ADVERTISEMENT

ಕೈದಿಗಳಿಗೆ ಮೊಬೈಲ್‌ ಪೂರೈಕೆ ಪ್ರಕರಣ: ಉಗ್ರ ಟಿ.ನಾಸೀರ್‌ ಪರಾರಿಯಾಗಲು ಸಂಚು

ASI, ವೈದ್ಯನ ವಿರುದ್ಧ 2ನೇ ದೋಷಾರೋಪ ಪಟ್ಟಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 0:30 IST
Last Updated 3 ಜನವರಿ 2026, 0:30 IST
ಚಾನ್‌ ಪಾಷಾ 
ಚಾನ್‌ ಪಾಷಾ    

ಬೆಂಗಳೂರು: ಲಷ್ಕರ್‌–ಎ–ತಯಬಾ ಭಯೋತ್ಪಾದನೆ ಸಂಘಟನೆ ಜತೆಗೆ ಸೇರಿಕೊಂಡು ಕಾರಾಗೃಹದಲ್ಲಿರುವ ಕೈದಿಗಳನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಿದ್ದ ಹಾಗೂ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಪ್ರಕರಣದಲ್ಲಿ ಬಂಧಿತ ಮೂವರು ಆರೋಪಿಗಳ ವಿರುದ್ಧ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು, ಇಲ್ಲಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಗುರುವಾರ ಎರಡನೇ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನ ವೈದ್ಯ ನಾಗರಾಜ್, ಎಎಸ್‌ಐ ಚಾನ್ ಪಾಷಾ ಮತ್ತು ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಜುನೈದ್ ಅಹಮದ್‌ ತಾಯಿ ಅನಿಸಾ ಫಾತೀಮಾ ಅವರನ್ನು ಕೆಲವು ತಿಂಗಳ ಹಿಂದೆ ಎನ್‌ಐಎ ಬಂಧಿಸಿತ್ತು. 

ಮೂವರ ವಿರುದ್ಧ ಸ್ಫೋಟಕ ವಸ್ತುಗಳ ತಡೆ ಕಾಯ್ದೆ, ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಕರ್ನಾಟಕ ಕಾರಾಗೃಹ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. 

ADVERTISEMENT

ನಾಸೀರ್‌ ತಪ್ಪಿಸಿಕೊಳ್ಳಲು ಸಂಚು:

2008ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದಲ್ಲಿ ಜೀವಾವಾಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಟಿ.ನಾಸೀರ್‌ನನ್ನು ಜೈಲಿನಿಂದ ನ್ಯಾಯಾಲಯಕ್ಕೆ ಹೋಗುವ ದಾರಿಯಲ್ಲಿ ತಪ್ಪಿಸಿಕೊಳ್ಳಲು ಅನುಕೂಲ ಆಗುವಂತೆ ಬಂಧಿತರು ಸಂಚು ರೂಪಿಸಿದ್ದರು ಎಂಬುದು ತನಿಖೆ ವೇಳೆ ಪತ್ತೆಯಾಗಿದೆ.

‘ಆರೋಪಿಗಳ ಪೈಕಿ ಅನಿಸ್ ಫಾತಿಮಾ ಅವರು ನಾಸೀರ್ ತಪ್ಪಿಸಿಕೊಳ್ಳಲು ಸಂಚು ರೂಪಿಸುವುದರ ಜತೆಗೆ ಆರ್ಥಿಕ ಸಹಾಯ ಮಾಡುತ್ತಿದ್ದರು. ತನ್ನ ಪುತ್ರ ಜುನೈದ್ ಅಹಮದ್‌ ಸೂಚನೆ ಮೇರೆಗೆ ಹ್ಯಾಂಡ್ ಗ್ರೆನೇಡ್‌ಗಳು, ವಾಕಿ ಟಾಕಿಗಳನ್ನು ಇತರೆ ಶಂಕಿತರಿಗೆ ಪೂರೈಕೆ ಮಾಡಲು ಸೂಚಿಸಿದ್ದರು. ಅಲ್ಲದೆ, ಜೈಲಿನಲ್ಲಿ ಶಂಕಿತರು ಪರಸ್ಪರ ಮಾತನಾಡಲು ಮೊಬೈಲ್‌ ಪೂರೈಕೆ ಮಾಡಿದ್ದರು. ಜುನೈದ್ ಅಹಮದ್ ದುಬೈಗೆ ಪರಾರಿಯಾಗಲು ನೆರವು ನೀಡಿದ್ದರು’ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ.

‘ನಗರ ಸಶಸ್ತ್ರ ಮೀಸಲು ಪಡೆಯ (ದಕ್ಷಿಣ ವಿಭಾಗ) ಎಎಸ್ಐ ಆಗಿದ್ದ ಚಾನ್ ಪಾಷಾ ಅವರು ಕೈದಿಗಳ ಬೆಂಗಾವಲು ಕರ್ತವ್ಯದಲ್ಲಿದ್ದಾಗ ಟಿ.ನಾಸೀರ್‌ನನ್ನು ನ್ಯಾಯಾಲಯಕ್ಕೆ ಕರೆದೊಯ್ಯುವ ಸಮಯ, ಮಾರ್ಗದ ವಿವರಗಳನ್ನು ಆರೋಪಿಗಳು ಹಂಚಿಕೊಳ್ಳುತ್ತಿದ್ದರು. ಇದಕ್ಕಾಗಿ ಮತ್ತೊಬ್ಬ ಆರೋಪಿ ಸಲ್ಮಾನ್ ಖಾನ್‌ನಿಂದ ಪ್ರತಿಫಲವನ್ನು ಪಡೆದುಕೊಂಡಿದ್ದರು’ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ.

‘ಮತ್ತೊಬ್ಬ ಆರೋಪಿ ಜೈಲಿನ ವೈದ್ಯ ನಾಗರಾಜ್, ಜೈಲಿಗೆ ಅಕ್ರಮವಾಗಿ ಮೊಬೈಲ್‌ಗಳನ್ನು ಕಳ್ಳಸಾಗಣೆ ಮಾಡಿ ಟಿ.ನಾಸೀರ್ ಸೇರಿ ಇತರೆ ಕೈದಿಗಳಿಗೆ ಮಾರಾಟ ಮಾಡಿದ್ದರು. ನಾಸೀರ್‌ಗೆ ನಾಲ್ಕು ಮೊಬೈಲ್‌ಗಳನ್ನು ಮಾರಾಟ ಮಾಡಿದ್ದು, ಆತನಿಂದ ಹಣ ಪಡೆದುಕೊಂಡಿದ್ದರು. ನಾಸೀರ್‌ ಉಗ್ರ ಎಂಬುದು ಗೊತ್ತಿದ್ದರೂ ಭಯೋತ್ಪಾದನಾ ಚಟುವಟಿಕೆಗೆ ಸಂಚು ರೂಪಿಸಲು ಸಹಕಾರ ನೀಡಿದ್ದರು’ ಎಂಬುದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಅನಿಸ್ ಫಾತಿಮಾ 

ವಿದೇಶದಲ್ಲಿ ಸೂತ್ರಧಾರ

2023ರ ಅಕ್ಟೋಬರ್‌ನಲ್ಲಿ ಸಿಸಿಬಿ ಪೊಲೀಸರು 7 ಮಂದಿ ಉಗ್ರರನ್ನು ಬಂಧಿಸಿದ್ದರು. ತನಿಖೆ ಮುಂದುವರಿಸಿದ್ದಾಗ ಆರ್‌ಟಿ ನಗರದಲ್ಲಿದ್ದ ಉಗ್ರನೊಬ್ಬನ ಮನೆಯಲ್ಲಿ ಜೀವಂತ ಗ್ರೆನೇಡ್ ಶಸ್ತ್ರಾಸ್ತ್ರಗಳು ವಾಕಿ ಟಾಕಿಗಳು ಡಿಜಿಟಲ್ ಸಾಧನಗಳು ಸೇರಿದಂತೆ ಇತರೆ ಸ್ಫೋಟಕ ವಸ್ತುಗಳು ಪತ್ತೆ ಆಗಿದ್ದವು. ತನಿಖೆ ನಡೆಸಿದಾಗ ಪ್ರಕರಣದ ಸೂತ್ರಧಾರ ಜುನೈದ್ ಅಹಮದ್‌ ದುಬೈನಲ್ಲಿ ತರೆಮರೆಸಿಕೊಂಡಿದ್ದಾನೆ ಎಂಬುದು ಪತ್ತೆಯಾಗಿತ್ತು. ಈ ಸಂಬಂಧ ಆರ್.ಟಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಎನ್‌ಐಎಗೆ ವಹಿಸಲಾಗಿತ್ತು. ನಂತರ ಪರಾರಿಯಾಗಿದ್ದ ಜುನೈದ್ ಅಹಮದ್‌ ಸೇರಿ 9 ಆರೋಪಿಗಳ ವಿರುದ್ಧ ಈ ಹಿಂದೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಜುನೈದ್ ಅಹಮದ್ ತಾಯಿ ಅನಿಸಾ ಫಾತೀಮಾ ಅವರನ್ನು ಕೆಲವು ತಿಂಗಳ ಹಿಂದೆ ಬಂಧಿಸಲಾಗಿತ್ತು.

ನಾಗರಾಜ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.