ADVERTISEMENT

ಸಾರಿಗೆ ಸಂಸ್ಥೆಗಳ ದರ ಪರಿಷ್ಕರಿಸದಿದ್ದರೆ ಉಳಿವು ಕಷ್ಟ!

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 20:08 IST
Last Updated 20 ಜುಲೈ 2019, 20:08 IST
   

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಸಾರಿಗೆ ನಿಗಮಗಳ ನಡುವೆ ತಾಳಮೇಳ ಇಲ್ಲ. ನಿಗಮಗಳ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬ ಆರೋಪ ಹಿಂದಿನಿಂದಲೂ ಇದೆ.

ವಿದ್ಯುತ್‌, ಹಾಲು ಸೇರಿದಂತೆ ಅವಶ್ಯ ವಸ್ತುಗಳ ದರಗಳನ್ನು ಸರ್ಕಾರ ಆಗಾಗ ಏರಿಸುತ್ತಿದೆ, ಆದರೆ ಪ್ರಯಾಣ ದರ 2015ರಿಂದಲೂ ಹೆಚ್ಚಿಸಿಲ್ಲ. ಏರಿಕೆ ಮಾಡದೇ ಇದ್ದರೆ ಆರ್ಥಿಕ ಹೊರೆಯ ಭಾರವನ್ನು ಹೊರುವುದು ಕಷ್ಟ. ಸಾರಿಗೆ ಸಂಸ್ಥೆಗಳು ಉಳಿಯಬೇಕಿದ್ದಾರೆ ಪ್ರಯಾಣ ದರ ಹೆಚ್ಚಳವೊಂದೇ ದಾರಿ ಎಂದು ಪ್ರತಿಪಾದಿಸುತ್ತಿದ್ದಾರೆ ಸಾರಿಗೆ ಇಲಾಖೆ ಅಧಿಕಾರಿಗಳು.

2016ರಲ್ಲಿ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗೆ ಶೇ 12.5ರಷ್ಟು ವೇತನ ಹೆಚ್ಚಿ ಸಲಾಗಿದೆ. ಕಾಲ ಕಾಲಕ್ಕೆ ಏರಿಕೆಯಾಗುವ ತುಟ್ಟಿಭತ್ಯೆ, ಡೀಸೆಲ್‌ ದರದಲ್ಲಿನ ಹೆಚ್ಚಳ, ಬಿಡಿಭಾಗಗಳ ಖರೀದಿ, ಗ್ರಾಮೀಣ, ನಗರ ಸಾರಿಗೆಗಳಿಂದ ಉಂಟಾಗುತ್ತಿರುವ ನಷ್ಟದಿಂದಾಗಿ ಸಾರಿಗೆ ಸಂಸ್ಥೆಗಳ ಕಾರ್ಯಾಚರಣೆ ವೆಚ್ಚ ದಿನೇ ದಿನೇ ಹೆಚ್ಚುತ್ತಿದೆ. 2018–19ನೇ ಸಾಲಿನಲ್ಲಿ ಡೀಸೆಲ್‌ ಬೆಲೆ ಏರಿಕೆಯಿಂದ ₹ 248.25 ಕೋಟಿ, ತುಟ್ಟಿ ಭತ್ಯೆ ಹೆಚ್ಚಳದಿಂದ ₹ 237.77 ಕೋಟಿ, ಬಿಡಿಭಾಗಗಳು ಮತ್ತು ಚಾಸ್ಸಿ ದರ ಹೆಚ್ಚಳದಿಂದ ₹ 50 ಕೋಟಿ ಹೆಚ್ಚಳವಾಗಿದ್ದು, ಒಟ್ಟು 536.02 ಕೋಟಿ ಹೊರೆಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ADVERTISEMENT

ವಿದ್ಯಾರ್ಥಿ ಪಾಸು ₹ 2,452.34 ಕೋಟಿ ಸರ್ಕಾರದ ಬಾಕಿ!
ವಿದ್ಯಾರ್ಥಿಗಳ ರಿಯಾಯಿತಿ ಪಾಸುಗಳ ವೆಚ್ಚವನ್ನು ನಿಗಮಗಳಿಗೆ ರಾಜ್ಯ ಸರ್ಕಾರ ಮರು ಪಾವತಿ ಮಾಡದೇ ಇರುವುದೂ ಆರ್ಥಿಕ ಹೊರೆ ಹೆಚ್ಚಳಕ್ಕೆ ಕಾರಣವಾಗಿದೆ. 60 ಕಿ.ಮೀ ವರೆಗಿನ ಪ್ರಯಾಣಕ್ಕೆ ರಾಜ್ಯದಲ್ಲಿ ಪ್ರಾಥಮಿಕ ಮತ್ತು ಎಸ್‌.ಸಿ ಹಾಗೂ ಎಸ್‌.ಟಿ ವಿದ್ಯಾರ್ಥಿಗಳಿಗೆ ಉಚಿತ, ಉಳಿದ ವಿದ್ಯಾರ್ಥಿಗಳಿಗೆ ತರಗತಿ ವಾರು ದರ ವಿಧಿಸಲಾಗಿದೆ. ಇದರಲ್ಲಿ ಸರ್ಕಾರದ ಪಾಲು ಶೇ 50. ನಿಗಮ ಮತ್ತು ವಿದ್ಯಾರ್ಥಿಗಳ ಪಾಲು ತಲಾ ಶೇ 25. ಆದರೆ, 2014–15ರಿಂದ ಈವರೆಗೆ (2018–19) ಪ್ರತಿವರ್ಷ ಸರ್ಕಾರದ ಪಾಲು ಮತ್ತು ವಿದ್ಯಾರ್ಥಿಗಳ ಪಾಲಿನ ಕೋಟ್ಯಂತರ ಮೊತ್ತ ಸಾರಿಗೆ ಇಲಾಖೆಗೆ ಮರು ಪಾವತಿ ಆಗಬೇಕಿದೆ. ಈ ಸಾಲುಗಳಲ್ಲಿನ ಸರ್ಕಾರದ ಮೊತ್ತ ₹ 1,079.58 ಕೋಟಿ, ವಿದ್ಯಾರ್ಥಿಗಳ ಪಾಲು 1372.76 ಕೋಟಿ ಸೇರಿ ಒಟ್ಟು ₹ 2,452.34 ಕೋಟಿ ನಾಲ್ಕೂ ನಿಗಮಗಳಿಗೆ ಬರಬೇಕಿದೆ.

ನಷ್ಟ ತಗ್ಗಿಸಲು ಏನು ಮಾಡಬೇಕು?

* ನಾಲ್ಕೂ ನಿಗಮಗಳು ಸರ್ಕಾರಕ್ಕೆ ಪಾವತಿಸುವ ಮೋಟಾರು ವಾಹನ ತೆರಿಗೆಯಿಂದ ವಿನಾಯಿತಿ ನೀಡಬೇಕು (ವಾರ್ಷಿಕ ₹ 470 ಕೋಟಿ)

* ಡೀಸೆಲ್‌ ಮೇಲಿನ ರಾಜ್ಯ ಸರ್ಕಾರದ ಮಾರಾಟ ತೆರಿಗೆ ಮನ್ನಾ ಮಾಡಬೇಕು (ವಾರ್ಷಿಕ ₹ 563.62 ಕೋಟಿ ಉಳಿತಾಯ)

* 2018–19ರಲ್ಲಿ ನಗರ ಸಾರಿಗೆ ಕಾರ್ಯಾಚರಣೆಯಿಂದ ₹ 439.32 ಕೋಟಿ, ಗ್ರಾಮೀಣ ಭಾಗದಲ್ಲಿನ ಕಾರ್ಯಾಚರಣೆಯಿಂದ ₹ 260.16 ಕೋಟಿ ನಷ್ಟ ಉಂಟಾಗಿದ್ದು, ಈ ನಷ್ಟವನ್ನು ಭರಿಸಲು ಸರ್ಕಾರ ಮುಂದಾಗಬೇಕು.

* ರಾಜ್ಯ ಸರ್ಕಾರಿ ನೌಕರರಿಕೆ ಜಾರಿಗೆ ತಂದಿರುವ ಜ್ಯೋತಿ ಸಂಜೀವಿನಿ ಯೋಜನೆಯನ್ನು (ನಗದು ರಹಿತ ಸೌಲಭ್ಯ) ನಿಗಮಗಳ ನೌಕರರಿಗೂ ವಿಸ್ತರಿಸಬೇಕು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.