ಸಾಂದರ್ಭಿಕ ಚಿತ್ರ
ಪ್ರಜಾವಾಣಿ ಚಿತ್ರ
ಬೆಂಗಳೂರು: ತನ್ನ ಒಡೆತನದ ಪ್ರಸರಣ ಜಾಲ, ಸಬ್‌ಸ್ಟೇಷನ್ ಮತ್ತು ಜಮೀನುಗಳ ನಗದೀಕರಣಕ್ಕೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು (ಕೆಪಿಟಿಸಿಎಲ್) ಸಿದ್ಧತೆ ನಡೆಸಿದೆ. ಈ ಮೂಲಕ ಖಾಸಗೀಕರಣಕ್ಕೆ ಕೆಪಿಟಿಸಿಎಲ್ ಮುಂದಾಗಿದೆ.
ಇದೇ ಜನವರಿಯಲ್ಲಿ ಬಿಡುಗಡೆಯಾದ ಕೆಪಿಟಿಸಿಎಲ್ ವಾರ್ಷಿಕ ವರದಿಯಲ್ಲಿ, ನಿಗಮದ ಆಸ್ತಿಗಳನ್ನು ನಗದೀಕರಣ ಮಾಡುವ ಬಗ್ಗೆ ಉಲ್ಲೇಖವಿತ್ತು. ಈ ಸಾಲಿನ ಬಜೆಟ್ ಭಾಷಣದಲ್ಲೂ ಆಸ್ತಿ ನಗದೀಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಅದನ್ನು ಕಾರ್ಯರೂಪಕ್ಕೆ ತರಲು ಕೆಪಿಟಿಸಿಎಲ್ ಈಗ ಪ್ರಸ್ತಾವ ಸಿದ್ಧಪಡಿಸಿದೆ.
‘ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಅವರ ನೇತೃತ್ವದಲ್ಲಿಯೇ ಪ್ರಸ್ತಾಪ ಸಿದ್ಧವಾಗಿದೆ. ಏಪ್ರಿಲ್ 15 ಅಥವಾ 16ರಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸಮ್ಮುಖದಲ್ಲಿ ನಡೆಯಲಿರುವ ಆಡಳಿತ ಮಂಡಳಿ ಸಭೆಯಲ್ಲಿ ಪ್ರಸ್ತಾವವನ್ನು ಇರಿಸಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ.
‘ಕೆಪಿಟಿಸಿಎಲ್‌ನ ನಿವ್ವಳ ಆಸ್ತಿಯಲ್ಲಿ ಶೇ 5ರಿಂದ 20ರಷ್ಟನ್ನು ಮೊದಲ ಹಂತದಲ್ಲಿ ನಗದೀಕರಣ ಮಾಡಬಹುದು ಎಂದು ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದೆ. ಸಾರ್ವಜನಿಕ–ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ನಗದೀಕರಣ ಮಾಡಲಾಗುತ್ತದೆ. ಈ ಆಸ್ತಿಗಳ ಮಾಲೀಕತ್ವ ಪೂರ್ಣ ಪ್ರಮಾಣದಲ್ಲಿ ಖಾಸಗಿಯವರಿಗೆ ಹೋಗುವುದಿಲ್ಲ’ ಎಂದು ಮೂಲಗಳು ತಿಳಿಸಿವೆ.
‘ಕೆಪಿಟಿಸಿಎಲ್‌ನ ಒಟ್ಟು ಪ್ರಸರಣ ಜಾಲದಲ್ಲಿ, ನೆಲದಾಳದ ಆಪ್ಟಿಕಲ್ ವೈರ್ (ಒಪಿಜಿಡಬ್ಲ್ಯು) ಜಾಲವನ್ನು ಮಾತ್ರ ನಗದೀಕರಣಕ್ಕೆ ಆಯ್ಕೆ ಮಾಡಲಾಗಿದೆ. ಜತೆಗೆ ಬಳಕೆಯಾಗದೇ ಉಳಿದಿರುವ ಜಮೀನು ಮತ್ತು ಕಟ್ಟಡಗಳನ್ನು ನಗದೀಕರಣ ಮಾಡಲಾಗುತ್ತದೆ. ಜಮೀನುಗಳನ್ನು ಅಭಿವೃದ್ಧಿಪಡಿಸಿ, ಅವುಗಳಿಂದ ಆದಾಯ ಬರುವ ಹಾಗೆ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿವೆ.
ಮೌಲ್ಯ ಕುಗ್ಗಿಸಿದ ಆರೋಪ: ‘ಪ್ರಸರಣ ಜಾಲದ ನೈಜ ಮೌಲ್ಯವನ್ನು ಸವಕಳಿ ಹೆಸರಿನಲ್ಲಿ, ಕಡಿಮೆ ಅಂದಾಜು ಮಾಡಲಾಗಿದೆ. ಕಡಿಮೆ ಮಾಡಲಾದ ಮೌಲ್ಯದಲ್ಲೇ ನಗದೀಕರಣ ಮಾಡಿದರೆ ಕೆಪಿಟಿಸಿಎಲ್‌ಗೆ ನಷ್ಟವಾಗುತ್ತದೆ. ಇದು ಗೊತ್ತಿದ್ದೂ ಹಿರಿಯ ಅಧಿಕಾರಿಗಳು ಪ್ರಸ್ತಾವ ಸಿದ್ಧಪಡಿಸಿದ್ದಾರೆ’ ಎಂದು ಕೆಪಿಟಿಸಿಎಲ್‌ನ ಅಧಿಕಾರಿಯೊಬ್ಬರು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.