ಎಚ್.ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ
ಮಂಡ್ಯ: ‘ಮನುವಾದಕ್ಕೂ ಭಗವದ್ಗೀತೆಗೂ ಏನು ಸಂಬಂಧ? ಹಾಗಾದರೆ, ಸಿದ್ದರಾಮಯ್ಯ ಅವರು ಮಕ್ಕಳಿಗೆ ಏನು ಬೋಧಿಸಲು ಹೇಳುತ್ತಾರೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಮಂಡ್ಯದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿ, ‘ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಸೇರಿಸುವಂತೆ ಹೇಳಿದ್ದೇನೆ. ನಾನೇನು ಮತಾಂತರ ಮಾಡಲಿಕ್ಕೆ ಈ ಹೇಳಿಕೆ ನೀಡಿಲ್ಲ. ಇಂದಿನ ಮಕ್ಕಳ ಬದುಕು, ಇವತ್ತಿನ ಸಮಾಜವನ್ನು ಸಿದ್ದರಾಮಯ್ಯ ನೇತೃತ್ವದಲ್ಲಿ ಯಾವ ರೀತಿ ಬೆಳೆಸುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿ ಹೇಳಿದ್ದೇನೆ’ ಎಂದು ತಿರುಗೇಟು ನೀಡಿದರು.
‘ಸಿದ್ದರಾಮಯ್ಯ ತಲೆಯಲ್ಲಿ ಇರುವುದು ಸಮಾಜದಲ್ಲಿ ಘರ್ಷಣೆ ಉಂಟು ಮಾಡುವುದಷ್ಟೆ. ಕಳೆದ 10 ವರ್ಷಗಳಿಂದ ಅಹಿಂದ ಹೆಸರಿನಲ್ಲಿ ಸಿದ್ದರಾಮಯ್ಯ ಮಜಾ ಮಾಡಿದ್ದಾರೆ. ಅವರಿಂದ ಅಹಿಂದಕ್ಕೆ ಸಿಕ್ಕ ಕೊಡುಗೆ ಏನು? ಅಹಿಂದ ಸಮಸ್ಯೆ ಎಷ್ಟು ಬಗೆಹರಿಸಿದ್ದಾರೆ? ಅಹಿಂದಲ್ಲಿ ಅನೇಕ ಸಣ್ಣ ಜಾತಿಗಳಿವೆ. ಆ ಸಮಾಜಗಳಿಗೆ ಅವರ ಕೊಡುಗೆ ಏನು? ಅವರು ಯಾರಿಗೆ ಆದ್ಯತೆ ಕೊಟ್ಟಿದ್ದಾರೆ’ ಎಂದು ಪ್ರಶ್ನಿಸಿದರು.
‘ಸಂಬಂಧಿಕರ ಜೊತೆ ರಕ್ತದೋಕುಳಿ ನಡೆಸುವುದು ಬೇಡ ಅನ್ನುವುದು ಭಗವದ್ಗೀತೆಯಲ್ಲಿದೆ. ಈ ಸರ್ಕಾರ ಕಾನೂನುಬಾಹಿರ ಚಟುವಟಿಕೆ ಬೆಂಬಲಿಸುತ್ತದೆ. ಇದರಿಂದ ಭಗವದ್ಗೀತೆ ಈ ಸಂದರ್ಭದಲ್ಲಿ ಅವಶ್ಯವಿದೆ ಎಂದು ನಾನು ಪ್ರತಿಪಾದಿಸಿದ್ದೇನೆ’ ಎಂದರು.
‘ಇಲ್ಲಸಲ್ಲದ ಆರೋಪ ಮಾಡಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಕೆಲಸ ಆಗುತ್ತಿದೆ’ ಎಂಬ ಶಾಸಕ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ನಡೆದು ಬಂದ ಹಿನ್ನೆಲೆ ಏನು? ಈ ಮಟ್ಟಕ್ಕೆ ಅವರು ಬರಲು ಯಾರು ಕಾರಣ? ಇವರಿಗೆ ಯಾರಿಂದ ತೊಂದರೆಯಾಗಿದೆ? ಅವೆಲ್ಲವನ್ನೂ ಸಹ ಅವರು ಹೇಳಬೇಕು. ಯತೀಂದ್ರ ನಿನ್ನೆ ಮೊನ್ನೆಯಷ್ಟೇ ಬಂದಿದ್ದಾರೆ, ಅವರಿಗೆ ಇತಿಹಾಸ ಗೊತ್ತಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.