
ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (ಕೆಎಸ್‌ಡಿಎಲ್) ರಾಯಭಾರಿಯ ಹೊಣೆಯನ್ನು ಮಂಗಳವಾರ ಹೊತ್ತ ನಟಿ ತಮನ್ನಾ ಭಾಟಿಯಾ ಅವರು, ನಿಗಮದ 57 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
ನಗರದ ತಾಜ್ ವೆಸ್ಟ್ಎಂಡ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮನ್ನಾ ಅವರು ಕೆಎಸ್‌ಡಿಎಲ್‌ನ ರಾಯಭಾರಿಯಾಗಿ ಪ್ರಚಾರ ಆರಂಭಿಸಿದರು. ಮಂಗಳವಾರದಿಂದ ಎರಡು ವರ್ಷ ಅವರು ಕೆಎಸ್‌ಡಿಎಲ್‌ನ ಎಲ್ಲ ಉತ್ಪನ್ನಗಳ ಪ್ರಚಾರ ನಡೆಸಲಿದ್ದಾರೆ.
ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ, ‘ಕೆಎಸ್‌ಡಿಎಲ್ ಈಗ ಕೇವಲ ಮೈಸೂರು ಸ್ಯಾಂಡಲ್ ಸೋಪುಗಳಿಗೆ ಸೀಮಿತವಾಗಿಲ್ಲ. ಮಲ್ಲಿಗೆ ಪರಿಮಳದ ಸೋಪನ್ನೂ ತಯಾರಿಸುತ್ತಿದೆ. ಒಂದು ಲೀಟರ್ ಮಲ್ಲಿಗೆ ತೈಲಕ್ಕೆ ₹4 ಲಕ್ಷಕ್ಕಿಂತ ಹೆಚ್ಚಿನ ಬೆಲೆ ಇದೆ. ಮಲ್ಲಿಗೆ ಪರಿಮಳದ ಸೋಪಿಗೆ ₹400 ನಿಗದಿ ಮಾಡಿದ್ದೇವೆ. ಯೂರೋಪ್‌ನಲ್ಲಿ ಈ ರೀತಿಯ ಸೋಪುಗಳಿಗೆ ಭಾರಿ ಬೇಡಿಕೆ ಇದೆ’ ಎಂದರು.
‘ಕೆಎಸ್‌ಡಿಎಲ್ ಒಟ್ಟು ಉತ್ಪಾದನೆಯ ಶೇ 1ರಷ್ಟು ಮಾತ್ರ ರಫ್ತಾಗುತ್ತಿದೆ. ಇದನ್ನು ಹೆಚ್ಚಿಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ. ಹೊಸ ಉತ್ಪನ್ನಗಳಲ್ಲಿ ಮಹಾರಾಜ ಮತ್ತು ಮಹಾರಾಣಿ ಸೀರೀಸ್ ಇವೆ. ಪರಂಪರೆಯ ಮಹತ್ವವನ್ನು ಬಿಟ್ಟುಕೊಡದೆ ಸಮಕಾಲೀನ ಅಭಿರುಚಿಯನ್ನು ಇಲ್ಲಿ ಬೆಸೆದಿದ್ದೇವೆ’ ಎಂದರು ವಿವರಿಸಿದರು.
ನಿಗಮದ ಅಧ್ಯಕ್ಷ ಸಿ.ಎಸ್.ಅಪ್ಪಾಜಿ ನಾಡಗೌಡ, ‘ಈ ಸಾಲಿನಲ್ಲಿ ನಿಗಮದ ವಹಿವಾಟು ₹2,000 ಕೋಟಿ ಮುಟ್ಟಲಿದ್ದು, ₹500 ಕೋಟಿಯಷ್ಟು ಲಾಭ ನಿರೀಕ್ಷಿಸಲಾಗಿದೆ. ಇದಕ್ಕಾಗಿ ಆಧುನಿಕ ವಹಿವಾಟು ತಂತ್ರ ಅನುಸರಿಸಲಾಗುತ್ತಿದೆ. ದೇಶದಾದ್ಯಂತ ವರ್ಚಸ್ಸು ಹೊಂದಿರುವ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ 3 ಕೋಟಿಗೂ ಹೆಚ್ಚು ಫಾಲೋವರ್ಸ್ ಇರುವ ತಮನ್ನಾ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಇದರಿಂದ ನಿಗಮದ ವಹಿವಾಟು ಹೆಚ್ಚಲಿದೆ’ ಎಂದು ಹೇಳಿದರು.
ನವನವೀನ ಉತ್ಪನ್ನಗಳು
ಮೈಸೂರ್ ಸ್ಯಾಂಡಲ್ ಸೋಪುಗಳಿಗೆ ಹೆಸರುವಾಸಿಯಾದ ಕೆಎಸ್‌ಡಿಎಲ್ ಈಗ ಗಂಧದ ಎಣ್ಣೆ ವಿವಿಧ ಪರಿಮಳದ ಸೋಪುಗಳು ಸುಗಂಧದ್ರವ್ಯ ಹಲ್ಲುಜ್ಜುವ ಪೇಸ್ಟ್ ಕೊಬ್ಬರಿ ಎಣ್ಣೆ ಪೆಟ್ರೋಲಿಯಂ ಜೆಲ್ಲಿ ವಿವಿಧ ಸಾವಯವ ಉತ್ಪನ್ನಗಳು ಸೇರಿ 57 ನೂತನ ಉತ್ಪನ್ನಗಳು ಮಂಗಳವಾರ ಬಿಡುಗಡೆ ಮಾಡಿದೆ. ನಿಗಮದ 100+ ವರ್ಷಗಳ ಇತಿಹಾಸವನ್ನು ವಿವರಿಸುವ ‘ಸುಗಂಧ ಸಿರಿ’ ಮತ್ತು ‘ಆರೋಮ್ಯಾಟಿಕ್ ಜರ್ನಿ’ ಕಾಫಿ ಟೇಬಲ್ ಪುಸ್ತಕಗಳೂ ಮಾರುಕಟ್ಟೆಗೆ ಬಂದಿವೆ.
‘ಮೈಸೂರ್ ಸ್ಯಾಂಡಲ್ ಕೇವಲ ಸಾಬೂನಲ್ಲ...’
‘ಮೈಸೂರು ಸ್ಯಾಂಡಲ್ ಸೋಪು ಕೇವಲ ಒಂದು ಸಾಬೂನಲ್ಲ. ಇದರೊಂದಿಗೆ ಭಾವನೆಗಳು ಬಾಲ್ಯ ಮತ್ತು ಸುಮಧುರ ನೆನಪುಗಳೆಲ್ಲ ಹೆಣೆದುಕೊಂಡಿವೆ. ಇದು ಪರಿಪೂರ್ಣತೆ ಮತ್ತು ಸತ್ಯಗಳ ಸಂಗಮ. ಮಾರುಕಟ್ಟೆಯಲ್ಲಿ ಇದಕ್ಕೆ ಸಾಟಿಯಾದ ಇನ್ನೊಂದು ಸೋಪು ಇಲ್ಲ. ಇದಕ್ಕೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ’ ಎಂದು ತಮನ್ನಾ ಭಾಟಿಯಾ ಹೇಳಿದರು.
ಅವರು ನಿಗಮದ ಪ್ರಚಾರ ರಾಯಭಾರಿಯಾಗಿ ನಟಿಸಿರುವ ಹಲವು ಜಾಹೀರಾತುಗಳನ್ನೂ ಮಂಗಳವಾರದ ಕಾರ್ಯಕ್ರಮದಲ್ಲಿ ಅನಾವರಣ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.