ಸಾಂಪ್ರದಾಯಿಕ ವಿಧಾನದ ಮೂಲಕ ಕೊಲ್ಹಾಪುರಿ ಚಪ್ಪಲಿ ತಯಾರಿಸುತ್ತಿರುವ ಕಾರ್ಮಿಕರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಇಟಲಿಯ ‘ಪ್ರಾಡಾ’ ಅಥವಾ ಇನ್ಯಾವುದೇ ಕಂಪನಿ ಜತೆಗೆ ಕೊಲ್ಹಾಪುರಿ ಚಪ್ಪಲಿಗಳ ವಿನ್ಯಾಸದ ವಿಚಾರದಲ್ಲಿ ವ್ಯವಹಾರ, ಸಂವಹನ ನಡೆಸುವ ಹಕ್ಕು ಕರ್ನಾಟಕದ ಲಿಡ್ಕರ್ ಮತ್ತು ಮಹಾರಾಷ್ಟ್ರದ ಲಿಡ್ಕಾಂ ಸಂಸ್ಥೆಗೆ ಮಾತ್ರ ಇದೆ’ ಎಂದು ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ತಿಳಿಸಿದೆ.
ಕೊಲ್ಹಾಪುರಿ ಚಪ್ಪಲಿಗಳ ವಿನ್ಯಾಸಕ್ಕೆ ಕರ್ನಾಟಕದ ಲಿಡ್ಕರ್ ಮತ್ತು ಮಹಾರಾಷ್ಟ್ರದ ಲಿಡ್ಕಾಂ ಸಂಸ್ಥೆಗಳು ಜಂಟಿಯಾಗಿ ಭೌಗೋಳಿಕ ಗುರುತ್ವ (ಜಿಯಾಗ್ರಾಫಿಕಲ್ ಇಂಡಿಕೇಷನ್–ಜಿಐ) ನೋಂದಣಿ ಹೊಂದಿವೆ. ಕೊಲ್ಹಾಪುರಿ ಚಪ್ಪಲಿಗಳನ್ನೇ ಹೋಲುವಂತಹ ‘ಸಮ್ಮರ್ ಸ್ಯಾಂಡಲ್’ಗಳನ್ನು ಪ್ರಾಡಾ ಈಚೆಗೆ ಪ್ರದರ್ಶಿಸಿತ್ತು.
ಪ್ರಾಡಾ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಕೆಲವು ವಕೀಲರು ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್, ‘ಜಿಐ ಹಕ್ಕು ಹೊಂದಿರುವವರು ಮಾತ್ರವೇ ಅರ್ಜಿ ಸಲ್ಲಿಸಬಹುದು’ ಎಂದು ಹೇಳಿತ್ತು.
ಈ ಬಗ್ಗೆ ಜಂಟಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಲಿಡ್ಕರ್ ಮತ್ತು ಲಿಡ್ಕಾಂ, ‘ಕೊಲ್ಹಾಪುರಿ ಚಪ್ಪಲಿಗಳ ವಿಚಾರದಲ್ಲಿ ಕಾನೂನು ಹೋರಾಟ ನಡೆಸುವ ಮತ್ತು ಪ್ರಾಡಾ ಜತೆಗೆ ಮಾತುಕತೆ ನಡೆಸುವ ಹಕ್ಕು ನಮಗೆ ಮಾತ್ರ ಇವೆ. ಇದರಲ್ಲಿ ಅನ್ಯ ಸಂಸ್ಥೆಗಳು ಅಥವಾ ವ್ಯಕ್ತಿಗಳು ಭಾಗಿಯಾಗುವ ಅವಶ್ಯ ಇಲ್ಲ’ ಎಂದು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.