ADVERTISEMENT

ಸಂಜ್ಞೆ ಭಾಷೆ ಸಂವಹನಕಾರರ ಕೊರತೆ

ರಾಜ್ಯದಲ್ಲಿದ್ದಾರೆ 2 ಲಕ್ಷ ಶ್ರವಣದೋಷವುಳ್ಳವರು l ಸರ್ಕಾರದಿಂದ ದೊರಕದ ಪ್ರೋತ್ಸಾಹ

ಬಾಲಕೃಷ್ಣ ಪಿ.ಎಚ್‌
Published 29 ಡಿಸೆಂಬರ್ 2019, 10:00 IST
Last Updated 29 ಡಿಸೆಂಬರ್ 2019, 10:00 IST
ದುರ್ಗೇಶ್‌
ದುರ್ಗೇಶ್‌   

ದಾವಣಗೆರೆ: ರಾಜ್ಯದಲ್ಲಿ ಸುಮಾರು 2 ಲಕ್ಷ ಶ್ರವಣದೋಷದವರಿದ್ದು, ಅವರ ಮಾತೃಭಾಷೆಯಾದ ಸಂಜ್ಞೆಯನ್ನು ಅರ್ಥ ಮಾಡಿಕೊಂಡು ಸಂವಹನ ನಡೆಸುವ ತಜ್ಞರ ಕೊರತೆ ಕಾಡುತ್ತಿದೆ.

ರಾಜ್ಯ ಮಟ್ಟದ ಎಲ್ಲ ಕಚೇರಿಗಳಲ್ಲಿ ತಲಾ ಒಬ್ಬರು, ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿ, ಅಂಗವಿಕಲರ ಕಚೇರಿ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್‌ ಕಚೇರಿ, ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಕಚೇರಿ, ತಾಲ್ಲೂಕು ಆಸ್ಪತ್ರೆ ಹೀಗೆ ಹೆಚ್ಚು ಅಗತ್ಯ ಇರುವ ಕಡೆಗಳಲ್ಲಿ ಒಬ್ಬರಾದರೂ ಸಂಜ್ಞೆ ಸಂವಹನಕಾರರು ಇರಬೇಕು. ಆದರೆ ಪ್ರತಿ ಜಿಲ್ಲೆಯಲ್ಲಿ ಇಬ್ಬರು, ಮೂವರಷ್ಟೇ ಸಂವಹನಕಾರರು ಇದ್ದಾರೆ. ದಾವಣಗೆರೆಯಲ್ಲಿ ಸುಮಾರು 9 ಸಾವಿರ ಶ್ರವಣ
ದೋಷದವರಿದ್ದು, ಕೇವಲ ಮೂವರು ಸಂವಹನಕಾರರಿದ್ದಾರೆ.

ಹೆತ್ತವರೊಂದಿಗೆ, ಮನೆಮಂದಿ, ಸ್ನೇಹಿತರೊಂದಿಗೆ ಸಂವಹನ ಮಾಡಲು, ವಿದ್ಯೆ ಕಲಿಯಲು ಎಲ್ಲದಕ್ಕೂ ಸಂಜ್ಞೆ ಸಂವಹನಕಾರರು ಬೇಕು. ಈಗಿರುವ ಸಂವಹನಕಾರರಲ್ಲಿ ಹೆಚ್ಚಿನವರು ಸ್ವ–ಆಸಕ್ತಿಯಿಂದ ಕಲಿತವರೇ ವಿನಾ ಸರ್ಕಾರದ ಪ್ರೋತ್ಸಾಹದಿಂದ ಕಲಿತವರಲ್ಲ.

ADVERTISEMENT

‘ಒಂದು ಮನೆಯಲ್ಲಿ ಶ್ರವಣ ದೋಷವುಳ್ಳ ಮಗು ಇದ್ದರೆ ತಾಯಿ ಅಥವಾ ತಂದೆಗೆ ಸಂಬಂಧಿಕರೊಬ್ಬರು ಕರೆ ಮಾಡಿ 15 ನಿಮಿಷ ಮಾತನಾಡಿದರೆ ಅಷ್ಟು ಹೊತ್ತು ಆ ಮಗು ಅದನ್ನು ನೋಡುತ್ತಾ ಇರುತ್ತದೆ. ಆನಂತರ ಯಾರು, ಏನು ಎಂಬುದನ್ನು ಮಗು ತನ್ನದೇ ಭಾಷೆಯಲ್ಲಿ ಕೇಳುತ್ತದೆ. ತಂದೆ, ತಾಯಿ ಎರಡು ಶಬ್ದಗಳಲ್ಲಿ ಹೇಳಿ ಮುಗಿಸುತ್ತಾರೆ. ತಂದೆ–ತಾಯಿ ಎಲ್ಲವನ್ನೂ ಹೇಳುತ್ತಿಲ್ಲ ಎಂದು ಮಗು ತಿಳಿದುಕೊಳ್ಳುತ್ತದೆ. ಇದರಿಂದ ಮಗು ಬೆಳೆಯುತ್ತಾ ಹೋದಂತೆ ಬಾಂಧವ್ಯ ಕಡಿಮೆಯಾಗುತ್ತದೆ. ಹೀಗಾಗಿ ಪೋಷಕರು ಮೊದಲು ಸಂಜ್ಞೆ ಭಾಷೆ ಕಲಿಯಬೇಕು. ಆಗ ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ’ ಎನ್ನುತ್ತಾರೆ ಸಂಜ್ಞೆ ಸಂವಹನಕಾರ ದುರ್ಗೇಶ್‌.

ಶ್ರವಣದೋಷವುಳ್ಳ ಹೆಣ್ಣು ಮಗುವೊಂದು ತನ್ನ ವಯಸ್ಸಿಗೆ ಸರಿಯಾಗಿ ದೇಹದಲ್ಲಿ ಆಗುತ್ತಿರುವ ಬದಲಾವಣೆಯನ್ನು ತಾಯಿಗೆ
ಹೇಳಿಕೊಳ್ಳಬೇಕಿದ್ದರೆ ಆ ಮಗು ಮತ್ತು ತಾಯಿಗೆ ಸಂಜ್ಞೆ ಭಾಷೆ ಗೊತ್ತಿರಬೇಕು ಎನ್ನುವುದು ಸಂಜ್ಞೆ ಸಂವಹನಕಾರ್ತಿ ನಂದಿನಿ ಅವರ ಸಲಹೆ.

‘ಹಿಂದೆ ವಿವಿಧ ಶಾಲೆಗಳಿಗೆ ಎಪಿಡಿ ಸಂಸ್ಥೆಯ ಮೂಲಕ ನಾವೇ ಈ ಸಂಜ್ಞೆ ಭಾಷೆ ಬಗ್ಗೆ ತಿಳಿಸುತ್ತಿದ್ದೆವು. ಈಗ 15 ಮಾದರಿ ಶಾಲೆಗಳನ್ನು ಗುರುತಿಸಿ ವಾರಕ್ಕೊಮ್ಮೆ ಹೋಗಿ ಶಿಕ್ಷಕರಿಗೆ, ಮಾತು ಬರುವ ಮಕ್ಕಳಿಗೆ, ಮಾತನಾಡದ ಮಕ್ಕಳಿಗೆ ಈ ಭಾಷೆ ಕಲಿಸುತ್ತಿದ್ದೇವೆ. ಇದು ಸಂವಹನಕ್ಕೆ ಉಪಯೋಗವಾಗುತ್ತದೆ. ಅಧಿಕೃತ ಸಂವಹನಕಾರರಾಗಲು ಬಯಸುವವರು ಅದಕ್ಕೆ ಸಂಬಂಧಪಟ್ಟ ಕೋರ್ಸ್‌ ಮಾಡಬೇಕು’ ಎಂದು ಸಂಜ್ಞೆ ಸಂವಹನಕಾರ್ತಿ
ಸಾವಿತ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಭಾರತೀಯ ಸಂಜ್ಞೆ ಭಾಷೆ ವಿಶ್ವ ಮಾನ್ಯತೆ

ಇಂಡಿಯನ್‌ ಸೈನ್‌ ಲ್ಯಾಂಗ್ವೆಜ್‌ ಮತ್ತು ಅಮೆರಿಕನ್‌ ಸೈನ್‌ ಲ್ಯಾಂಗ್ವೆಜ್‌ಗಳಿಗೆ ಮಾತ್ರ ವಿಶ್ವ ಮಾನ್ಯತೆ ಇದೆ. ಭಾರತದಲ್ಲಿ ಹಲವು ಭಾಷೆಗಳಿದ್ದರೂ ಸಂಜ್ಞೆ ಭಾಷೆ ಒಂದೇ ಆಗಿದೆ. ನಾನಾ ಭಾಷಿಕ ಪ್ರದೇಶದವರು ಒಂದೇ ಸಂಜ್ಞೆ ಬಳಸುತ್ತಿರುವುದರಿಂದ ವಿದೇಶಿಗರಿಗೂ ಸುಲಭವಾಗಿ ಅರ್ಥವಾಗುತ್ತದೆ ಎಂಬ ಕಾರಣಕ್ಕೆ ಇಂಡಿಯನ್‌ ಸೈನ್‌ ಲ್ಯಾಂಗ್ವೆಜ್‌ಗೆ ಮಾನ್ಯತೆ ಇದೆ. ಇದನ್ನೇ ಎಲ್ಲರೂ ಕಲಿಯಬೇಕು ಎಂಬುದು ದುರ್ಗೇಶ್‌ ಅವರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.