ADVERTISEMENT

ಜಲವಿವಾದ ಪರಿಹಾರಕ್ಕೆ ಸಹಮತ

ಸಮಿತಿ ರಚನೆಗೆ ಬಿಎಸ್‌ವೈ, ಫಡಣವೀಸ್‌ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 19:39 IST
Last Updated 3 ಸೆಪ್ಟೆಂಬರ್ 2019, 19:39 IST
.
.   

ಮುಂಬೈ: ಅಣೆಕಟ್ಟೆ ನಿರ್ವಹಣೆಗೆ ಉನ್ನತ ಮಟ್ಟದ ಸಮಿತಿ ರಚನೆಗೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ನಿರ್ಧರಿಸಿದ್ದಾರೆ. ಎರಡೂ ರಾಜ್ಯಗಳಲ್ಲಿ ಕಳೆದ ತಿಂಗಳು ಉಂಟಾದ ಭಾರಿ ಪ್ರವಾಹ ಸ್ಥಿತಿ ಮರುಕಳಿಸದಂತೆ ನೋಡಿಕೊಳ್ಳಲು ಈ ನಿರ್ಧಾರಕ್ಕೆ ಬರಲಾಗಿದೆ.

ಯಡಿಯೂರಪ್ಪ ಅವರು ಮುಂಬೈನಲ್ಲಿ ಪಡಣವೀಸ್ ಅವರನ್ನು ಮಂಗಳವಾರ ಭೇಟಿಯಾದರು. ಈ ಸಂದರ್ಭದಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹದ ಬಗ್ಗೆ ಚರ್ಚೆ ನಡೆಯಿತು.

ಕೃಷ್ಣಾ ನದಿ ನೀರು ಹಂಚಿಕೆ ತೀರ್ಪನ್ನು ಮರು ಪರಿಶೀಲಿಸಬೇಕು ಎಂದು ಆಂಧ್ರ ಪ್ರದೇಶ ಸರ್ಕಾರವು ಒತ್ತಾಯಿಸುತ್ತಿದೆ. ಇದರ ವಿರುದ್ಧ ಒಟ್ಟಾಗಿ ನಿಲ್ಲಲು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಸಮ್ಮತಿಸಿದರು.

ADVERTISEMENT

ಕಳೆದ ತಿಂಗಳಲ್ಲಿ ಪಶ್ಚಿಮ ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ ಮತ್ತು ಸಾತಾರ ಜಿಲ್ಲೆಗಳು ಮತ್ತು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಪ್ರವಾಹಕ್ಕೆ ತತ್ತರಿಸಿದ್ದವು. ಆಲಮಟ್ಟಿ ಅಣೆಕಟ್ಟೆಯಿಂದ ನೀರು ಹೊರಗೆ ಬಿಡುವ ವಿಚಾರದಲ್ಲಿನ ನಿಯಮ
ಗಳನ್ನು ಕರ್ನಾಟಕ ಪಾಲಿಸಿಲ್ಲ ಎಂದು ಮಹಾರಾಷ್ಟ್ರದ ರಾಜಕಾರಣಿಗಳು ಆರೋಪಿಸಿದ್ದರು.ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಧ್ಯಪ್ರವೇಶಿಸಿ ಸಮಸ್ಯೆಗೆ ಪರಿಹಾರ ಸೂಚಿಸಬೇಕು ಎಂದು ಬಿಜೆಪಿಯ ಮಿತ್ರಪಕ್ಷ ಶಿವಸೇನಾ ಮುಖಂಡರು ಒತ್ತಾಯಿಸಿದ್ದರು. ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟೆಯಿಂದ ಒಮ್ಮಿಂದೊಮ್ಮೆಲೆ ನೀರು ಬಿಟ್ಟು ಕರ್ನಾಟಕದಲ್ಲಿ ಪ್ರವಾಹ ಬಂತು ಎಂದು ಕರ್ನಾಟಕದ ಮುಖಂಡರು ಹೇಳಿದ್ದರು.

ಪ್ರಸಾದ್‌ ಮನೆಗೆ ಬಿಎಸ್‌ವೈ ಭೇಟಿ

ಮುಂಬೈನಿಂದ ಬೆಂಗಳೂರಿಗೆ ಬರಲು ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಯಡಿಯೂರಪ್ಪ ಅವರು ಪ್ರಸಾದ್‌ ಲಾಡ್‌ ಮನೆಗೆ ಭೇಟಿ ನೀಡಿದರು. ಕರ್ನಾಟಕದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಇದ್ದಾಗ ರಾಜೀನಾಮೆ ನೀಡಿದ್ದ ಮೈತ್ರಿಕೂಟದ ಕೆಲವು ಶಾಸಕರನ್ನು ಮುಂಬೈನ ಹೋಟೆಲ್‌ನಲ್ಲಿ ಇರಿಸಿಕೊಳ್ಳುವಲ್ಲಿ ಲಾಡ್‌ ಮಹತ್ವದ ಪಾತ್ರ ವಹಿಸಿದ್ದರು ಎನ್ನಲಾಗಿದೆ.

ಪ್ರಭಾದೇವಿಯ ಸಿದ್ದಿ ವಿನಾಯಕ ದೇವಾಲಯಕ್ಕೂ ಯಡಿಯೂರಪ್ಪ ಭೇಟಿ ಕೊಟ್ಟರು.

ಮಹದಾಯಿ: ಮೂವರು ಸಿ.ಎಂಗಳ ಸಭೆ?

ಮಹದಾಯಿ ನದಿ ನೀರಿನ ಹಂಚಿಕೆ ಕುರಿತ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಯಡಿಯೂರಪ್ಪ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.

ಫಡಣವೀಸ್‌ ಅವರನ್ನು ಭೇಟಿ ಮಾಡಿದ ವೇಳೆ ಈ ಬಗ್ಗೆ ಚರ್ಚೆ ನಡೆದಿದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಒಂದು ಕಡೆ ಕುಳಿತು ವಿವಾದವನ್ನು ಇತ್ಯರ್ಥಪಡಿಸಿಕೊಳ್ಳುವುದು. ಮಹದಾಯಿ ನ್ಯಾಯಮಂಡಳಿ ಆದೇಶದ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರ ಕೋರುವ ನಿರ್ಧಾರಕ್ಕೆ ಬರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.