ADVERTISEMENT

ಎಸ್‌ಟಿ ಪಟ್ಟಿಗೆ ಕುರುಬರ ಸೇರ್ಪಡೆಗೆ ಆಗ್ರಹ

ಈಶ್ವರಪ್ಪ ನಿವಾಸದಲ್ಲಿ ಕುರುಬ ಸಮುದಾಯದ ಪ್ರಮುಖರ ಸಭೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 20:53 IST
Last Updated 27 ಸೆಪ್ಟೆಂಬರ್ 2020, 20:53 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಬೆಂಗಳೂರು: ಮೀಸಲಾತಿ ಆಗ್ರಹಿಸಿ ವಾಲ್ಮೀಕಿ ಸಮುದಾಯ ಒಗ್ಗಟ್ಟಿನಿಂದ ನಡೆಸಿದ ಹೋರಾಟದ ಮಾದರಿಯಲ್ಲೇ, ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿಸುವಂತೆ ಒತ್ತಾಯಿಸಿ ಹೋರಾಟ ರೂಪಿಸಲು ಕುರುಬ ಸಮುದಾಯ ನಿರ್ಧರಿಸಿದೆ.

ಕುರುಬ ಸಮುದಾಯದ ಮುಖಂಡರೂ ಆಗಿರುವ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ನಿವಾಸದಲ್ಲಿ ಭಾನುವಾರ ನಡೆದ ಸಮುದಾಯದ ಸ್ವಾಮೀಜಿಗಳು ಮತ್ತು ಪ್ರಮುಖರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಮಾತನಾಡಿದ ಈಶ್ವರಪ್ಪ, ‘ಕೇಂದ್ರ ಮತ್ತು ರಾಜ್ಯ ಸರ್ಕಾರ ಮೇಲೆ ಒತ್ತಡ ಹೇರಲು ಸಮುದಾಯದ ಸ್ವಾಮೀಜಿಗಳ ಸಲಹೆಯಂತೆ ಹೋರಾಟದ ರೂಪುರೇಷೆ ತಯಾರಿಸಲಾಗುವುದು’ ಎಂದರು.

ADVERTISEMENT

‘ವಾಲ್ಮೀಕಿ ಸಮುದಾಯ ನಡೆಸಿದ ಒಗ್ಗಟ್ಟಿನ ಪ್ರದರ್ಶನದಿಂದ ಆ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ಬಗ್ಗೆ ಸರ್ಕಾರ ತೀರ್ಮಾನ ಮಾಡಲು ಮುಂದಾಗಿದೆ‌. ಅದೇ ರೀತಿ ನಾವು ಕೂಡಾ ಹೋರಾಟ ರೂಪಿಸಬೇಕು. ಸಮುದಾಯದಿಂದ ಶಕ್ತಿ ಪ್ರದರ್ಶನ ಆಗಬೇಕು. ಇಲ್ಲವಾದರೆ ಯಾವುದೇ ಸರ್ಕಾರ ಬಗ್ಗುವುದಿಲ್ಲ. ಪಾದಯಾತ್ರೆ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಬೇಕು’ ಎಂದು ಸಮುದಾಯದ ಜನರಿಗೆ ಕರೆ ಕೊಟ್ಟರು.

ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪುರ ಮಾತನಾಡಿ, ‘ಎಲ್ಲರೂ ಒಂದೇ ಧ್ವನಿಯಿಂದ ಹೋರಾಟ ಮಾಡಬೇಕಿದೆ. ಈಗ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ, ಈಶ್ವರಪ್ಪ ಅವರು ಹೋರಾಟಕ್ಕೆ ನೇತೃತ್ವ ನೀಡಿದರೆ ಎಲ್ಲರೂ ಹಿಂದಿನಿಂದ ಬರುತ್ತೇವೆ. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಈ ಬೇಡಿಕೆಗೆ ಒಪ್ಪಿಗೆ ಕೊಡಿಸಬೇಕು’ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್, ‘ಎಸ್‌ಟಿ ಪಟ್ಟಿಗೆ ಸೇರಿಸುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ. ಅದಕ್ಕಾಗಿ ನಾವು ಹೋರಾಟ ಮಾಡಬೇಕು. ಈ ಕೆಲಸ ಈಗ ಆಗದಿದ್ದರೆ ಮುಂದೆ ಎಂದೂ ಆಗುವುದಿಲ್ಲ’ ಎಂದರು.

ಈಶ್ವರಾನಂದಪುರಿ ಸ್ವಾಮೀಜಿ, ‘ಎಸ್‌ಟಿಗೆ ಸೇರಿಸುವ ವಿಷಯದಲ್ಲಿ ಕೇವಲ ಬೀದರ್, ಕಲಬುರ್ಗಿ, ಯಾದಗಿರಿ ಭಾಗದಲ್ಲಿ ಹೋರಾಟ ನಡೆಯುತ್ತಿದೆ. ರಾಜ್ಯದ ಎಲ್ಲರೂ ಸೇರಿ ಹೋರಾಟ ಮಾಡಬೇಕು. ಇಡೀ ಕುರುಬ ಸಮುದಾಯ ಒಂದೇ ಕಡೆ ಸೇರಿದರೆ ಜಯ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.