ಮೈಸೂರು: ‘ಸಂಸದ ಡಾ.ಕೆ. ಸುಧಾಕರ್ ಅವರಿಗೆ ಅನುಭವ ಹಾಗೂ ಮಾಹಿತಿ ಕೊರತೆ ಇದೆ. ಹೀಗಾಗಿ, ಆ ರೀತಿ ಮಾತನಾಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದರು.
ಸುಧಾಕರ್ ತಮ್ಮ ವಿರುದ್ಧ ತಿರುಗಿ ಬಿದ್ದಿರುವ ಬಗ್ಗೆ ಇಲ್ಲಿ ಗುರುವಾರ ಪ್ರತಿಕ್ರಿಯಿಸಿದ ಅವರು, ‘ನನಗೆ ಸುಧಾಕರ್ ಫೋನ್ ಕರೆ ಮಾಡಿಲ್ಲ. ನಾಲ್ಕು ದಿನಗಳ ಹಿಂದೆ, ಮಾತನಾಡಬೇಕಿದೆ ಎಂದು ಸಂದೇಶ ಕಳುಹಿಸಿದ್ದರು. ನಾನು ಅನಿವಾರ್ಯವಾಗಿ ದೆಹಲಿಗೆ ಹೋಗಬೇಕಿದ್ದರಿಂದ ಭೇಟಿಯಾಗಿರಲಿಲ್ಲ. ಅಂತಹ ನಾಯಕರು ಕರೆ ಮಾಡಿದರೆ ಸ್ವೀಕರಿಸಲು ಆಗದಷ್ಟು ದೊಡ್ಡವನೇನಲ್ಲ. ಯಾವ ಅರ್ಥದಲ್ಲಿ ಅವರು ಟೀಕಿಸಿದ್ದಾರೆಯೋ ಗೊತ್ತಿಲ್ಲ’ ಎಂದರು.
‘ಪಕ್ಷದ ಚಿಕ್ಕಬಳ್ಳಾಪುರ ಘಟಕದ ಅಧ್ಯಕ್ಷರ ನೇಮಕದಲ್ಲಿ ನನ್ನ ಯಾವ ಪಾತ್ರವೂ ಇಲ್ಲ. ಆದ್ದರಿಂದ, ಸುಧಾಕರ್ ಅವರನ್ನು ವಿಶ್ವಾಸಕ್ಕೆ ತೆಗದುಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ಆ ಚುನಾವಣೆ ಉಸ್ತುವಾರಿ ಹೊತ್ತವರೇ ಬೇರೆ. ಉಸ್ತುವಾರಿಗಳು ಹೈಕಮಾಂಡ್‌ಗೆ ಹೆಸರು ಕಳುಹಿಸಿದ್ದರು, ಅದನ್ನು ಹೈಕಮಾಂಡ್ ತೀರ್ಮಾನಿಸಿದೆ. ಯಾವ ಹಂತದಲ್ಲೂ ನನ್ನ ಪಾತ್ರ ಬರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಪಕ್ಷಕ್ಕಾಗಿ ಎಲ್ಲ ಟೀಕೆಗಳನ್ನೂ ನಾನು ಸಹಿಸಿಕೊಳ್ಳುತ್ತೇನೆ. ಯಾರು ಏನೇ ಮಾತನಾಡಿದರೂ ಎಲ್ಲವನ್ನೂ ಸಹನೆಯಿಂದ ಸ್ವೀಕರಿಸುತ್ತೇನೆ. ಎಲ್ಲರಿಂದಲೂ ಅನುಭವ ಕಲಿಯುತ್ತಿದ್ದೇನೆ. ನನಗೆ ಪಕ್ಷ ಮಾತ್ರವೇ ಮುಖ್ಯ. ಬಿ.ಎಸ್. ಯಡಿಯೂರಪ್ಪ ಅವರಿಂದ ಜೀವನದ ಅನುಭವಗಳನ್ನು ಕಲಿತಿದ್ದೇನೆ. ಯಾರ ಜೊತೆಯೂ ಯುದ್ಧ ಮಾಡಲು ಅಧ್ಯಕ್ಷನಾಗಿಲ್ಲ. ಪಕ್ಷ ಕಟ್ಟಲು ಆಗಿದ್ದೇನೆ. ಸುಧಾಕರ್ ಅವರಿಂದ ಯುದ್ಧದ ಮಾತು ಯಾಕೆ ಬಂತೋ ಗೊತ್ತಿಲ್ಲ. ಅವರ ಜೊತೆ ಮಾತನಾಡಲು ಮುಕ್ತನಾಗಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.
‘ಯಡಿಯೂರಪ್ಪ ಅವರ ಮಗ ಎಂಬ ಕಾರಣಕ್ಕೆ ನಾನು ಟಾರ್ಗೆಟ್ ಆಗಿದ್ದೇನೆ ಎಂದು ಹೇಳುವುದಿಲ್ಲ’ ಎಂದರು.
‘ಪಕ್ಷದಲ್ಲಿ ಎಲ್ಲಾ ಹಂತದ ಆಯ್ಕೆಗೂ ಚುನಾವಣೆ ನಡೆಯುತ್ತಿದೆ. ರಾಜ್ಯ ಘಟಕ, ರಾಷ್ಟ್ರೀಯ ಅಧ್ಯಕ್ಷ ಸೇರಿ ಎಲ್ಲದಕ್ಕೂ ಆಂತರಿಕ ಚುನಾವಣೆಗಳಿವೆ. ರಾಜ್ಯ ಘಟಕದ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆಯೂ ಸಾಗಿದೆ. ಏನಾಗುತ್ತದೆಯೋ ನೋಡೋಣ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.