ADVERTISEMENT

ಚಲುವರಾಯಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ಧರಣಿ: ವಿಧಾನಸಭೆ ಕಲಾಪ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2023, 9:19 IST
Last Updated 6 ಜುಲೈ 2023, 9:19 IST
ಚಲುವರಾಯಸ್ವಾಮಿ ಮತ್ತು ವಿಧಾನಸಭೆ
ಚಲುವರಾಯಸ್ವಾಮಿ ಮತ್ತು ವಿಧಾನಸಭೆ   

ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲ ಕೆಎಸ್‌ಆರ್‌ಟಿಸಿ ಬಸ್ ಡಿಪೊ ಚಾಲಕ ಕಂ ನಿರ್ವಾಹಕ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸದಸ್ಯರು ಧರಣಿ ಆರಂಭಿಸಿದ್ದು, ಗದ್ದಲ ಹೆಚ್ಚಾಗಿದ್ದರಿಂದ ಸದನದ ಕಲಾಪವನ್ನು ಮಧ್ಯಾಹ್ನ 2.45ಕ್ಕೆ ಮುಂದೂಡಲಾಗಿದೆ.

ಗುರುವಾರ ಪ್ರಶ್ನೋತ್ತರ ಕಲಾಪದ ಬಳಿಕ ಬಿಜೆಪಿಯ ಬಸವರಾಜ ಬೊಮ್ಮಾಯಿ ವಿಷಯ ಪ್ರಸ್ತಾಪಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ ಒತ್ತಡದಿಂದ ಜಗದೀಶ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ಕಾರಣಕ್ಕೆ ಆತ್ಮಹತ್ಯೆ ಯತ್ನ‌ ಮಾಡಿದ್ದಾರೆ. ಘಟನೆ ನಡೆದು ಒಂದು ದಿನ ಕಳೆದರೂ ಎಫ್ಐಆರ್ ದಾಖಲಿಸಿಲ್ಲ. ಸರ್ಕಾರ ಸಚಿವರನ್ನು ರಕ್ಷಿಸುತ್ತಿದೆ. ತಕ್ಷಣ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ADVERTISEMENT

ಚಲುವರಾಯಸ್ವಾಮಿ ವಿರುದ್ಧ ಆರೋಪ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ಸದಸ್ಯರಾದ ಪಿ.ಎಂ.‌ನರೇಂದ್ರಸ್ವಾಮಿ ಮತ್ತು ರಮೇಶ್ ಬಂಡಿಸಿದ್ದೇಗೌಡ ಆಕ್ಷೇಪಿಸಿದರು. ಆಗ ಬಿಜೆಪಿ- ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ ನಡೆಯಿತು.

ನಂತರ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, 'ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯ ಚುನಾವಣೆ ಕಾರಣಕ್ಕೆ ಒತ್ತಡ ಹಾಕಿ ವರ್ಗಾವಣೆ ಮಾಡಿರುವುದೇ ಜಗದೀಶ್ ಆತ್ಮಹತ್ಯೆಗೆ ಯತ್ನಿಸಲು ಕಾರಣ' ಎಂದು ಆರೋಪಿಸಿದರು.

ಈ ಸಂದರ್ಭದಲ್ಲೂ ಕೋಲಾಹಲ ನಡೆಯಿತು.

ಗದ್ದಲದ ನಡುವೆಯೇ 'ಇದು ಕಮಿಷನ್ ಸರ್ಕಾರ, ಕೊಲೆಗಡುಕ‌ ಸರ್ಕಾರ' ಎಂದು ಘೋಷಣೆ ಕೂಗುತ್ತಾ ಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದ ಬಿಜೆಪಿ ಸದಸ್ಯರು, ಚಲುವರಾಯಸ್ವಾಮಿ ರಾಜೀನಾಮೆಗೆ ಆಗ್ರಹಿಸಿದರು. ಗದ್ದಲ ಜೋರಾಗುತ್ತಿದ್ದಂತೆ ಸ್ಪೀಕರ್ ಯು.ಟಿ. ಖಾದರ್ ಕಲಾಪವನ್ನು ಮಧ್ಯಾಹ್ನ 2.45ಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.