ADVERTISEMENT

ತೆರಿಗೆ ಹಂಚಿಕೆ | ಬಹಿರಂಗ ಚರ್ಚೆಗೆ ಬನ್ನಿ: ನಿರ್ಮಲಾಗೆ ಕೃಷ್ಣಬೈರೇಗೌಡ ಸವಾಲು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 15:56 IST
Last Updated 25 ಮಾರ್ಚ್ 2024, 15:56 IST
ಕೃಷ್ಣಬೈರೇಗೌಡ
ಕೃಷ್ಣಬೈರೇಗೌಡ   

ಬೆಂಗಳೂರು: ‘ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಮತ್ತು ಹಣಕಾಸು ಆಯೋಗದ ವರದಿ ಹೇಳಿದ್ದರೂ ವಿಶೇಷ ಅನುದಾನ ನೀಡದಿರುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಜತೆ ಬಹಿರಂಗ ಚರ್ಚೆಗೆ ಸಿದ್ಧನಿದ್ದು, ಅಗತ್ಯ ದಾಖಲೆಗಳೊಂದಿಗೆ ಚರ್ಚೆಗೆ ಬರಲಿ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಸವಾಲು ಹಾಕಿದರು.

ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕರ್ನಾಟಕಕ್ಕೆ ಒಂದು ಪೈಸೆ ಬಾಕಿ ಉಳಿಸಿಕೊಂಡಿಲ್ಲ ಎಂದು ನಿರ್ಮಲಾ ಹೇಳಿದ್ದಾರೆ. ಆದರೆ, ಅವರ ಹೇಳಿಕೆಗಳು ಸತ್ಯದಿಂದ ಕೂಡಿಲ್ಲ. ಇದೇ 31ಕ್ಕೆ ಮೈಸೂರಿಗೆ ಬರುವ ಅವರು ಚರ್ಚೆಗೆ ಸಿದ್ಧರಾಗಲಿ. ಒಂದೇ ವೇದಿಕೆಯಲ್ಲಿ ಚರ್ಚೆ ನಡೆಯಲಿ’ ಎಂದು ಆಹ್ವಾನವಿತ್ತರು.

‘ನಾವು ಕರ್ನಾಟಕಕ್ಕೆ ನ್ಯಾಯ ಕೇಳುತ್ತಿದ್ದೇವೆಯೇ ಹೊರತು ಭಿಕ್ಷಾಪಾತ್ರೆ ಹಿಡಿದು ಭಿಕ್ಷೆ ಕೇಳುತ್ತಿಲ್ಲ. ಅತಿ ಹೆಚ್ಚು ತೆರಿಗೆ ಕಟ್ಟುವ ಎರಡನೇ ರಾಜ್ಯ ನಮ್ಮದು. ನಮ್ಮ ಹಕ್ಕು ಕೇಳಿದರೆ ನಮ್ಮ ಮೇಲೆಯೇ ಗೂಬೆ ಕೂರಿಸುತ್ತಾರೆ. ಸತ್ಯ ಜನರಿಗೆ ತಿಳಿಯಬೇಕು. ಆದ್ದರಿಂದ, ಮೈಸೂರು ಅಥವಾ ಬೆಂಗಳೂರೇ ಆಗಲಿ. ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧನಿದ್ದೇನೆ. ಸತ್ಯ ಯಾವುದು, ಸುಳ್ಳು ಯಾವುದು ಎಂಬುದನ್ನು ಜನರ ತೀರ್ಮಾನಕ್ಕೆ ಬಿಡೋಣ’ ಎಂದರು.

ADVERTISEMENT

‘ನಾವು ಗ್ಯಾರಂಟಿ ಯೋಜನೆಗಳಿಗಾಗಿ ನಯಾಪೈಸೆ ಕೇಳುತ್ತಿಲ್ಲ. ಅವರಿಂದ ಒಂದು ಪೈಸೆಯೂ ಬೇಕಾಗಿಲ್ಲ. ರಾಜ್ಯದ ಪಿಂಚಣಿ ಮತ್ತು ಸಾಮಾಜಿಕ ಭದ್ರತೆಗಾಗಿ ₹11,200 ಕೋಟಿ ಖರ್ಚು ಮಾಡುತ್ತಿದ್ದೇವೆ. ಇದಕ್ಕೆ ಕೇಂದ್ರ ಕೊಡುತ್ತಿರುವುದು ಕೇವಲ ₹550 ಕೋಟಿ. ಅಲ್ಲದೇ, ಕಷ್ಟದಲ್ಲಿರುವ ಜನರ ಸಹಾಯ ಮಾಡಲೆಂದು ₹72,000 ಕೋಟಿಯನ್ನು ರಾಜ್ಯವೇ ವೆಚ್ಚ ಮಾಡುತ್ತಿದೆ. ನಾವು ಕೇಳುತ್ತಿರುವುದು ನಮ್ಮ ತೆರಿಗೆ ಪಾಲು ಮತ್ತು ಬರ ಪರಿಹಾರದ ಹಣ. ಅದನ್ನು ಪಡೆಯುವುದು ನಮ್ಮ ಸಂವಿಧಾನಬದ್ಧ ಹಕ್ಕು. ನಿಮ್ಮ ಔದಾರ್ಯ ಬೇಕಾಗಿಲ್ಲ. ಕರ್ನಾಟಕದ ಜನ ತೆರಿಗೆ ನೋಟು ಕಟ್ಟೋದಕ್ಕೆ, ಓಟು ಹಾಕೋದಕ್ಕೆ ಇರೋದು ಅಲ್ಲ’ ಎಂದರು.

‘ಗ್ಯಾರಂಟಿ ಯೋಜನೆಗಳಿಗೆ ನಾವೇ ಹಣ ಹೊಂದಿಸಿಕೊಳ್ಳುತ್ತೇವೆ. ವಿಶೇಷ ಅನುದಾನ ₹11,472 ಕೋಟಿ ಬಿಡುಗಡೆ ಮಾಡಲಿ. 2020–21 ರಲ್ಲಿ 15ನೇ ಹಣಕಾಸು ಆಯೋಗವು ತನ್ನ ಮಧ್ಯಂತರ ವರದಿಯಲ್ಲಿ ಕರ್ನಾಟಕ, ತೆಲಂಗಾಣ, ಮಿಜೋರಾಂ ರಾಜ್ಯಗಳಿಗೆ ಒಟ್ಟು ವಿಶೇಷ ಅನುದಾನ ₹6,764 ಕೋಟಿ ನೀಡುವಂತೆ ಶಿಫಾರಸು ಮಾಡಿತ್ತು. ನಮ್ಮ ರಾಜ್ಯಕ್ಕೆ ₹5,495 ಕೋಟಿ, ತೆಲಂಗಾಣಕ್ಕೆ ₹723 ಕೋಟಿ ಹಾಗೂ ಮಿಜೋರಾಂಗೆ ₹546 ಕೋಟಿ ಎಂದು ನಿಗದಿ ಮಾಡಿತ್ತು. ಆದರೆ, ಮೂರೂ ರಾಜ್ಯಗಳಿಗೆ ಹಣ ನೀಡಲೇ ಇಲ್ಲ’ ಎಂದರು.

‘ನಮಗೆ ಬರಬೇಕಾಗಿರುವ ಬಾಕಿಯ ಬಗ್ಗೆ ಮನವರಿಕೆ ಮಾಡಲು ಸಾಧ್ಯವಾಗದ ಕಾರಣ ನಿರ್ಮಲಾ ಆವರು ಗೊಂದಲ ಮೂಡಿಸುತ್ತಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ (2020) ಅವರೂ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದರು. ಹಾಗಿದ್ದರೆ ಯಡಿಯೂರಪ್ಪ ಸುಳ್ಳು ಹೇಳಿದ್ದರಾ? ಬಸವರಾಜ ಬೊಮ್ಮಾಯಿ ಅವರೂ ಪತ್ರ ಬರೆದಿದ್ದರು. ಆಗ ಅದಕ್ಕೆ ಉತ್ತರ ನೀಡಿದ್ದ ನಿರ್ಮಲಾ ಸೀತಾರಾಮನ್ ಅವರು ವಿಶೇಷ ಅನುದಾನಕ್ಕೆ ಸಂಪನ್ಮೂಲವನ್ನು ನೀವೇ ಹೊಂದಾಣಿಕೆ ಮಾಡಿಕೊಳ್ಳಿ ಎಂದಿದ್ದರು’ ಎಂದು ಕೃಷ್ಣಬೈರೇಗೌಡ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.