ADVERTISEMENT

ಚುನಾವಣೆ ನಂತರವೇ ನಾಯಕತ್ವ ನಿರ್ಧಾರ: ಕೆ.ಸಿ. ವೇಣುಗೋಪಾಲ

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 21:15 IST
Last Updated 2 ಆಗಸ್ಟ್ 2022, 21:15 IST
ಹುಬ್ಬಳ್ಳಿಯ ಫಾರ್ಚೂನ್‌ ಹೋಟೆಲ್‌ನಲ್ಲಿ ಮಂಗಳವಾರ ರಾತ್ರಿ ನಡೆದ ಕಾಂಗ್ರೆಸ್‌ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಬಿ.ಕೆ. ಹರಿಪ್ರಸಾದ್, ಸಿದ್ದರಾಮಯ್ಯ, ರಾಹುಲ್‌ ಗಾಂಧಿ, ಕೆ.ಸಿ. ವೇಣುಗೋಪಾಲ್, ಡಿ.ಕೆ. ಶಿವಕುಮಾರ್‌ ಭಾಗವಹಿಸಿದ್ದರು
ಹುಬ್ಬಳ್ಳಿಯ ಫಾರ್ಚೂನ್‌ ಹೋಟೆಲ್‌ನಲ್ಲಿ ಮಂಗಳವಾರ ರಾತ್ರಿ ನಡೆದ ಕಾಂಗ್ರೆಸ್‌ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಬಿ.ಕೆ. ಹರಿಪ್ರಸಾದ್, ಸಿದ್ದರಾಮಯ್ಯ, ರಾಹುಲ್‌ ಗಾಂಧಿ, ಕೆ.ಸಿ. ವೇಣುಗೋಪಾಲ್, ಡಿ.ಕೆ. ಶಿವಕುಮಾರ್‌ ಭಾಗವಹಿಸಿದ್ದರು   

ಹುಬ್ಬಳ್ಳಿ: ‘ಕಾಂಗ್ರೆಸ್‌ನಲ್ಲಿ ನಾಯಕತ್ವದ ಬಗ್ಗೆ ಯಾವುದೇ ಗೊಂದಲವಿಲ್ಲ. ವೈಯಕ್ತಿಕ ಹೇಳಿಕೆಗೆ ಮಹತ್ವವಿಲ್ಲ. ಚುನಾವಣೆ ನಂತರವೇ ನಾಯಕತ್ವದ ಬಗ್ಗೆ ನಿರ್ಧಾರ ಮಾಡುವುದು ಪಕ್ಷದ ಸಿದ್ಧಾಂತ. ನಾಯಕತ್ವವನ್ನು ‌ಹೈಕಮಾಂಡ್ ನಿರ್ಧರಿಸಲಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಹೇಳಿದರು.

ಇಲ್ಲಿನ ಫಾರ್ಚೂನ್‌ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯ ಮೊದಲ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

‘ನಾಯಕತ್ವದ‌ ಕುರಿತು ಅಲ್ಲಲ್ಲಿ ಕೆಲ ಹೇಳಿಕೆ‌ಗಳು ವ್ಯಕ್ತವಾಗಿವೆ. ಕೆಲವು ಮಾಧ್ಯಮಗಳ ಸೃಷ್ಟಿಯೂ ಆಗಿವೆ. ಪಕ್ಷದ ನಾಯಕರು ಇದಕ್ಕೆ‌ ಕಿವಿಗೊಡಬಾರದು. ನಾಯಕರು ಒಟ್ಟಾಗಿರಬೇಕು. ಆಂತರಿಕವಾಗಿ ಅಥವಾ ಬಹಿರಂಗವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಬಾರದು ಎಂದು ಸಭೆಯಲ್ಲಿ ಮುಖಂಡರಿಗೆ ಸಂದೇಶ ನೀಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಆಂತರಿಕವಾಗಿ ಚರ್ಚೆಯಾಗುವ ವಿಚಾರಗಳನ್ನು ಬಹಿರಂಗವಾಗಿ‌ ಹೇಳಿಕೆ‌ ನೀಡಬಾರದು ಎನ್ನುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಸಭೆಯಲ್ಲಿ ಹಲವು ವಿಚಾರಗಳ ಕುರಿತು ಸಮಾಲೋಚನೆ ನಡೆದಿದೆ. ಒಕ್ಕೊರಲಿನಿಂದ ಕೆಲವೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ಅವರು ಕೂಡ ಹಲವು ಸಲಹೆ ಸೂಚನೆ ನೀಡಿದ್ದಾರೆ’ ಎಂದರು.

ಬಿಜೆಪಿ‌ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಕುರಿತಂತೆ ಉಗ್ರವಾಗಿ ಪ್ರತಿಕ್ರಿಯಿಸಲು ಕರೆಕೊಟ್ಟಿದ್ದಾರೆ. ಶೇ 40ರಷ್ಟು ಕಮಿಷನ್, ಭ್ರಷ್ಟಾಚಾರ, ವ್ಯಾಪಕವಾಗಿರುವ ನಿರುದ್ಯೋಗ, ಬೆಲೆ ಏರಿಕೆ ಸೇರಿದಂತೆ ಇತರ ವಿಷಯಗಳ ಕುರಿತ ಜನರಿಗೆ ಮನಮುಟ್ಟುವಂತೆ ತಿಳಿಸಬೇಕೆಂದು ರಾಹುಲ್‌ ಸೂಚಿಸಿದ್ದಾರೆ ಎಂದರು.

‘ಕಾಂಗ್ರೆಸ್ ಒಂದಾಗಿ ಹೋರಾಟ ಮಾಡಿ ಶಕ್ತಿ ಪ್ರದರ್ಶನ ಮಾಡಲಿದೆ. ರಾಜ್ಯದಲ್ಲಿ ನಡೆಯಲಿರುವ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಪುನಃ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಸಲೀಂ ಅಹ್ಮದ್‌, ಆರ್‌.ವಿ. ದೇಶಪಾಂಡೆ, ವೀರಪ್ಪ ಮೊಯಿಲಿ, ಕೃಷ್ಣ ಬೈರೇಗೌಡ, ಉಮಾಶ್ರೀ, ದಿನೇಶ ಗುಂಡೂರಾವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.