ADVERTISEMENT

ಇದು ಮೋದಿ ಮಾಡಿದ ಅಸಲಿ ‘ಸರ್ಜಿಕಲ್ ಸ್ಟ್ರೈಕ್’: ಐಟಿ ದಾಳಿಗೆ ಎಚ್‌ಡಿಕೆ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 6:07 IST
Last Updated 28 ಮಾರ್ಚ್ 2019, 6:07 IST
   

ಬೆಂಗಳೂರು: ‘ಇದು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ನಿಜವಾದ ಸರ್ಜಿಕಲ್ ಸ್ಟ್ರೈಕ್‌. ಆದರೆ ಇದನ್ನು ಆದಾಯ ತೆರಿಗೆ ಇಲಾಖೆ ಮಾಡಿದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

‘ಐಟಿ ಅಧಿಕಾರಿಬಾಲಕೃಷ್ಣ ಅವರಿಗೆ ನೀಡಿರುವ ಸಂವಿಧಾನಾತ್ಮಕ ಹುದ್ದೆಯು ಪ್ರಧಾನಿಯ ದ್ವೇಷರಾಜಕಾರಣಕ್ಕೆ ದಾಳವಾಗಿದೆ. ಸರ್ಕಾರಿ ಆಡಳಿತ ಯಂತ್ರ, ಭ್ರಷ್ಟ ಅಧಿಕಾರಿಗಳನ್ನು ಪ್ರತಿಪಕ್ಷಗಳ ವಿರುದ್ಧ ಬಳಸುವ ಪ್ರಯತ್ನಖಂಡನೀಯ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಐಟಿ ದಾಳಿ ರಾಜಕೀಯ ಪ್ರೇರಿತ:ಡಿಸಿಎಂ ಡಾ.ಜಿ. ಪರಮೇಶ್ವರ

ADVERTISEMENT

ಸಿಎಂ ಆಪ್ತರ ಮನೆಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ನೀಡಿದ ಮಾಹಿತಿಯಂತೆ ಇಂದು ಸಚಿವ ಪುಟ್ಟರಾಜು ಅವರ ಮನೆ ಮೇಲೆ ದಾಳಿ ನಡೆದಿದ್ದು,ಇದು ಸಂಪೂರ್ಣ ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

ಸದಾಶಿವನಗರ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ್ದರು. ಈಗ ಲೋಕಸಭಾ ಚುನಾವಣೆ ವೇಳೆ ಕೂಡ ದಾಳಿ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆ ಅವರು ದಾಳಿ ಮಾಡುವ ಸ್ವಾತಂತ್ರ್ಯವಿದೆ. ಆದರೆ, ಬಿಜೆಪಿ ನಾಯಕರ ಮನೆ ಮೇಲೆ ಯಾಕೆ ದಾಳಿಯಾಗುವುದಿಲ್ಲ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಐಟಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ಜನರ ಗಮನಕ್ಕೆ ತರಲಾಗುತ್ತದೆ. ಕೇಂದ್ರ ಸರ್ಕಾರ ಎಷ್ಟೇ ದಾಳಿ ಅಸ್ತ್ರ ಬಿಟ್ಟರು ಅದಕ್ಕೆ ನಾವು ಭಯ ಪಡುವುದಿಲ್ಲ. ಜನರು ನಮ್ಮ ಜೊತೆ ಇದ್ದಾರೆ ಎಂದರು. ದಾಳಿ ಇನ್ನಷ್ಟು ಹೆಚ್ಚಿದರೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದರು.

‘ಐಟಿ ಅಧಿಕಾರಿಗಳು ತಮ್ಮ ಕೆಲಸವನ್ನು ತಾವು ಮಾಡಿದ್ದಾರೆ’ ಎಂದು ಬಿಜೆಪಿ ಶಾಸಕ ಸುರೇಶ್‌ಕುಮಾರ್‌ ಟ್ವೀಟ್ ಮಾಡಿದ್ದಾರೆ. ‘ನಿನ್ನೆ ವಿಜ್ಞಾನಿಗಳು ಅವರ ಕೆಲಸ ಅವರು ಮಾಡಿದ್ರು.ಇವತ್ತು IT ಅಧಿಕಾರಿಗಳು ಅವರ ಕೆಲಸ ಅವರು ಮಾಡಿದ್ದಾರೆ.ಮೊದಲನೆಯದು ನಿಜವಾದರೆ ಎರಡನೆಯದೂ ಅಷ್ಟೇ ನಿಜ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಇನ್ನಷ್ಟು ಸುದ್ದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.