
ಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಸಿಎಲ್) 404 ಸಹಾಯಕ ಎಂಜಿನಿಯರ್‌ಗಳು (ಎ.ಇ) ಮತ್ತು ಕಿರಿಯ ಎಂಜಿನಿಯರ್‌ಗಳ (ಜೆ.ಇ) ನೇಮಕಾತಿಗೆ ಮೂರನೇ ಬಾರಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಪರೀಕ್ಷೆ ನಡೆಸುವಂತೆ ಕೋರಿ ಇಂಧನ ಇಲಾಖೆಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಪತ್ರ ಬರೆದಿದೆ.
ಕೆಪಿಸಿಎಲ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೆಇಎ ಕಳೆದ ವರ್ಷ ಪರೀಕ್ಷೆ ನಡೆಸಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ಕೆಲವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿ ನಾಲ್ಕು ತಿಂಗಳಲ್ಲಿ ಹೊಸದಾಗಿ ಪರೀಕ್ಷೆ ನಡೆಸುವಂತೆ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಆದೇಶಿಸಿತ್ತು. ಆ ಪ್ರಕಾರ ಮತ್ತೆ ಪರೀಕ್ಷೆ ನಡೆಸಲು ಕೆಇಎ ಸಿದ್ಧತೆ ಆರಂಭಿಸಿದೆ.
ಹೊಸದಾಗಿ ಪರೀಕ್ಷೆ ನಡೆಸುವ ಸಂಬಂಧ ಕೆಪಿಸಿಎಲ್‌ನಿಂದ ಪತ್ರ ಬಂದಿದೆ. 2024ರಲ್ಲಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಮಾಹಿತಿ ಸಂಗ್ರಹಿಸುವ ಕೆಲಸ ಪ್ರಗತಿಯಲ್ಲಿದೆ. ಭಾನುವಾರವೇ ಪರೀಕ್ಷೆ ನಡೆಸಬೇಕಾಗುತ್ತದೆ. ಆದರೆ, ಈಗಾಗಲೇ ಹಲವು ಪರೀಕ್ಷೆಗಳ ದಿನಾಂಕ ನಿಗದಿಯಾಗಿದೆ. ಯಾವ ದಿನಾಂಕ ಲಭ್ಯವಾಗಲಿದೆ ಎಂಬುದನ್ನು ನೋಡಿಕೊಂಡು ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಹಳೆಯ ಪಠ್ಯಕ್ರಮ: ‘ಕೆಪಿಸಿಎಲ್ 2017ರಲ್ಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. ಆಗ 2010ರಲ್ಲಿ ಸಿದ್ಧಪಡಿಸಿದ್ದ ಪಠ್ಯಕ್ರಮದ ಪ್ರಕಾರವೇ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು. ಈಗಲೂ ಆ ಪಠ್ಯಕ್ರಮದ ಪ್ರಕಾರವೇ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಅವರು ವಿವರಿಸಿದರು.
ವಿಳಂಬ ಏಕೆ: ಸಹಾಯಕ ಮತ್ತು ಕಿರಿಯ ಎಂಜಿನಿಯರ್‌ಗಳ ನೇಮಕಾತಿಗೆ 2018 ರಲ್ಲಿ ಕೆಪಿಸಿಎಲ್ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಆದರೆ, ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಇತ್ಯಾದಿ ಆರೋಪಗಳು ಕೇಳಿ ಬಂದ ಕಾರಣ, ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಪರೀಕ್ಷೆಯನ್ನು ರದ್ದುಪಡಿಸಿತ್ತು. ಕೋರ್ಟ್ ಆದೇಶದ ಪ್ರಕಾರ ಮರುಪರೀಕ್ಷೆ ನಡೆಸುವುದಾಗಿ ಹೇಳಿದ್ದ ಕೆಪಿಸಿಎಲ್ 2024ರವರೆಗೂ ಸುಮ್ಮನಿತ್ತು. ಕಳೆದ ವರ್ಷ ನೇಮಕಾತಿ ಜವಾಬ್ದಾರಿಯನ್ನು ಕೆಇಎಗೆ ವಹಿಸಲಾಗಿತ್ತು.
ಈ ಹುದ್ದೆಗಳ ಭರ್ತಿಗೆ ಕೆಇಎ ಪರೀಕ್ಷೆ ನಡೆಸಿದ ಬಳಿಕ ಮೌಲ್ಯಮಾಪನದ ವೇಳೆ ಋಣಾತ್ಮಕ ಅಂಕ ಪದ್ಧತಿಯನ್ನು ಅನುಸರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದರು. ಏಕ ಸದಸ್ಯ ಪೀಠ ಈ ಅರ್ಜಿಯನ್ನು ವಜಾಗೊಳಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ಕೆಲವರು ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದರು. ಇದರ ವಿಚಾರಣೆ ನಡೆಸಿದ ವಿಭಾಗೀಯ ಪೀಠ ನೇಮಕಾತಿ ಪಟ್ಟಿಯನ್ನು ರದ್ದುಪಡಿಸಿ, ಮರುಪರೀಕ್ಷೆ ನಡೆಸುವಂತೆ ಸರ್ಕಾರ ಮತ್ತು ಕೆಪಿಸಿಎಲ್‌ಗೆ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಅಲ್ಲಿ ಕೂಡ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿತ್ತು.
ಬದಲಾವಣೆ ಏಕೆ: ನೇಮಕಾತಿ ಅಧಿಸೂಚನೆಯಲ್ಲಿ ಋಣಾತ್ಮಕ ಮೌಲ್ಯಮಾಪನದ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಪರೀಕ್ಷೆ ನಡೆದ ಬಳಿಕ ಮೌಲ್ಯಮಾಪನ ಸಮಯದಲ್ಲಿ ಇದನ್ನು ಅಳವಡಿಸಿಕೊಳ್ಳಲಾಗಿದೆ. ಇದು ಸರಿಯಲ್ಲ. ಅಲ್ಲದೆ ನಮಗೆ ಮೊದಲೇ ತಿಳಿಸಿಲ್ಲ ಎಂಬುದು ಅಭ್ಯರ್ಥಿಗಳ ವಾದ. 2021ರ ನಂತರ ಎಲ್ಲ ಪರೀಕ್ಷೆಗಳಲ್ಲೂ ಋಣಾತ್ಮಕ ಮೌಲ್ಯಮಾಪನ ಪದ್ಧತಿ ಜಾರಿಗೆ ಬಂದಿದೆ. 2024 ರಲ್ಲಿ ಕೆಇಎ ಪರೀಕ್ಷೆ ನಡೆಸಿದ್ದು, ಸಹಜವಾಗಿಯೇ ಇದಕ್ಕೂ ಅನ್ವಯ ಮಾಡಲಾಗಿದೆ ಎಂಬುದು ಸರ್ಕಾರದ ವಾದವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.