) ಹಾಗೂ ಎಸ್ಕಾಂಗಳು ಸಲ್ಲಿಸಿದ್ದ ಅರ್ಜಿಗಳನ್ನು ಕೆಇಆರ್‌ಸಿ ಪುರಸ್ಕರಿಸಿದೆ.

ಕರ್ನಾಟಕ ವಿದ್ಯುತ್‌ ಸುಧಾರಣಾ ನಿಯಮಗಳಿಗೆ 2022ರಲ್ಲಿ ತಿದ್ದುಪಡಿ ತರಲಾಗಿತ್ತು. ‘ಕೆಪಿಟಿಸಿಎಲ್‌ ಮತ್ತು ಎಸ್ಕಾಂಗಳ ಸಿಬ್ಬಂದಿಯ ಪಿಂಚಣಿ, ಗ್ರಾಚ್ಯುಟಿಯಲ್ಲಿ ರಾಜ್ಯ ಸರ್ಕಾರದ ಪಾಲನ್ನು ಗ್ರಾಹಕರಿಗೆ ವರ್ಗಾಯಿಸಲು ಬಯಸಿದರೆ ಕೆಇಆರ್‌ಸಿ ಮುಂದೆ ಅರ್ಜಿ ಸಲ್ಲಿಸಬಹುದು’ ಎಂದು ತಿದ್ದುಪಡಿಯಲ್ಲಿ ಹೇಳಲಾಗಿತ್ತು. ಈ ತಿದ್ದುಪಡಿಯ ಆಧಾರದಲ್ಲೇ ಸರ್ಕಾರದ ಪಾಲನ್ನು ವಿದ್ಯುತ್‌ ಬಳಕೆದಾರರಿಗೆ ವರ್ಗಾಯಿಸುವ ಆದೇಶ ಹೊರಡಿಸಲಾಗಿದೆ.

ನೀರಾವರಿ ಪಂಪ್‌ಸೆಟ್‌ಗಳ ವಿದ್ಯುತ್‌ ಬಳಕೆದಾರರು ಸೇರಿದಂತೆ ಎಲ್ಲ ಗ್ರಾಹಕರಿಂದಲೂ ಈ ಮೊತ್ತ ವಸೂಲಿ ಮಾಡುವಂತೆ ಕೆಇಆರ್‌ಸಿ ಆದೇಶದಲ್ಲಿ ಹೇಳಿದೆ. 

ಪಿಂಚಣಿ ಮತ್ತು ಗ್ರಾಚ್ಯುಟಿ ನಿಧಿಯ ನಿರ್ವಹಣೆಗಾಗಿ ‘ಕೆಪಿಟಿಸಿಎಲ್‌ ಆ್ಯಂಡ್‌ ಎಸ್ಕಾಮ್ಸ್‌ ಪೆನ್ಷನ್‌ ಆ್ಯಂಡ್‌ ಗ್ರಾಚ್ಯುಟಿ ಟ್ರಸ್ಟ್‌’ ಅಸ್ತಿತ್ವಕ್ಕೆ ಬರಲಿದೆ. ಈ ಟ್ರಸ್ಟ್‌ ಹೆಸರಿನಲ್ಲೇ ಬ್ಯಾಂಕ್‌ನಲ್ಲಿ ಖಾತೆ ತೆರೆದು, ಅದರಲ್ಲಿ ಈ ಮೊತ್ತವನ್ನು ಇರಿಸಬೇಕಿದೆ. ಈ ಮೊತ್ತದ ಬಳಕೆಗೆ ಸಂಬಂಧಿಸಿದಂತೆ ವಿದ್ಯುತ್‌ ಸರಬರಾಜು ಕಂಪನಿಗಳು ಪ್ರತಿ ತಿಂಗಳು ರಾಜ್ಯ ಸರ್ಕಾರ ಮತ್ತು ಕೆಇಆರ್‌ಸಿಗೆ ವರದಿ ನೀಡಬೇಕು. ಟ್ರಸ್ಟ್‌ ಕೂಡ ಇದೇ ಮಾದರಿಯ ವರದಿಯನ್ನು ಸಲ್ಲಿಸಬೇಕು.

₹4,659 ಕೋಟಿ ಹಿಂಬಾಕಿ:
ಪಿಂಚಣಿ ಮತ್ತು ಗ್ರಾಚ್ಯುಟಿಯ ರಾಜ್ಯ ಸರ್ಕಾರದ ಪಾಲನ್ನು ಭರಿಸಲು ಮುಂದಿನ ಮೂರು ಆರ್ಥಿಕ ವರ್ಷಗಳಲ್ಲಿ ವಿದ್ಯುತ್‌ ಬಳಕೆದಾರರಿಂದ ₹8,519.55 ಕೋಟಿ ಮೊತ್ತವನ್ನು ವಸೂಲಿ ಮಾಡಲು ಕೆಇಆರ್‌ಸಿ ಸಮ್ಮತಿಸಿದೆ. ಈ ಪೈಕಿ 2021–22ರಿಂದ 2024–25ನೇ ಆರ್ಥಿಕ ವರ್ಷಗಳವರೆಗಿನ ಹಿಂಬಾಕಿ ಮೊತ್ತವೇ ₹4,659.34 ಕೋಟಿಯಷ್ಟಿದೆ. ಹಿಂಬಾಕಿ ಮೊತ್ತವನ್ನು 2025–26ರಿಂದ 2030–31ನೇ ಆರ್ಥಿಕ ವರ್ಷದವರೆಗೆ ಆರು ವಾರ್ಷಿಕ ಕಂತುಗಳಲ್ಲಿ ತಲಾ ₹776.56 ಕೋಟಿಯಷ್ಟನ್ನು ಗ್ರಾಹಕರಿಂದ ವಸೂಲಿ ಮಾಡಲಾಗುತ್ತದೆ.
  • ಮುಂದಿನ ಮೂರು ವರ್ಷಗಳಲ್ಲಿ ₹8,519.55 ಕೋಟಿ ವಸೂಲಿಗೆ ಆದೇಶ

  • ಹಿಂಬಾಕಿ ಮೊತ್ತವೇ ₹4,659.34 ಕೋಟಿಯಷ್ಟಿದೆ

ಅನಧಿಕೃತ ಲೋಡ್‌ ಶೆಡ್ಡಿಂಗ್?

ರಾಜ್ಯದಲ್ಲಿ ವಿದ್ಯುತ್ ಲೋಡ್‌ ಶೆಡ್ಡಿಂಗ್ ಕುರಿತು ಅಧಿಕೃತ ಪ್ರಕಟಣೆ ಇಲ್ಲದಿದ್ದರೂ, ವಿವಿಧ ಜಿಲ್ಲೆಗಳಲ್ಲಿ ಅನಿಯಮಿತವಾಗಿ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿವೆ.

ಬೇಸಿಗೆ ಧಗೆ ಹೆಚ್ಚುತ್ತಿರುವ ಹೊತ್ತಿನಲ್ಲಿಯೇ ಅನಿಯಮಿತವಾಗಿ ವಿದ್ಯುತ್ ಪೂರೈಕೆ ಕಡಿತ ಮಾಡುತ್ತಿರುವುದರಿಂದ ಜನಜೀವನದ ಮೇಲೆ ಸಮಸ್ಯೆಯಾಗಿದೆ. ಗೃಹ, ವಾಣಿಜ್ಯ ಸಂಪರ್ಕಗಳ ಜೊತೆಗೆ ಕೃಷಿ ಚಟುವಟಿಕೆಗೆ ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯ ಆಗುತ್ತಿದೆ.

ಜಿಲ್ಲಾವಾರು ಮಾಹಿತಿ ಪ್ರಕಾರ, ‘ಹಗಲು ಹೊತ್ತಿನ ಜೊತೆಗೆ ರಾತ್ರಿಯ ಹೊತ್ತೂ, ಒಟ್ಟಾರೆ 4–5 ಗಂಟೆ ಅನಿಯಮಿತವಾಗಿ ವಿದ್ಯುತ್‌ ಕಡಿತ ಆಗುತ್ತಿದೆ. ವಿದ್ಯುತ್ ಸರಬರಾಜು ಹೊಣೆ ಹೊತ್ತಿರುವ ಎಲ್ಲ ವಿಭಾಗಗಳ ವ್ಯಾಪ್ತಿಯಲ್ಲಿ ಈ ಸಮಸ್ಯೆ ಏಕರೂಪವಾಗಿದೆ.

ಕೃಷಿ ಚಟುವಟಿಕೆಗೆ ನಿತ್ಯ 7 ಗಂಟೆ ವಿದ್ಯುತ್ ನೀಡಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಆದರೆ, ವಿವಿಧ ಜಿಲ್ಲೆಗಳ ಕೃಷಿಕರ ಪ್ರಕಾರ, ‘ಐದು ಗಂಟೆ ಕೂಡಾ ಗುಣಮಟ್ಟದ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಅನೇಕ ಬಾರಿ ಟ್ರಿಪ್‌ ಆಗಿ ಏಕಾಏಕಿ ಸ್ಥಗಿತವಾಗುವುದು ಇದೆ’ ಎನ್ನುತ್ತಾರೆ. ‘ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ. ಆದರೆ, ದುರಸ್ತಿ ಹಾಗೂ ನಿರ್ವಹಣೆ ಕಾರಣಕ್ಕಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ’ ಎಂದು ವಿದ್ಯುತ್ ವ್ಯತ್ಯಯ ಸಮಸ್ಯೆ ಕುರಿತು ಪ್ರತ್ಯೇಕವಾಗಿ ಮಾತನಾಡಿರುವ ಜೆಸ್ಕಾಂ, ಮೆಸ್ಕಾಂ, ಸೆಸ್ಕ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹೈಕೋರ್ಟ್‌ ಆದೇಶದ ಬಳಿಕ ಹೊಸ ಅರ್ಜಿ

ರಾಜ್ಯ ಸರ್ಕಾರವು ಕರ್ನಾಟಕ ವಿದ್ಯುತ್ ಮಂಡಳಿಯನ್ನು (ಕೆಇಬಿ) ರದ್ದುಗೊಳಿಸಿ ಕೆಪಿಟಿಸಿಎಲ್‌ ಹಾಗೂ ಐದು ಎಸ್ಕಾಂಗಳನ್ನು ರಚಿಸಿದಾಗ, ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ತಾನೇ ಭರಿಸುವುದಾಗಿ ಒಪ್ಪಿಕೊಂಡಿತ್ತು. ಆದರೆ, 2021ರಲ್ಲಿ ಕೆಇಆರ್‌ಸಿ ಮುಂದೆ ದರ ಪರಿಷ್ಕರಣೆ ಸಂಬಂಧ ಸಲ್ಲಿಸಿದ್ದ ಅರ್ಜಿಯಲ್ಲಿ ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿಯಲ್ಲಿ ಸರ್ಕಾರದ ಪಾಲನ್ನು ಗ್ರಾಹಕರಿಗೆ ವರ್ಗಾಯಿಸಲು ಆದೇಶ ನೀಡುವಂತೆ ಕೋರಿತ್ತು. ಇದನ್ನು ಕೆಇಆರ್‌ಸಿ ತಿರಸ್ಕರಿಸಿತ್ತು.

ಪಿಂಚಣಿ ಮತ್ತು ಗ್ರಾಚ್ಯುಟಿ ಬಾಬ್ತು ಸರ್ಕಾರ ಭರಿಸಬೇಕಿದ್ದ ಪಾಲನ್ನು ಗ್ರಾಹಕರಿಂದ ವಸೂಲಿ ಮಾಡುವ ತೀರ್ಮಾನವನ್ನು ಪ್ರಶ್ನಿಸಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್‌ಕೆಸಿಸಿಐ) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಹೈಕೋರ್ಟ್‌ 2024ರ ಮಾರ್ಚ್‌ 25ರಂದು ತಿರಸ್ಕರಿಸಿತ್ತು

ಹೈಕೋರ್ಟ್‌ ಆದೇಶದ ಬಲದಲ್ಲಿ ಪಿಂಚಣಿ ಮತ್ತು ಗ್ರಾಚ್ಯುಟಿ ಬಾಬ್ತು ಸರ್ಕಾರದ ಪಾಲಿನ ವಂತಿಕೆಯನ್ನು ಗ್ರಾಹಕರಿಂದ ವಸೂಲಿ ಮಾಡಲು ಅನುಮತಿ ಕೋರಿ 2024ರ ನವೆಂಬರ್‌ 30ರಂದು ಕೆಪಿಟಿಸಿಎಲ್‌ ಮತ್ತು ಎಸ್ಕಾಂಗಳು ಮತ್ತೆ ಅರ್ಜಿ ಸಲ್ಲಿಸಿದ್ದವು.

ದರ ಪರಿಷ್ಕರಣೆಯೂ ಬಾಕಿ
ಮುಂದಿನ ಮೂರು ವರ್ಷಗಳಿಗೆ ವಿದ್ಯುತ್‌ ದರ ಪರಿಷ್ಕರಣೆ ಕೋರಿ ಕೆಪಿಟಿಸಿಎಲ್‌ ಮತ್ತು ವಿದ್ಯುತ್‌ ಸರಬರಾಜು ಕಂಪನಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ನಡೆಸುತ್ತಿದೆ. ಈ ಅರ್ಜಿಗಳ ಕುರಿತು ಸಾರ್ವಜನಿಕ ವಿಚಾರಣೆಗಳನ್ನು ಆಯೋಗ ಪೂರ್ಣಗೊಳಿಸಿದ್ದು, ಏಪ್ರಿಲ್‌ 1ರೊಳಗೆ ಆದೇಶ ಪ್ರಕಟಿಸಬೇಕಿದೆ. ಕೆಪಿಟಿಸಿಎಲ್‌ ಮತ್ತು ಎಸ್ಕಾಂಗಳ ಬೇಡಿಕೆಯನ್ನು ಕೆಇಆರ್‌ಸಿ ಪುರಸ್ಕರಿಸಿದರೆ ಗ್ರಾಹಕರ ಮೇಲೆ ಮತ್ತೊಮ್ಮೆ ದರ ಏರಿಕೆಯ ಹೊರ ಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.