ADVERTISEMENT

ಹೆಚ್ಚುತ್ತಿದೆ ಅಪಘಾತ ಪ್ರಕರಣ: ಹೆದ್ದಾರಿಯಲ್ಲಿ ವನ್ಯಜೀವಿಗಳ ಬಲಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 22:15 IST
Last Updated 22 ಫೆಬ್ರುವರಿ 2023, 22:15 IST
ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಸಮೀಪದ ಹೆದ್ದಾರಿಯಲ್ಲಿ ಮೃತಪಟ್ಟಿರುವ ಚಿರತೆ.
ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಸಮೀಪದ ಹೆದ್ದಾರಿಯಲ್ಲಿ ಮೃತಪಟ್ಟಿರುವ ಚಿರತೆ.   

ಚಿತ್ರದುರ್ಗ: ನಗರದ ಹೊರವಲಯದಲ್ಲಿ ನಿರ್ಮಾಣವಾಗಿರುವ ಪುಣೆ–ಬೆಂಗಳೂರು ಆರು ಪಥದ ರಾಷ್ಟ್ರೀಯ ಹೆದ್ದಾರಿಯ ನೂತನ ಬೈಪಾಸ್‌ ವನ್ಯಜೀವಿಗಳನ್ನು ಬಲಿ ಪಡೆಯುತ್ತಿದೆ. ನಿರಂತರವಾಗಿ ಅಪಘಾತ ಸಂಭವಿಸುತ್ತಿದ್ದರೂ ವನ್ಯಜೀವಿ ಸಂರಕ್ಷಣೆಗೆ ಹೆದ್ದಾರಿ ಪ್ರಾಧಿಕಾರ ಮುಂದಾಗದಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಬೈಪಾಸ್‌ನಲ್ಲಿ ವಾಹನ ಸಂಚಾರ ಆರಂಭಗೊಂಡ ಎರಡು ವರ್ಷಗಳಲ್ಲಿ ವನ್ಯಜೀವಿಗಳಿಗೆ ಅಪಘಾತವಾದ ಎಂಟು ಪ್ರಕರಣಗಳು ದಾಖಲಾಗಿವೆ. ಐದು ಚಿರತೆ ಹಾಗೂ ಎರಡು ಕರಡಿ ಮೃತಪಟ್ಟಿದ್ದು, ಗಾಯಗೊಂಡಿದ್ದ ಒಂದು ಕರಡಿಗೆ ಚಿಕಿತ್ಸೆ ನೀಡಲಾಗಿದೆ. ನರಿ, ಮೊಲ, ಪುನುಗುಬೆಕ್ಕು ಸೇರಿ ಇತರ ವನ್ಯಜೀವಿಗಳೂ ಇಲ್ಲಿ ಪ್ರಾಣ ಕಳೆದುಕೊಂಡಿವೆ.

ಚಿತ್ರದುರ್ಗ ನಗರ ಬೆಳೆದಿದ್ದರಿಂದ ತಾಲ್ಲೂಕಿನ ಸೀಬಾರದಿಂದ ಕ್ಯಾದಿಗೆರೆವರೆಗಿನ ಸುಮಾರು 20 ಕಿ.ಮೀ ಬೈಪಾಸ್‌ ನಿರ್ಮಿಸಲಾಗಿದೆ. ಈ ಬೈಪಾಸ್‌ ಸಮೀಪದಲ್ಲಿ ಚಿಕ್ಕ ಗುಡ್ಡ, ಬೆಟ್ಟಗಳು ಇವೆಯಾದರೂ ಇದನ್ನು ಅರಣ್ಯ ಪ್ರದೇಶವೆಂದು ಪರಿಗಣಿಸಿಲ್ಲ. ವನ್ಯಜೀವಿ ಚಟುವಟಿಕೆ ಗಮನಿಸದೇ ಹೆದ್ದಾರಿ ನಿರ್ಮಿಸಿರುವುದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಹೆದ್ದಾರಿ ದಾಟಲು ಸರಿಯಾದ ಮಾರ್ಗಗಳು ಕಾಣದೇ ಕಾಡುಪ್ರಾಣಿಗಳು ವಾಹನಗಳಿಗೆ ಸಿಲುಕುತ್ತಿವೆ.

ADVERTISEMENT

ರಾತ್ರಿ ಅಥವಾ ನಸುಕಿನ ವೇಳೆ ಸಂಚರಿಸುವ ವನ್ಯಜೀವಿಗಳು ಈ ಹೆದ್ದಾರಿಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿವೆ. ಚಿರತೆ ಮತ್ತು ಕರಡಿ ಮೃತಪಟ್ಟ ಪ್ರಕರಣಗಳನ್ನು ಮಾತ್ರ ಅರಣ್ಯ ಇಲಾಖೆ ದಾಖಲಿಸಿಕೊಂಡಿದೆ. ಕರಡಿ ಮೃತಪಟ್ಟ ಪ್ರಕರಣವೊಂದರಲ್ಲಿ ಡಿಕ್ಕಿ ಹೊಡೆದ ವಾಹನ ಪತ್ತೆಯಾಗಿದೆ. ಉಳಿದ ಪ್ರಕರಣಗಳಲ್ಲಿ ಅಪಘಾತಕ್ಕೆ ಕಾರಣವಾದ ವಾಹನಗಳು ಸಿಕ್ಕಿಲ್ಲ. ಪೊಲೀಸ್‌ ಹಾಗೂ ಅರಣ್ಯ ಇಲಾಖೆ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.

‘ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ವನ್ಯಜೀವಿ ಇರುವುದು ಗಮನಕ್ಕೆ ಬಂದಿರಲಿಲ್ಲ. ಬೈಪಾಸ್‌ನಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಗೆ ಸಿಲುಕಿ ನಾಯಿ, ಬೆಕ್ಕು ಸೇರಿ ಇತರ ಪ್ರಾಣಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಈ ಮಾಂಸದ ವಾಸನೆಗೆ ಚಿರತೆ ಬರುವ ಸಾಧ್ಯತೆ ಹೆಚ್ಚು. ಈ ಸಂದರ್ಭದಲ್ಲಿ ಮತ್ತೊಂದು ವಾಹನಕ್ಕೆ ಇವು ಬಲಿಯಾಗುತ್ತಿವೆ. ಇವುಗಳ ಆವಾಸತಾಣವನ್ನು ನಿಖರವಾಗಿ ಪತ್ತೆ ಮಾಡಿ ಪರಿಹಾರ ಕ್ರಮಗಳ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗ್ರೀನ್‌ ಕಾರಿಡಾರ್‌ ಅಗತ್ಯ: ರಘುರಾಮ್‌

‘ನೂತನ ಬೈಪಾಸ್‌ ನಿರ್ಮಿಸುವ ಮುನ್ನ ವನ್ಯಜೀವಿ ಚಟುವಟಿಕೆ ಪರಿಶೀಲಿಸುವ ಅಗತ್ಯವಿತ್ತು. ವನ್ಯಜೀವಿ ಸಂಚಾರಕ್ಕೆ ಪರಿಸರಸ್ನೇಹಿ ವ್ಯವಸ್ಥೆಗಳನ್ನು ಕೈಗೊಂಡಿದ್ದರೆ ಚಿರತೆ ಹಾಗೂ ಕರಡಿ ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ’ ಎನ್ನುತ್ತಾರೆ ಚಿತ್ರದುರ್ಗ ವಿಭಾಗದ ವನ್ಯಜೀವಿ ವಾರ್ಡನ್ ಎಚ್‌.ಜಿ. ರಘುರಾಮ್‌.

‘ಹೆದ್ದಾರಿ ದಾಟುವ ವನ್ಯಜೀವಿಗಳಿಗೆ ಗ್ರೀನ್‌ ಕಾರಿಡಾರ್‌ ವ್ಯವಸ್ಥೆ ಆಗಬೇಕಿದೆ. ಪರಿಸರಸ್ನೇಹಿ ಮೇಲ್ಸೇತುವೆ ಹಾಗೂ ಅಂಡರ್‌ ಪಾಸ್‌ ನಿರ್ಮಿಸಿದರೆ ಅನುಕೂಲವಾಗಲಿದೆ. ಒಮ್ಮೆ ಇಂತಹ ಕಾರಿಡಾರ್‌ನಲ್ಲಿ ವನ್ಯಜೀವಿ ಸಂಚರಿಸಿದರೆ ಹೆದ್ದಾರಿಯಲ್ಲಿ ವಾಹನಗಳಿಗೆ ಸಿಲುಕುವುದಿಲ್ಲ. ಈ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರ ಸ್ಪಂದಿಸಬೇಕಿದೆ’ ಎಂಬುದು ಅವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.