ADVERTISEMENT

ವಿಧಾನ ಪರಿಷತ್‌ ಸಭಾಪತಿಗೆ ಅಗೌರವ: ಸಭೆ ನಡೆಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 15:51 IST
Last Updated 10 ಡಿಸೆಂಬರ್ 2025, 15:51 IST
<div class="paragraphs"><p>ಸುವರ್ಣ ವಿಧಾನಸೌಧ</p></div>

ಸುವರ್ಣ ವಿಧಾನಸೌಧ

   

ಸುವರ್ಣ ವಿಧಾನಸೌಧ (ಬೆಳಗಾವಿ): ವಿಧಾನ ಪರಿಷತ್‌ ಸಭಾಪತಿ ಅವರ ವಿರುದ್ಧ, ಸದಸ್ಯ ಎಂ.ನಾಗರಾಜ್ ಯಾದವ್ ಅವರು ಮಾಧ್ಯಮಗಳ ಎದುರು ಮಾಡಿರುವ ಆರೋಪಗಳ ಕುರಿತು ಬುಧವಾರದ ಕಲಾಪದ ವೇಳೆ ವ್ಯಾಪಕ ಚರ್ಚೆ ನಡೆಯಿತು.

ಸಭಾಪತಿ ಅವರ ಪೀಠಕ್ಕೆ ಎಲ್ಲರೂ ಗೌರವ ಸಲ್ಲಿಸಬೇಕು ಎಂಬುದರ ಜತೆಗೆ, ಅವರ ವಿರುದ್ಧ ದೂರು ಮತ್ತು ಆರೋಪಗಳು ಇದ್ದರೆ ಅವನ್ನು ಸದನದ ನಿಯಮಾನುಸಾರವೇ ದಾಖಲಿಸಬೇಕು ಎಂಬ ಒತ್ತಾಯವೂ ವ್ಯಕ್ತವಾಯಿತು.

ADVERTISEMENT

ನಾಗರಾಜ್‌ ಯಾದವ್ ಅವರ ನಡೆಯ ಬಗ್ಗೆ ಸಭಾಪತಿ, ಸಭಾನಾಯಕ ಮತ್ತು ವಿರೋಧ ಪಕ್ಷದ ನಾಯಕ ಅವರು ಕುಳಿತು ಚರ್ಚಿಸಿ, ಕ್ರಮ ತೆಗೆದುಕೊಳ್ಳಬೇಕು ಎಂದು ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಎಂ.ಕೆ.ಪ್ರಾಣೇಶ್‌ ಅವರು ಸೂಚಿಸಿದರು.

ಅದಕ್ಕೂ ಮುನ್ನ ಜೆಡಿಎಸ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ, ‘ಸಭಾಪತಿ ಅವರು ಭ್ರಷ್ಟಾಚಾರ ನಡೆಸಿದ್ದಾರೆ, ಪಕ್ಷಾತೀತವಾಗಿ ಇರಬೇಕು ಎಂಬುದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ, ಸಭಾಪತಿ ನಾಲಾಯಕ್‌ ಎಂದೆಲ್ಲಾ ನಾಗರಾಜ್ ಯಾದವ್‌ ಅವರು ಆರೋಪಿಸಿದ್ದಾರೆ. ಈ ಬಗ್ಗೆ ಅವರಿಂದ ವಿವರಣೆ ಪಡೆಯಬೇಕು. ಇಂತಹ ನಡೆಗೆ ಕಡಿವಾಣ ಹಾಕಬೇಕು’ ಎಂದು ವಿಷಯ ಪ್ರಸ್ತಾಪಿಸಿದರು.

ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್‌, ‘ಇಂತಹ ಒಂದು ಅನಗತ್ಯ ಪರಂಪರೆಯನ್ನು ಆರಂಭಿಸಿದ್ದು ವಿರೋಧ ಪಕ್ಷದವರು. ವಿಧಾನಸಭಾಧ್ಯಕ್ಷರ ವಿರುದ್ಧ, ಮಾಜಿ ಸಭಾಧ್ಯಕ್ಷರು ಸುದ್ದಿಗೋಷ್ಠಿ ನಡೆಸಿ ಆರೋಪಗಳನ್ನು ಮಾಡಿದರು. ಅದನ್ನೇ ಈ ಸದನದ ಸದಸ್ಯರೂ ಮಾಡಿದ್ದಾರೆ. ಎರಡನ್ನೂ ಒಪ್ಪಿಕೊಳ್ಳಬೇಕಾಗಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.