ADVERTISEMENT

ಕುಮಾರಸ್ವಾಮಿ ರಾಜಕೀಯ ಗೂಂಡಾ: ಕೆ.ಎಸ್‌. ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2018, 16:59 IST
Last Updated 27 ಅಕ್ಟೋಬರ್ 2018, 16:59 IST
   

ಹೊಸಪೇಟೆ: ‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೂ, ಸಿನಿಮಾದಲ್ಲಿ ನಟಿಸುವ ವಿಲನ್‌ಗೂ ಯಾವುದೇ ವ್ಯತ್ಯಾಸವಿಲ್ಲ. ಕುಮಾರಸ್ವಾಮಿ ರಾಜಕೀಯ ಗೂಂಡಾ. ವಿಲನ್‌ ಸಿನಿಮಾಕ್ಕಷ್ಟೇ ಗೂಂಡಾ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಹೋಲಿಕೆ ಮಾಡಿದರು.

ಬಳ್ಳಾರಿ ಲೋಕಸಭೆ ಉಪಚುನಾವಣೆ ನಿಮಿತ್ತ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ನನ್ನನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದರೆ ಜನರನ್ನು ದಂಗೆ ಏಳಲು ಹೇಳುತ್ತೇನೆ ಎಂದಿದ್ದ ಕುಮಾರಸ್ವಾಮಿ ಈಗ ಸಾಯುವ ಮಾತುಗಳನ್ನು ಆಡುತ್ತಿದ್ದಾರೆ. ನೀವು ಸಾಯಬೇಡಿ. ನುಡಿದಂತೆ ರೈತರ ಸಾಲ ಮನ್ನಾ ಮಾಡಿ. ಒಂದುವೇಳೆ ಸಾಲ ಮನ್ನಾ ಮಾಡಿದರೆ ಇನ್ನೂ ಹತ್ತು ವರ್ಷ ಬದುಕುತ್ತೀರಿ’ ಎಂದು ಹೇಳಿದರು.

‘ಕೋಮುವಾದಿಗಳಲ್ಲ, ರಾಷ್ಟ್ರೀಯವಾದಿಗಳು’:

ADVERTISEMENT

‘ಕಾಂಗ್ರೆಸ್‌ ಹಾಗೂ ಜೆ.ಡಿ.ಎಸ್.ನವರು ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಟೀಕಿಸುತ್ತಾರೆ. ಆದರೆ, ನಾವು ಕೋಮುವಾದಿಗಳಲ್ಲ ರಾಷ್ಟ್ರೀಯವಾದಿಗಳು. ನಿಜವಾದ ಜಾತಿಗಳೆಂದರೆ ಎಚ್‌.ಡಿ. ದೇವೇಗೌಡ ಹಾಗೂ ಸಿದ್ದರಾಮಯ್ಯ. ಈ ಜಾತಿವಾದಿಗಳನ್ನು ದೂರವಿಡುವ ಅಗತ್ಯವಿದೆ. ವಿಧಾನಸಭೆ ಚುನಾವಣೆಯಲ್ಲಿ ಜನ ಇಬ್ಬರನ್ನೂ ತಿರಸ್ಕರಿಸಿದ್ದಾರೆ. ಆದರೆ, ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಹೇಳಿದ್ದು ಸುಳ್ಳು; ರಾಹುಲ್‌ ಹೋದಲೆಲ್ಲ ಸೋಲು’:

‘ಸುಳ್ಳು ಹೇಳುವುದಕ್ಕಾಗಿ ಯಾರಿಗಾದರೂ ನೊಬೆಲ್‌ ಕೊಡುವುದಾದರೆ ಅದು ಸಿದ್ದರಾಮಯ್ಯನವರಿಗೆ ಕೊಡಬೇಕು. ವಿಧಾನಸಭೆ ಚುನಾವಣೆಗೂ ಮುನ್ನ ನಾನೇ ಮತ್ತೆ ಸಿ.ಎಂ. ಆಗುತ್ತೇನೆ. ಕುಮಾರಸ್ವಾಮಿ ಅವರಪ್ಪನಾಣೆಗೂ ಸಿ.ಎಂ. ಆಗುವುದಿಲ್ಲ ಎಂದು ಹೇಳಿದ್ದರು. ಆದರೆ, ಸೋತು ಸುಣ್ಣವಾದರು. ಅವರೇ ಮುಂದೆ ನಿಂತು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದರು’ ಎಂದರು.

‘ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಚುನಾವಣೆ ಪ್ರಚಾರಕ್ಕೆ ಹೋದಲೆಲ್ಲ ಕಾಂಗ್ರೆಸ್‌ ಸೋತು ಸುಣ್ಣವಾಗಿದೆ. ಅವರ ಕಾಲು ಗುಣ ಸರಿಯಿಲ್ಲ. 21 ರಾಜ್ಯಗಳಲ್ಲಿ ಅವರು ಪ್ರಚಾರ ಕೈಗೊಂಡರು. ಅಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿತು. ವಿಧಾನಸಭೆ ಚುನಾವಣೆ ವೇಳೆ ಶಿವಮೊಗ್ಗಕ್ಕೆ ಬಂದು ನನ್ನ ವಿರುದ್ಧ ಪ್ರಚಾರ ಮಾಡಿದರು. ನಾನು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದೆ. ಈಗ ನೀವು ಬಳ್ಳಾರಿಗೆ ಬಂದರೆ ನಮ್ಮ ಕೆಲಸ ಇನ್ನಷ್ಟು ಸುಲಭವಾಗುತ್ತದೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.