ADVERTISEMENT

ರಾಜ್ಯ ಅತ್ಯಾಚಾರಿಗಳ ತಾಣ ಕುಖ್ಯಾತಿಗೆ ಒಳಗಾಗುತ್ತಿರುವುದು ಆತಂಕಕಾರಿ: ವಿಜಯೇಂದ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜನವರಿ 2025, 7:18 IST
Last Updated 21 ಜನವರಿ 2025, 7:18 IST
<div class="paragraphs"><p>ವಿಜಯೇಂದ್ರ</p></div>

ವಿಜಯೇಂದ್ರ

   

ಬೆಂಗಳೂರು: ಸಂಸ್ಕೃತಿ, ಸಂಸ್ಕಾರ, ಸುರಕ್ಷತೆ ಎಂದರೆ ಕರ್ನಾಟಕ ಎಂಬ ಖ್ಯಾತಿ ಪಡೆದಿದ್ದ ನಮ್ಮ ರಾಜ್ಯ ದರೋಡೆಕೋರರು ಹಾಗೂ ಅತ್ಯಾಚಾರಿಗಳ ತಾಣ ಎಂಬ ಕುಖ್ಯಾತಿಗೆ ಒಳಗಾಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, 'ರಾಜಧಾನಿ ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಒಬ್ಬಂಟಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ದರೋಡೆ ನಡೆದಿರುವ ವರದಿ ಅತ್ಯಂತ ಹೇಯ ಹಾಗೂ ಅಮಾನವೀಯ ಘಟನೆ. ಸ್ತ್ರೀ ಕುಲಕ್ಕೆ ರಕ್ಷಣೆ ನೀಡಲು ಸಾಧ್ಯವಾಗದ ಪರಿಸ್ಥಿತಿಗೆ ರಾಜ್ಯದ ಕಾನೂನು ಸುವ್ಯವಸ್ಥೆ ಬಂದು ತಲುಪಿದೆ' ಎಂದು ಕಿಡಿಕಾರಿದ್ದಾರೆ.

ADVERTISEMENT

ಸರ್ಕಾರದಲ್ಲೀಗ ನಡೆಯುತ್ತಿರುವುದು ಗುಂಪುಗಾರಿಕೆಯ ರಾಜಕಾರಣ ಹಾಗೂ ಕಾಂಗ್ರೆಸ್ ಉತ್ಸವಗಳು ಮಾತ್ರ, ಜನಹಿತ ಹಾಗೂ ಸಮಾಜ ಸುರಕ್ಷತೆಯನ್ನು ಮರೆತಿರುವ ಈ ಸರ್ಕಾರದ ವ್ಯವಸ್ಥೆಯಲ್ಲಿ ನಾಗರಿಕರು ಅಸುರಕ್ಷತೆಯ ವಾತಾವರಣ ಎದುರಿಸುತ್ತಿದ್ದಾರೆ. ಈ ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಇದೆಯೇ? ಗೃಹ ಇಲಾಖೆ ಇದೆಯೇ? ಒಂದು ಸರ್ಕಾರ ಈ ರಾಜ್ಯವನ್ನು ಆಳುತ್ತಿದೆಯೇ? ಎಂಬ ಪ್ರಶ್ನೆ ಜನಸಾಮಾನ್ಯರಿಂದ ಕೇಳಿ ಬರುತ್ತಿದೆ ಎಂದಿದ್ದಾರೆ.

ಒಂದು ಕಡೆ ಅಭಿವೃದ್ಧಿಯೂ ಇಲ್ಲ, ಮತ್ತೊಂದು ಕಡೆ ಆಡಳಿತ ನಿರ್ವಹಣೆಯಲ್ಲಿಯೂ ಸಂಪೂರ್ಣ ವಿಫಲ, ಕನಿಷ್ಠ ಕಾನೂನು ರಕ್ಷಣೆಯನ್ನಾದರೂ ಒದಗಿಸಲಾಗದ ಈ ಸರ್ಕಾರ ಯಾವ ಮುಖ ಹೊತ್ತುಕೊಂಡು ಅಧಿಕಾರದಲ್ಲಿದೆ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅತ್ಯಾಚಾರಿ ದುರುಳರನ್ನು ಪತ್ತೆ ಹಚ್ಚಿ ಕಠಿಣ ಕ್ರಮಕ್ಕೆ ಒಳಪಡಿಸಲಿ ಎಂದು ಅವರು ಆಗ್ರಹಿಸಿದ್ದಾರೆ.

ಸರಣಿ ರೂಪದಲ್ಲಿ ನಡೆಯುತ್ತಿರುವ ಕೊಲೆ, ದರೋಡೆ ಪ್ರಕರಣಗಳು, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದ್ದು, ರಾಜ್ಯದಲ್ಲಿ ಅರಾಜಕತೆ ಪರಿಸ್ಥಿತಿ ಉಂಟಾಗಿರುವುದನ್ನು ಸಾಕ್ಷೀಕರಿಸುತ್ತಿದೆ. ಇಂತಹ ಘಟನೆಗಳು ಮರುಕಳಿಸುತ್ತಿದ್ದರೆ ಈ ಸರ್ಕಾರಕ್ಕೆ ಜನರೇ ತಕ್ಕಪಾಠ ಕಲಿಸುವ ಪರಿಸ್ಥಿತಿ ಉದ್ಭವಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಿಜೆಪಿ ರಾಜ್ಯ ಘಟಕ ಈ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆಯ ಭದ್ರತೆಗಾಗಿ ಹೋರಾಡಲಿದೆ ಎಂದೂ ಅವರು ಹೇಳಿದ್ದಾರೆ.

ಏನಿದು ಘಟನೆ?

ಬೆಂಗಳೂರಿನ ಕೆಆರ್ ಮಾರುಕಟ್ಟೆ ಬಳಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದ್ದು ಈ‌‌ ಸಂಬಂಧ ಎಸ್.ಜೆ. ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮಿಳುನಾಡು ಮೂಲದ ಮಹಿಳೆಯ ಮೇಲೆ ಇಬ್ಬರು ಅತ್ಯಾಚಾರ ‌ಎಸಗಿ ಮೊಬೈಲ್ ಹಾಗೂ ಚಿನ್ನದ ಸರ ದೋಚಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.