ADVERTISEMENT

ಸ್ಮಶಾನಭೂಮಿ ಒತ್ತುವರಿ ಆರೋಪದ ಬಗ್ಗೆ ಚರ್ಚೆಗೆ ಸಿದ್ಧ: ಸಚಿವ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 6:23 IST
Last Updated 18 ಡಿಸೆಂಬರ್ 2025, 6:23 IST
<div class="paragraphs"><p>ಕೃಷ್ಣ ಬೈರೇಗೌಡ</p></div>

ಕೃಷ್ಣ ಬೈರೇಗೌಡ

   

ಪ್ರಜಾವಾಣಿ ಚಿತ್ರ: ರಂಜು

ಸುವರ್ಣ ವಿಧಾನಸೌಧ(ಬೆಳಗಾವಿ): ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೆರೆ ಮತ್ತು ಸ್ಮಶಾನದ ಭೂಮಿಯನ್ನು ಕಬಳಿಸಿರುವ ಆರೋಪವನ್ನು ಎದುರಿಸುತ್ತಿದ್ದು, ಈ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಆಗ್ರಹಿಸಿದರು.

ADVERTISEMENT

ವಿರೋಧಪಕ್ಷದ ನಾಯಕ ಆರ್‌.ಅಶೋಕ ವಿಷಯ ಪ್ರಸ್ತಾಪಿಸಿ, ‘ಕೆರೆ ಮತ್ತು ಸ್ಮಶಾನ ಭೂಮಿ ಕಬಳಿಸಿರುವುದಕ್ಕೆ ದಾಖಲೆಗಳು ಬಿಡುಗಡೆ ಆಗಿವೆ. ಆ ಕುರಿತು ಚರ್ಚೆ ನಡೆಯಬೇಕು. ಸಚಿವರು ತಮ್ಮ ಕುರಿತ ಆರೋಪಕ್ಕೆ ಸದನದ ಹೊರಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸದನದ ಒಳಗೆ ಉತ್ತರ ನೀಡಬೇಕು’ ಎಂದು ಒತ್ತಾಯಿಸಿದರು. 

ವಿಧಾನಸಭೆಯಲ್ಲಿ ಗುರುವಾರ ಶೂನ್ಯ ಚರ್ಚೆಯ ವೇಳೆ ಸಚಿವ ಕೃಷ್ಣ ಬೈರೇಗೌಡ ಅವರು ಮೇಲೆ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾಡಿರುವ ಸ್ಮಶಾನಭೂಮಿ ಒತ್ತುವರಿ ಆರೋಪ ಮಾಡಿದ್ದ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ವಿರೋಧ ಪಕ್ಷ ನಾಯಕ ಆರ್. ಅಶೋಕ ಒತ್ತಾಯಿಸಿದರು.

ಅಶೋಕ ಅವರನ್ನು ಸಮರ್ಥಿಸಿ ಮಾತನಾಡಿದ ವಿ. ಸುನಿಲ್‌ಕುಮಾರ್, ‘ಆರೋಪ ಬಂದಾಗ ಸಚಿವರು ಸ್ವಯಂ ಪ್ರೇರಿತರಾಗಿ ಹೇಳಿಕೆ ನೀಡಬೇಕಿತ್ತು. ಆದರೆ, ಹೊರಗೆ ಉತ್ತರ ನೀಡುತ್ತಿರುವುದು ಸರಿಯಲ್ಲ. ಕಬಳಿಕೆ ಆಗಿರುವುದು ಸರ್ಕಾರಿ ಭೂಮಿ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಕೃಷ್ಣ ಬೈರೇಗೌಡ, ‘ಸದನದ ಸದಸ್ಯನಾಗಿ ನನ್ನ ಹಕ್ಕು ಬಿಟ್ಟುಕೊಡಲು ಸಿದ್ಧನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪಗಳ ಬಗ್ಗೆ ಚರ್ಚೆಗೆ ಸಿದ್ಧನಿದ್ದೇನೆ. ಅಧಿವೇಶನದ ಸಂದರ್ಭದಲ್ಲಿ ಸದನದ ಸದಸ್ಯರ ಬಗ್ಗೆ ಯಾವುದೇ ವೈಯಕ್ತಿಕ ವಿಚಾರ ಪ್ರಸ್ತಾಪ ಮಾಡಬೇಕಿದ್ದರೆ ಅದಕ್ಕೊಂದು ನಿಯಮಾವಳಿ ಇದೆ. ಕನಿಷ್ಠ ವಾರಕ್ಕೂ ಮುಂಚೆಯೇ ಸದಸ್ಯರಿಗೆ ನೋಟಿಸ್ ನೀಡಬೇಕು. ಆದರೆ, ಈ ವಿಚಾರದಲ್ಲಿ ದಿಢೀರನೆ ಆರೋಪ ಮಾಡಿ ಚರ್ಚೆಗೆ ಅವಕಾಶ ಕೇಳುತ್ತಿದ್ದಾರೆ. ನನ್ನ ಮೇಲಿನ ಆರೋಪದ ಬಗ್ಗೆ ಸದನದಲ್ಲಿ ಚರ್ಚಿಸಲು ಹಾಗೂ ಉತ್ತರ ನೀಡಲು ನನ್ನದೇನೂ ಅಭ್ಯಂತರ ಇಲ್ಲ. ಈ ವಿಚಾರ ಸಭಾಧ್ಯಕ್ಷರ ವಿವೇಚನೆಗೆ ಬಿಟ್ಟದ್ದು’ ಎಂದು ಹೇಳಿದರು.

ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಇನ್ನೂ ಸಾಕಷ್ಟು ಮಸೂದೆಗಳು ಮಂಡನೆಗೆ ಬಾಕಿ ಇದ್ದು, ತದನಂತರ ಈ ವಿಚಾರವನ್ನು ಚರ್ಚಿಸಲು ಅವಕಾಶ ನೀಡುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.