ADVERTISEMENT

ಚಿಮೂ ಮತ್ತು ಕನ್ನಡದ ಸೊಲ್ಲು

ರಾ.ನಂ.ಚಂದ್ರಶೇಖರ
Published 11 ಜನವರಿ 2020, 21:18 IST
Last Updated 11 ಜನವರಿ 2020, 21:18 IST
ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಉರ್ದು ವಾರ್ತೆಯನ್ನು ವಿರೋಧಿಸಿ ಕೈಗೊಂಡ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಚಿದಾನಂದಮೂರ್ತಿ (ಚಿತ್ರ– ಪ್ರಜಾವಾಣಿ ಆರ್ಕೈವ್ಸ್)
ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಉರ್ದು ವಾರ್ತೆಯನ್ನು ವಿರೋಧಿಸಿ ಕೈಗೊಂಡ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಚಿದಾನಂದಮೂರ್ತಿ (ಚಿತ್ರ– ಪ್ರಜಾವಾಣಿ ಆರ್ಕೈವ್ಸ್)   
""

ಚಿಮೂ ಮತ್ತು ಕನ್ನಡ ಚಳವಳಿಗೆ ಬಿಡಿಸಲಾಗದ ನಂಟು.

ಪುಸ್ತಕದ ಹುಳುವಾಗಿದ್ದ ಅವರು ಯಾವತ್ತೂ ಹೊರಗೆ ಬಂದವರಲ್ಲ. ಅದು 1979ರ ಸಮಯ. ಆಗಷ್ಟೇ ಅವರು ಅಮೆರಿಕದಿಂದ ಕರ್ನಾಟಕಕ್ಕೆ ಬಂದಿದ್ದರು. ಬೆಂಗಳೂರಿನ ರೆಕ್ಸ್‌ ಥಿಯೇಟರ್‌ನಲ್ಲಿ ಇಂಗ್ಲಿಷ್‌ನ ‘ಬಸ್‌’ ಎಂಬ ಮಕ್ಕಳ ಸಿನಿಮಾ ಪ್ರದರ್ಶನ ಕಾಣುತ್ತಿತ್ತು.

ತಮ್ಮ ಮಕ್ಕಳೊಟ್ಟಿಗೆ ಆ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಿದ್ದರು. ಟಿಕೆಟ್‌ ಕೊಡುವಂತೆ ಕೌಂಟರ್‌ನಲ್ಲಿ ಕುಳಿತವನಿಗೆ ಕನ್ನಡದಲ್ಲಿ ಕೇಳಿದರು. ಆತ ಇವರ ಮಾತು ಕೇಳಿ ರೇಗಿದ. ಗೌರವವನ್ನೂ ಕೊಡಲಿಲ್ಲ. ಪ್ರೇಕ್ಷಕರ ಸಾಲಿನಲ್ಲಿ ನಿಂತಿದ್ದ ಚಿಮೂ ಅವರನ್ನು ಹೊರಗೆ ದಬ್ಬಿ ಎಂದು ತನ್ನ ಸಿಬ್ಬಂದಿಗೆ ಆಜ್ಞಾಪಿಸಿದ. ಸಿಬ್ಬಂದಿಯ ಅಟ್ಟಹಾಸಕ್ಕೆ ಅವರು ಸಾಲಿನಿಂದ ಹೊರಗೆ ಬಿದ್ದರು. ಆಗಲೇ ಕನ್ನಡ ಏಕೀಕರಣದ ನಂತರ ರಾಜಧಾನಿಯ ಕನ್ನಡಿಗರು ಎದುರಿಸುತ್ತಿದ್ದ ಅನಾಥಪ್ರಜ್ಞೆಯು ಚಿಮೂ ಅವರಿಗೂ ಕಾಡಿತು. ಆ ಘಟನೆ ನಂತರ ಅವರು ಸುಮ್ಮನೇ ಕೂರಲಿಲ್ಲ. ‘ಪ್ರಜಾವಾಣಿ’ಯ ವಾಚಕರವಾಣಿಗೆ ಪತ್ರ ಬರೆದರು. ಬಳಿಕ ಬೆಂಗಳೂರಿನ ಎಂ.ಜಿ. ರಸ್ತೆಯ ಗಾಂಧಿ ಪ್ರತಿಮೆ ಮುಂದೆ ಧರಣಿ ಕುಳಿತರು. ಅವರು ಕನ್ನಡ ಚಳವಳಿ ಪ್ರವೇಶಿಸಿದ್ದು ಅಲ್ಲಿಂದಲೇ.

ADVERTISEMENT

ಬಳಿಕ ಕನ್ನಡ ಉಳಿಸಿ ಕ್ರಿಯಾಸಮಿತಿ ರಚಿಸಿದರು. ಅದು ಕನ್ನಡದ ಉಳಿವು, ಬೆಳವಣಿಗೆಗೆ ನೀಡಿರುವ ಕೊಡುಗೆ ಎಲ್ಲರಿಗೂ ಗೊತ್ತಿದೆ. ಸಮಿತಿ ಮೂಲಕ ಕನ್ನಡದಲ್ಲಿಯೇ ವ್ಯವಹರಿಸಬೇಕು ಎಂದು ಕನ್ನಡಿಗರಿಗೆ ಕರಪತ್ರ ಹಂಚಿದರು. ಕನ್ನಡ ರಾಜ್ಯೋತ್ಸವದಂದು ಆರಂಭವಾದ ಈ ಅಭಿಯಾನ ದೊಡ್ಡಮಟ್ಟದ ಯಶಸ್ಸು ಕಂಡಿತು.

ಚಿಮೂ ಮುನ್ನೆಲೆಗೆ ಬಂದಿದ್ದು ಗೋಕಾಕ್‌ ಚಳವಳಿಯ ಕಾಲದಲ್ಲಿ. ಆಗ ಸಾಹಿತಿಗಳು ಮತ್ತು ಕಲಾವಿದರ ಬಳಗ ಹುಟ್ಟುಕೊಂಡಿತು. ಅದರ ಪ್ರಧಾನ ಸಂಚಾಲಕರಾಗಿ ಅವರು ದುಡಿದರು. ಎಲ್ಲ ಸಾಹಿತಿಗಳನ್ನೂ ಒಟ್ಟುಗೂಡಿಸಲು ಶ್ರಮಿಸಿದರು. ಈ ಚಳವಳಿ ಮೂಲಕವೇ ಕನ್ನಡದ ಸಮಸ್ಯೆ ಬಗೆಹರಿಯುವುದಿಲ್ಲ ಎನ್ನುವ ಅರಿವು ಅವರಿಗಿತ್ತು. ಹಾಗಾಗಿಯೇ, ಸಾಹಿತಿಗಳು ಮತ್ತು ಕಲಾವಿದರ ಬಳಗವನ್ನು ಮುಂದುವರಿಸಲು ಅವರು ತೀರ್ಮಾನಿಸಿದ್ದು. ಪ್ರತಿ ಬುಧವಾರ ಬಳಗದ ಸಭೆ ನಡೆಯುತ್ತಿತ್ತು. ಅಲ್ಲಿ ಕನ್ನಡ, ಕನ್ನಡಿಗರ ಸಮಸ್ಯೆ ಕುರಿತು ಸುದೀರ್ಘ ಚರ್ಚೆ ನಡೆಯುತ್ತಿತ್ತು.

ಕನ್ನಡ ಚಳವಳಿ ಕೇವಲ ನುಡಿಗಷ್ಟೇ ಸಂಬಂಧಿ ಸಿದ್ದಲ್ಲ. ಕನ್ನಡಿಗರ ಜನಜೀವನಕ್ಕೆ ಎದುರಾದ ಹಲವು ಬಿಕ್ಕಟ್ಟುಗಳಿಗೂ ಪ್ರತಿಕ್ರಿಯಿಸಬೇಕು. ಕೇವಲ ಮಾತನಾಡಿದರೆ ಸಾಲದು; ಎಲ್ಲದ್ದಕ್ಕೂ ಹೋರಾಟ ಒಂದೇ ಪರಿಹಾರವಾಗುವುದಿಲ್ಲ ಎನ್ನುವುದು ಅವರಿಗೆ ಬಹುಬೇಗ ವೇದ್ಯವಾಯಿತು. ಆಗಲೇ, ಅವರು ಹೋರಾಟದ ಸ್ವರೂಪವನ್ನು ಬದಲಾಯಿಸಲು ನಿರ್ಧರಿಸಿದ್ದು.

ಶಿಕ್ಷಣ ಮಾಧ್ಯಮದಲ್ಲೂ ಕನ್ನಡದ ಉಳಿವಿಗೆ ಪಣತೊಟ್ಟರು. ಬಳಗದ ಸಭೆಯಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆಯೂ ಚರ್ಚೆ ಶುರುವಾಯಿತು. ಆಗ ಅವರಿಗೆ ಕನ್ನಡಿಗರು ಎದುರಿಸುತ್ತಿರುವ ಉದ್ಯೋಗದ ಸಮಸ್ಯೆಯ ಅರಿವಾಯಿತು. ಸರೋಜಿನಿ ಮಹಿಷಿ ವರದಿಯ ಜಾರಿಗೆ ಆಗ್ರಹಿಸಿ ಏಳು ಹಕ್ಕೊತ್ತಾಯಗಳನ್ನು ಇಟ್ಟುಕೊಂಡು 49 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದು ಸ್ಮರಣೀಯವಾದುದು. ಅದನ್ನು ಕನ್ನಡಿಗರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವಂತೆ ಆಗ್ರಹಿಸಿ ಅವರದು ಅವಿರತ ಹೋರಾಟ.

ಮತ್ತೆ ಅವರ ಹೋರಾಟ ಕನ್ನಡದ ನಾಮಫಲಕ ಅಳವಡಿಕೆಯತ್ತ ಹೊರಳಿತು. ತಮಿಳುನಾಡಿನಲ್ಲಿ ತಮಿಳು ಭಾಷೆಯ ನಾಮಫಲಕಗಳನ್ನು ಕಡ್ಡಾಯಗೊಳಿಸಲಾಗಿದೆ. ಕರ್ನಾಟಕದಲ್ಲಿ ಕನ್ನಡದಲ್ಲಿಯೇ ನಾಮಫಲಕ ಅಳವಡಿಸಬೇಕು ಎನ್ನುವುದು ಅವರ ಆಗ್ರಹವಾಗಿತ್ತು. ತಮಿಳುನಾಡಿನಿಂದ ಆ ಆದೇಶ ತರಿಸಿಕೊಂಡು ಆಗಿನ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು. ಕನ್ನಡದಲ್ಲಿಯೇ ನಾಮಫಲಕ ಅಳವಡಿಸಬೇಕು ಎಂಬ ನಿಯಮ ಕಡ್ಡಾಯವಾಗಿದ್ದು, ಅವರ ಹೋರಾಟದ ಫಲಶ್ರುತಿ.

ಬಹುತೇಕರಿಗೆ ಈ ವಿಷಯ ತಿಳಿದಿಲ್ಲ ಅನಿಸುತ್ತದೆ. ಎಂಬತ್ತರ ದಶಕದಲ್ಲಿ ಸ್ಥಳೀಯ ಕ್ರೈಸ್ತರ ಭಾಷೆಯ ಸಮಸ್ಯೆ ಆಲಿಸಲು ವ್ಯಾಟಿಕನ್‌ನಿಂದ ಪೋಪ್‌ ನಿಯೋಗ ಇಲ್ಲಿಗೆ ಬಂದಿತ್ತು. ಕರ್ನಾಟಕದಲ್ಲಿ ಕ್ಯಾಥೋಲಿಕ್‌ ಕ್ರೈಸ್ತರಿಗೆ ಕನ್ನಡದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಚಿಮೂ, ಡಾ.ಜಿ. ರಾಮಕೃಷ್ಣ, ಸುಮತೀಂದ್ರ ನಾಡಿಗ ಅವರು ನಿಯೋಗಕ್ಕೆ ಮನವಿ ಸಲ್ಲಿಸಿದರು.

ಚಿಮೂ ಸ್ಥಾಪಿಸಿದ ಕನ್ನಡ ಶಕ್ತಿಕೇಂದ್ರದ ಕಾರ್ಯಸಾಧನೆ ಅನನ್ಯವಾದುದು. ಅದು ರಾಜ್ಯಮಟ್ಟದ ಸಂಘಟನೆ. ಬೀದರ್‌ನಲ್ಲಿ ಕನ್ನಡಿಗರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಶಕ್ತಿಕೇಂದ್ರದಿಂದ ಅಧ್ಯಯನ ನಡೆಸಲಾಯಿತು.

ಕಾವೇರಿ ಗಲಭೆಯಾದಾಗ ಗಲಭೆ ಸಂಬಂಧ ಅಧ್ಯಯನ ನಡೆಸಿ ನೈಜ ವರದಿ ತಯಾರಿಸಿದರು. ಕನ್ನಡ ಚಳವಳಿಯಲ್ಲಿ ಅಧ್ಯಯನ ಪರಂಪರೆಯನ್ನು ಹುಟ್ಟಿ ಹಾಕಿದ ಶ್ರೇಯಸ್ಸು ಚಿಮೂಗೆ ಸಲ್ಲಬೇಕು. ಕನ್ನಡಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ ಚಿಮೂ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆಗದೇ ಹೋದದ್ದು ವಿಪರ್ಯಾಸವೇ ಸರಿ.

ಕೇಂದ್ರ ಸರ್ಕಾರ ತಮಿಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿತು. ಆಗ ಚಿಮೂ ಸುಮ್ಮನೆ ಕೂರಲಿಲ್ಲ. ತಮಿಳಿನಷ್ಟೇ ಕನ್ನಡ ಕೂಡ ಪ್ರಾಚೀನ ಭಾಷೆ. ಕನ್ನಡಕ್ಕೂ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು. ಅದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಿದ್ದು ಗಮನಾರ್ಹ. ಕನ್ನಡ ಚಳವಳಿ ರಸ್ತೆಗೆ ಸೀಮಿತವಾದಾಗಲೆಲ್ಲಾ ಅದಕ್ಕೊಂದು ಸೂಕ್ತ ದಾಖಲೆ ನೀಡಿ
ಹೋರಾಟಕ್ಕೆ ಜೀವ ತುಂಬುತ್ತಿದ್ದುದು ಅವರ ಹೆಗ್ಗಳಿಕೆ.

ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಪಾದಯಾತ್ರೆ
ಚಿಮೂ ಅವರಿಗೆ ಕನ್ನಡಕ್ಕೊಂದು ವಿಶ್ವವಿದ್ಯಾಲಯ ಬೇಕು ಎಂಬ ಹಂಬಲವಿತ್ತು. ಅದಕ್ಕಾಗಿಯೇ ಕನ್ನಡ ವಿಶ್ವವಿದ್ಯಾಲಯ ಬೇಕೆಂದು ತುಮಕೂರಿನ ಸಿದ್ಧಗಂಗಾ ಮಠದಿಂದ ಹಂಪಿವರೆಗೂ ಪಾದಯಾತ್ರೆ ನಡೆಸಿದರು. ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ಮಾದರಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂಬುದು ಅವರ ಆಗ್ರಹವಾಗಿತ್ತು. ವಿವಿ ಸ್ಥಾಪನೆ ಸಂಬಂಧ ಅವರ ಹೋರಾಟ ಅವಿಸ್ಮರಣೀಯ. ಕನ್ನಡದ ದೂರದರ್ಶನಕ್ಕೂ ಅವರು ಹೋರಾಟ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.